ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ: ಜೆಎನ್‌ಯು ವಿದ್ಯಾರ್ಥಿಗಳ ವಶ
ನವದೆಹಲಿ, ಜನವರಿ 9: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಜ. 5ರಂದು ನಡೆದ ಹಿಂಸಾಚಾರ ವಿರುದ್ಧ ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲು ಪ್ರಯತ್ನಿಸಿದ ಜೆಎನ್‌ಯು ವಿದ್ಯಾರ್ಥಿಗಳನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದೆಹಲಿಯ ಮಂಡಿ ಹೌಸ್‌ನಿಂದ ರಾಷ್ಟ್ರಪತಿಭವನಕ್ಕೆ ಗುರುವಾರ ಸಂಜೆ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು. ಮಧ್ಯಾಹ್ನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳ ಜತೆ ನಡೆದ ಜೆಎನ್‌ಯು ವಿದ್ಯಾರ್ಥಿಗಳ ಮಾತುಕತೆ ವಿಫಲವಾಗಿತ್ತು.
ಜೆಎನ್‌ಯು ಉಪ ಕುಲಪತಿ ಜಗದೀಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಇದನ್ನು ಸರ್ಕಾರ ನಿರಾಕರಿಸಿದೆ. ಉಪ ಕುಲಪತಿಯನ್ನು ವಜಾಗೊಳಿಸುವುದು ಪರಿಹಾರವಲ್ಲ. ಸಚಿವಾಲಯವು ಶೈಕ್ಷಣಿಕ ಸಮಸ್ಯೆಗಳ ಕುರಿತು ಗಮನ ಹರಿಸುತ್ತದೆಯೇ ವಿನಾ, ರಾಜಕೀಯ ವಿಷಯಗಳ ಮೇಲಲ್ಲ ಎಂದು ಸಚಿವಾಲಯದ ಕಾರ್ಯದರ್ಶಿ ಅಮಿತ್ ಖರೆ ತಿಳಿಸಿದರು. ಕುಮಾರ್ ಅವರೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದೊಂದಿಗೆ ಮಾತನಾಡುವುದಾಗಿ ಖರೆ ಹೇಳಿದರು.

'ಎಚ್‌ಆರ್‌ಡಿ ಸಚಿವಾಲಯದೊಂದಿಗೆ ನಾವು ರಾಜಿ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಉಪ ಕುಲಪತಿಯನ್ನು ವಜಾಗೊಳಿಸುವ ವಿಚಾರದಲ್ಲಿ ಅದಿನ್ನೂ ಯೋಚಿಸುತ್ತಿದೆ' ಎಂದು ಜೆಎನ್‌ಯುಎಸ್‌ಯು ಅಧ್ಯಕ್ಷೆ ಐಷ್ ಘೋಷ್ ಹೇಳಿದರು.
#WATCH Delhi Police remove women protesters while they were marching towards Rashtrapati Bhavan. Students are demanding removal of the Jawaharlal Nehru University's Vice Chancellor following Jan 5 violence in the campus. pic.twitter.com/HzT2AjkZF5
— ANI (@ANI) January 9, 2020
ಕುಲಪತಿಯನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅವರಲ್ಲಿ ಕೆಲವು ಮಹಿಳಾ ಪ್ರತಿಭಟನಾಕಾರರನ್ನು ಅಲ್ಲಿಂದ ಹೊರಹಾಕಲು ಪೊಲೀಸರು ಪ್ರಯತ್ನಿಸಿದಾಗ ತೀವ್ರ ವಾಗ್ವಾದ ನಡೆಯಿತು. ಆಗ ಪೊಲೀಸರು ಲಾಠಿಯಿಂದ ಪ್ರತಿಭಟನಾಕಾರರನ್ನು ಥಳಿಸಿದರು.
ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರು ರಾಷ್ಟ್ರಪತಿ ಭವನದ ಉತ್ತರ ಮತ್ತು ದಕ್ಷಿಣದ ಬ್ಲಾಕ್‌ಗಳಲ್ಲಿ ಬ್ಯಾರಿಕೇಡ್ ಇರಿಸಿ ಹೆಚ್ಚಿನ ಭದ್ರತೆ ನಿಯೋಜಿಸಿದ್ದರು. ರಾಷ್ಟ್ರಪತಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಉದ್ದೇಶದಿಂದ ತೆರಳುತ್ತಿದ್ದ ವಿದ್ಯಾರ್ಥಿಗಳು ಬ್ಯಾರಿಕೇಡ್ ದಾಟಲು ಪ್ರಯತ್ನಿಸಿದರು. ಆಗ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.












Click it and Unblock the Notifications