ನಿರ್ಭಯಾ ತೀರ್ಪು ಕಾಯ್ದಿರಿಸಿದ ಹೈಕೋರ್ಟ್: ವಾದ-ಪ್ರತಿವಾದ ಹೇಗಿತ್ತು?
ನವದೆಹಲಿ, ಫೆಬ್ರವರಿ.02: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿಗಳ ಗಲ್ಲುಶಿಕ್ಷೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಕೇಂದ್ರ ಗೃಹ ಸಚಿವಾಲಯದ ಪರ ಪಟಿಯಾಲಾ ಹೌಸ್ ಕೋರ್ಟ್ ನಲ್ಲಿ ಸರ್ಕಾರದ ಸ್ಯಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಇನ್ನು, ದೋಷಿಗಳ ಪರವಾಗಿ ವಕೀಲ ಎ.ಪಿ.ಸಿಂಗ್ ವಾದ ಮಂಡಿಸಿದರು.
ಮೊದಲು ಸರ್ಕಾರದ ಪರ ವಾದಿಸಿದ ಸ್ಯಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೋಷಿಗಳು ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ದೋಷಿಗಳಿಗೆ ಅರ್ಜಿ ಸಲ್ಲಿಸಲು 14 ದಿನಗಳ ಕಾಲ ಅವಕಾಶ ನೀಡಲಾಗಿತ್ತು. ಆದರೆ, 13 ದಿನಗಳ ನಂತರ ದೋಷಿಗಳು ಕೋರ್ಟ್ ಮೊರೆ ಹೋಗಿದ್ದರು ಎಂದು ವಾದಿಸಿದ್ದಾರೆ.

ವಿಳಂಬ ನೀತಿ ಒಳಿತಲ್ಲ ಎಂದ ಸ್ಯಾಲಿಸೆಟರಿ ಜನರಲ್
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸುವಲ್ಲಿ ಮತ್ತಷ್ಟು ವಿಳಂಬ ತೋರುವುದು ಸರಿಯಲ್ಲ. ಕಾನೂನನ್ನು ದೋಷಿಗಳು ತಮ್ಮಿಷ್ಟದಂತೆ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಪ್ರಕ್ರಿಯೆಯನ್ನೇ ಶೋಷಣೆಗೆ ಒಳಪಡಿಸುತ್ತಿದ್ದಾರೆ. ನ್ಯಾಯಕ್ಕೆ ಆಗುತ್ತಿರುವ ಹಿನ್ನಡೆಯನ್ನು ಕಂಡು ದೋಷಿಗಳು ಸಂಭ್ರಮಿಸುತ್ತಿದ್ದಾರೆ. ನ್ಯಾಯಾಂಗವನ್ನೇ ಕಂಡು ನಗುತ್ತಿದ್ದಾರೆ. ಇದಕ್ಕೆ ಹೈಕೋರ್ಟ್ ಕಡಿವಾಣ ಹಾಕಬೇಕು. ಆದಷ್ಟು ಬೇಗ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ವಾದಿಸಿದರು.

ಕ್ಷಮಾದಾನ ಮತ್ತು ಮೇಲ್ಮನವಿ ಅರ್ಜಿ ಒಂದೇ ಅಲ್ಲ
ದೆಹಲಿ ಜೈಲು ಪ್ರಾಧಿಕಾರದ ನಿಯಮದ ಪ್ರಕಾರ ಒಂದು ಪ್ರಕರಣದ ದೋಷಿಗಳು ಸಲ್ಲಿಸಿದ ಮೇಲ್ಮನವಿ ಅರ್ಜಿ ಬಾಕಿ ಇರುವಂತೆ ಮರಣದಂಡನೆ ವಿಧಿಸುವಂತಿಲ್ಲ. ಆದರೆ ಮೇಲ್ಮನವಿ ಅರ್ಜಿ ಮತ್ತು ಕ್ಷಮಾದಾನ ಅರ್ಜಿ ಎರಡೂ ಒಂದೇ ಅಲ್ಲ. ಕ್ಷಮಾದಾನ ಅರ್ಜಿಯೇ ಬೇರೆ, ಮೇಲ್ಮನವಿ ಅರ್ಜಿಯೇ ಬೇರೆಯಾಗಿದ್ದು, ಎರಡೂ ಒಂದೇ ನಿಯಮದ ಅಡಿ ಬರುವುದಿಲ್ಲ. ಒಬ್ಬ ದೋಷಿಯ ಹಿನ್ನೆಲೆಯನ್ನು ನೋಡಿಕೊಂಡು ಕ್ಷಮಾದಾನ ನೀಡುವುದು ರಾಷ್ಟ್ರಪತಿಗಳ ವಿವೇಚನೆಗೆ ಬಿಟ್ಟಿರುತ್ತದೆ. ಈ ಅಂಶವನ್ನು ಇಟ್ಟುಕೊಂಡು ಉಳಿದ ದೋಷಿಗಳ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಬಾರದು ಎಂದು ತುಷಾರ್ ಮೆಹ್ತಾ ವಾದಿಸಿದ್ದಾರೆ.

