ದೆಹಲಿ ಅಗ್ನಿ ಅವಘಡದಲ್ಲಿ 27 ಸಾವು: ಸಮಯವಾರು ಮಾಹಿತಿ ಓದಿ ತಿಳಿಯಿರಿ
ನವದೆಹಲಿ, ಮೇ 14: ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪದ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಬೃಹತ್ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 40 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆಯನ್ನು ದೃಢಪಡಿಸಿದ ದೆಹಲಿ ಅಗ್ನಿಶಾಮಕ ಸೇವೆಯ ಹಿರಿಯ ಅಧಿಕಾರಿ ಸುನಿಲ್ ಚೌಧರಿ, ಇದುವರೆಗೆ ಒಟ್ಟು 27 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: 20 ಜನ ಸಜೀವ ದಹನ
ಸುಮಾರು 30 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದು, ರಕ್ಷಿಸಲ್ಪಟ್ಟವರಿಗೆ ವೈದ್ಯಕೀಯ ನೆರವು ನೀಡಲು ಆಂಬ್ಯುಲೆನ್ಸ್‌ಗಳನ್ನು ಒದಗಿಸಲಾಗಿತ್ತು. "ಈವರೆಗೆ 50 ಜನರನ್ನು ರಕ್ಷಿಸಲಾಗಿದೆ, 27 ಜನರು ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ," ಎಂದು ಹೊರ ಜಿಲ್ಲೆಯ ಡಿಸಿಪಿ ಸಮೀರ್ ಶರ್ಮಾ ತಿಳಿಸಿದ್ದಾರೆ.
ಕಟ್ಟಡದ ಮಾಲೀಕರನ್ನು ವಶಕ್ಕೆ ಪಡೆದ ಪೊಲೀಸರು:
ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಸಮೀಪದ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪೊಲೀಸರು ಕಟ್ಟಡದ ಮಾಲೀಕರನ್ನು ವಶಕ್ಕೆ ಪಡೆದಿದ್ದು, ಅವರ ಪೂರ್ವಾಪರವನ್ನು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ವಿಚಾರಣೆಯ ಆಧಾರದ ಮೇಲೆ, ಇದು ಮೂರು ಅಂತಸ್ತಿನ ವಾಣಿಜ್ಯ ಕಟ್ಟಡವಾಗಿದ್ದು, ಕಂಪನಿಗಳಿಗೆ ಕಚೇರಿ ಸ್ಥಳಾವಕಾಶಕ್ಕಾಗಿ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳು ಮತ್ತು ರೂಟರ್ ತಯಾರಿಕಾ ಕಂಪನಿಯ ಕಚೇರಿಯಾಗಿರುವ ಕಟ್ಟಡದ 1ನೇ ಮಹಡಿಯಿಂದ ಬೆಂಕಿಯ ಹೊತ್ತಿಕೊಳ್ಳಲು ಪ್ರಾರಂಭವಾಯಿತು. ಆದರೆ, ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದಿದ್ದಾರೆ.

ದೆಹಲಿ ಅಗ್ನಿ ಅವಘಡದ ಕುರಿತು ಸಮಯವಾರು ಮಾಹಿತಿ:
* ರಾತ್ರಿ 9.00: ಬೆಂಕಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಪೊಲೀಸ್ ಪಡೆಯನ್ನು ನಿಯೋಜಿಸಿದ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸುಮಾರು 15 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದವು. ಈ ವೇಳೆಗೆ ಸುಮಾರು 50-60 ಜನರನ್ನು ರಕ್ಷಿಸಲಾಗಿದೆ ಮತ್ತು 2-3 ಜನರು ಗಾಯಗೊಂಡಿದ್ದಾರೆ ಎಂದು ಹೊರ ಜಿಲ್ಲೆಯ ಡಿಸಿಪಿ ಸಮೀರ್ ಶರ್ಮಾ ತಿಳಿಸಿದರು.
* 9.45 PM: ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಸಂಜೆ ಬೆಂಕಿ ಹೊತ್ತಿಕೊಂಡ 3 ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಇನ್ನೂ ಕೆಲವು ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದರು.
* 10.05 PM: ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಸಂಜೆ ಬೆಂಕಿ ಹೊತ್ತಿಕೊಂಡ 3 ಅಂತಸ್ತಿನ ವಾಣಿಜ್ಯ ಕಟ್ಟಡದಿಂದ ಒಟ್ಟು 16 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೂರನೇ ಮಹಡಿಯಲ್ಲಿ ಇನ್ನೂ ಶೋಧಿಸಲಾಗಿಲ್ಲ ಎಂದು ದೆಹಲಿ ಅಗ್ನಿಶಾಮಕ ನಿರ್ದೇಶಕ ಅತುಲ್ ಗರ್ಗ್ ತಿಳಿಸಿದರು.
* 10.15 PM: ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಶುಕ್ರವಾರ ಸಂಜೆ 3 ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಹೊತ್ತಿಕೊಂಡ ಬೆಂಕಿಯಲ್ಲಿ ಇದುವರೆಗೆ 10 ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದರು.
* 10.20 PM: ಅಗ್ನಿ ಅನಾಹುತದ ಸಂದರ್ಭದಲ್ಲಿ ಆತಂಕಗೊಂಡ ಕೆಲವರು ಕಟ್ಟಡದಿಂದ ಜಿಗಿದರು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ದೆಹಲಿ ಅಗ್ನಿಶಾಮಕ ಸೇವೆಯ ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ಸುನಿಲ್ ಚೌಧರಿ ಹೇಳಿದರು.
* 10.30 PM: ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಸಂಜೆ ಸಂಭವಿಸಿದ 3 ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 20 ಮೃತದೇಹಗಳು ಪತ್ತೆಯಾಗಿವೆ ಎಂದು ದೆಹಲಿ ಅಗ್ನಿಶಾಮಕ ನಿರ್ದೇಶಕ ಅತುಲ್ ಗಾರ್ಗ್ ಖಚಿತಪಡಿಸಿದರು.
* 10.55 PM: ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ 3 ಅಂತಸ್ತಿನ ವಾಣಿಜ್ಯ ಕಟ್ಟಡದ ಅಗ್ನಿ ಅವಘಡದಲ್ಲಿ 26 ಮೃತದೇಹಗಳು ಪತ್ತೆಯಾಗಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ಸುನಿಲ್ ಚೌಧರಿ ಹೇಳಿದರು.
* 11.00 PM: ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ 3 ಅಂತಸ್ತಿನ ವಾಣಿಜ್ಯ ಕಟ್ಟಡದ ಅಗ್ನಿ ಅವಘಡದಲ್ಲಿ 50 ಜನರನ್ನು ರಕ್ಷಿಸಲಾಗಿದೆ, 27 ಜನರು ಮೃತಪಟ್ಟಿದ್ದಾರೆ ಎಂದು ಡಿಸಿಪಿ ಸಮೀರ್ ಶರ್ಮಾ ಮಾಹಿತಿ ನೀಡಿದರು.
* 11.10 PM: ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ 3 ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ, ಪ್ರದೇಶದ ವಿಸ್ತಾರವನ್ನು ಗಮನಿಸಿದರೆ ಇದು ಸಮಯ ತೆಗೆದುಕೊಳ್ಳುತ್ತದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ ಸುನಿಲ್ ಚೌಧರಿ ಹೇಳಿದ್ದಾರೆ.