'ಓಲಾ, ಉಬರ್ ಮತ್ತಿತರರಿಂದ 91,000 ಕೋಟಿ ವಸೂಲಿ ಮಾಡಿ'
ನವದೆಹಲಿ, ಆಗಸ್ಟ್ 1: ಅಪ್ಲಿಕೇಷನ್ ಆಧಾರದಲ್ಲಿ ಕ್ಯಾಬ್ ಸೇವೆ ಒದಗಿಸುವವರಿಗೆ ದೆಹಲಿ ಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿದೆ. ಇದರಲ್ಲಿ ಓಲಾ ಮತ್ತು ಉಬರ್ ಕೂಡ ಸೇರಿದ್ದು, ಪ್ರಯಾಣ ದರದ ವಿಚಾರದಲ್ಲಿ ನಿಯಮ ಪಾಲಿಸಿಲ್ಲ ಎಂಬುದು ಆರೋಪವಾಗಿದೆ.
ಡಿಸೆಂಬರ್ ಹನ್ನೊಂದನೇ ತಾರೀಕಿಗೆ ಇರುವ ಮುಂದಿನ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ನ್ಯಾಯಭೂಮಿ ಎಂಬ ಎನ್ ಜಿಒವೊಂದು ಅದರ ಕಾರ್ಯದರ್ಶಿ ರಾಕೇಶ್ ಅಗರ್ ವಾಲ್ ಎಂಬುವರ ಮೂಲಕ ದಾಖಲಿಸಿದ ದೂರಿನ ಅನ್ವಯ ಈ ಆದೇಶವನ್ನು ಕೋರ್ಟ್ ನೀಡಿದೆ.

ಪ್ರಯಾಣ ದರದಲ್ಲಿ ನಿಯಮಗಳನ್ನು ಪಾಲಿಸದ ಕ್ಯಾಬ್ ಸೇವೆ ನೀಡುತ್ತಿರುವವರಿಂದ 91,000 ಕೋಟಿ ರುಪಾಯಿ ಹಣ ವಸೂಲಿ ಮಾಡಬೇಕು ಎಂದು ಈ ಎನ್ ಜಿಒ ಅರ್ಜಿಯಲ್ಲಿ ಮನವಿ ಮಾಡಿದೆ.
ಭಾರತದಲ್ಲಿ ಓಲಾ, ಉಬರ್ ಹಾಗೂ ಟ್ಯಾಕ್ಸಿ ಫಾರ್ ಶ್ಯೂರ್ ಸೇವೆ ಒದಗಿಸುವ ಕಂಪನಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಕ್ಯಾಬ್ ಸೇವೆ ಒದಗಿಸುವ ಕಂಪನಿಗಳು ಮೇಲ್ನೋಟಕ್ಕೆ ಮೋಟಾರು ವಾಹನ ಕಾಯ್ದೆ ಜೂನ್ 20, 2013 ಹಾಗೂ ಸಿಟಿ ಟ್ಯಾಕ್ಸಿ ಸ್ಕೀಮ್ ನ ಅಡಿಯಲ್ಲಿ ಪ್ರಯಾಣ ದರಗಳ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಕೋರ್ಟ್ ಹೇಳಿದೆ.
ಸಿಟಿ ಟ್ಯಾಕ್ಸಿ ಸ್ಕೀಮ್ ನ ಪ್ರಕಾರ ಟ್ಯಾಕ್ಸಿ ಚಾಲಕರು ಸಾರ್ವಜನಿಕ ಸೇವೆ ವಾಹನದ ಬ್ಯಾಡ್ಜ್ ಹಾಗೂ ಎಲೆಕ್ಟ್ರಾನಿಕ್ ಮೀಟರ್ ವಾಹನದ ಮುಂಭಾಗ ಇರಬೇಕು. ಆದರೆ ಇದ್ಯಾವುದನ್ನೂ ಅನುಸರಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.












Click it and Unblock the Notifications