ನಿರ್ಭಯಾ ಪ್ರಕರಣ: ದೋಷಿ ವಿನಯ್ ಶರ್ಮಾ ಅರ್ಜಿ ತಿರಸ್ಕರಿಸಿದ ಸುಪ್ರೀಂ
Recommended Video
ನವದೆಹಲಿ, ಫೆಬ್ರವರಿ.14: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿ ವಿನಯ್ ಕುಮಾರ್ ಶರ್ಮಾಗೆ ಸುಪ್ರೀಂಕೋರ್ಟ್ ನಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ. ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಈ ಹಿಂದೆ ದೋಷಿ ವಿನಯ್ ಕುಮಾರ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ದೋಷಿ ಪರ ವಕೀಲ ಎ.ಪಿ.ಸಿಂಗ್ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು ಕ್ಷಮಾದಾನ ಅರ್ಜಿ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದೆ. ಅಲ್ಲದೇ ಸದೃಢವಾಗಿರುವ ದೋಷಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ವೈದ್ಯಕೀಯ ವರದಿ ಬಗ್ಗೆ ಕೋರ್ಟ್ ಉಲ್ಲೇಖ:
ದೋಷಿ ವಿನಯ್ ಕುಮಾರ್ ಶರ್ಮಾ ವೈದ್ಯಕೀಯ ವರದಿ ಪ್ರಕಾರ ದೋಷಿ ಆರೋಗ್ಯಕರವಾಗಿದ್ದು, ಆತನ ಆರೋಗ್ಯವು ಸ್ಥಿರವಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಗುರುವಾರ ದೋಷಿ ಪರ ವಾದ ಮಂಡಿಸಿದ ವಕೀಲ ಎ.ಪಿ. ಸಿಂಗ್, ತಮ್ಮ ಕಕ್ಷಿದಾರನ ಮೇಲೆ ಪೊಲೀಸರು ತಿಹಾರ್ ಜೈಲಿನಲ್ಲಿಯೇ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿರುವ ತಮ್ಮ ಕಕ್ಷಿದಾರನಿಗೆ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ಅಗತ್ಯವಿದೆ.
ದೋಷಿ ವಿನಯ್ ಶರ್ಮಾ ವೈದ್ಯಕೀಯ ಚಿಕಿತ್ಸೆಗೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ನಲ್ಲಿ ದೋಷಿ ಪರ ವಕೀಲ ಎ.ಪಿ. ಸಿಂಗ್ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಅದರ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.












Click it and Unblock the Notifications