ತೆಲಂಗಾಣ ಪ್ರಕರಣ ಉಲ್ಲೇಖಿಸಿದ ತುಷಾರ್ ಮೆಹ್ತಾ
ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಕಾನೂನು ವ್ಯವಸ್ಥೆಯ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿದ್ದಾರೆ. ಈ ಹಿಂದೆ ತಲಂಗಾಣದಲ್ಲಿ ಅತ್ಯಾಚಾರಿಗಳ ಎನ್ ಕೌಂಟರ್ ನಡೆದಿದ್ದು, ಜನರು ಸಂಭ್ರಮಿಸಿದರು. ಅಲ್ಲಿ ಸಂಭ್ರಮ ಪಟ್ಟಿದ್ದು ಪ್ರಜೆಗಳ ವಿನಃ ಪೊಲೀಸರಲ್ಲ. ಜನರ ಸಂಭ್ರಮಕ್ಕೆ ಕಾರಣವಾಗಿದ್ದು ಅತ್ಯಾಚಾರಿಗಳ ಸಾವಲ್ಲ, ಬದಲಿಗೆ ನ್ಯಾಯಕ್ಕೆ ಸಿಕ್ಕ ಜಯ ಎಂದು ತುಷಾರ್ ಮೆಹ್ತಾ ವಾದಿಸಿದರು.

ದೋಷಿಗಳ ಪರ ವಕೀಲ ಎ.ಪಿ. ಸಿಂಗ್ ವಾದ ಮಂಡನೆ
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿಗಳಾದ ಅಕ್ಷಯ್ ಠಾಕೂರ್, ವಿನಯ್, ಮತ್ತು ಪವನ್ ಕುಮಾರ್ ಶರ್ಮಾ ಪರ ವಕೀಲ ಎ.ಪಿ. ಸಿಂಗ್ ವಾದ ಮಂಡಿಸಿದರು. ಈ ಹಿಂದೆ ಕೋರ್ಟ್ ನೀಡಿದ ಆದೇಶದಲ್ಲಿ ಇಂತಿಷ್ಟೇ ಅವಧಿಯೊಳಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಉಲ್ಲೇಖಿಸಿಲ್ಲ. ಕೋರ್ಟ್ ಕೂಡಾ ಈ ಬಗ್ಗೆ ಹೇಳಿಲ್ಲ, ಸಂವಿಧಾನದಲ್ಲೂ ಯಾವುದೇ ನಿಯಮವಿಲ್ಲ. ಹಾಗಿದ್ದಲ್ಲಿ ಈ ಪ್ರಕರಣದಲ್ಲಿ ಗಲ್ಲುಶಿಕ್ಷೆ ವಿಧಿಸಲು ಇಷ್ಟೊಂದು ಆತುರ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ದೋಷಿಗಳು ಬಡತನ ಹಾಗೂ ದಲಿತ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ. ಕಾನೂನಿನಲ್ಲಿ ಅಸ್ಪೃಶ್ಯತೆ ಭೀತಿ ಅವರನ್ನು ಕಾಡಬಾರದು.

ಮುಕೇಶ್ ಸಿಂಗ್ ಪರ ರೆಬೆಕಾ ಜಾನ್ ವಾದ ಮಂಡನೆ
ಇನ್ನು, ನಿರ್ಭಯಾ ಅತ್ಯಾಚಾರ ಪ್ರಕರಣದ ಮತ್ತೊಬ್ಬ ದೋಷಿ ಮುಕೇಶ್ ಸಿಂಗ್ ಪರ ರೆಬೆಕಾ ಜಾನ್ ಎಂಬ ವಕೀಲರು ವಾದ ಮಂಡಿಸಿದರು. ಕೇಂದ್ರ ಸರ್ಕಾರಕ್ಕೆ ನಿನ್ನೆಯಷ್ಟೇ ಎಚ್ಚರವಾದಂತೆ ಕಾಣುತ್ತಿದೆ. ಒಂದು ಪ್ರಕರಣದ ದೋಷಿಗಳನ್ನು ಪ್ರತ್ಯೇಕವಾಗಿ ಗಲ್ಲುಶಿಕ್ಷೆಗೆ ಒಳಪಡಿಸಲು ಜೈಲಿನ ಕಾನೂನಿನಲ್ಲಿ ಅವಕಾಶವಿಲ್ಲ. ಕೇಂದ್ರ ಸರ್ಕಾರವು ಮೊದಲೇ ಯಾಕೆ ಇದನ್ನು ಪ್ರಶ್ನೆ ಮಾಡಲಿಲ್ಲ. ಈಗ ನಮ್ಮ ಮೇಲೆ ದೂರುತ್ತಿರುವುದು ಸರಿಯಲ್ಲ. ನನ್ನ ಕಕ್ಷಿದಾರನ ಕೊನೆ ಉಸಿರು ಇರುವವರೆಗೂ ಹೋರಾಟ ನಡೆಸುವ ಅವಕಾಶವನ್ನು ಕಾನೂನು ನಮಗೆ ನೀಡಿದೆ ಎಂದು ವಾದಿಸಿದರು.












Click it and Unblock the Notifications