ವಿರಾಟ್ ಕೊಹ್ಲಿ ಬದಲಿಗೆ ಬೇರೆ ಆಟಗಾರನನ್ನ ಹುಡುಕಬೇಕಷ್ಟೇ: ಆರ್‌ಸಿಬಿ ನಿರ್ದೇಶಕರ ಹೇಳಿಕೆ ಹಿಂದಿದೆ ಮಹತ್ವದ ಸಂದೇಶ
RCB Virat Kohli: ಇದೀಗ ನಡೆಯುತ್ತಿರುವ ಐಪಿಎಲ್ 2026ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತದಲ್ಲಿವೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಳಸದಂತಿರುವ ವಿರಾಟ್ ಕೊಹ್ಲಿ ಅವರ ಕೊಡುಗೆ ಬಗ್ಗೆ ನಿರ್ದೆಶಕ ಮೊ ಬೊಬಾಟ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇದೀಗ ಇದು ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಒಂದು ತಂಡದ ಪರ ಇಷ್ಟು ಸುದೀರ್ಘ ಕಾಲ ಪ್ರತಿನಿಧಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಅವರು ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿಯೇ ಆಟವನ್ನು ಮುಂದುವರೆಸಿದ್ದಾರೆ. ಇಲ್ಲಿವರೆಗೂ ಆರ್‌ಸಿಬಿ ಪರವಾಗಿ ಕೊಹ್ಲಿ ತೋರಿರುವ ನಿಷ್ಠೆಯು ಎದ್ದುಕಾಣುವಂತದ್ದಾಗಿದೆ. ಅದರಲ್ಲೂ ವಿಶೇಷವಾಗಿ ತಂಡವು ಟ್ರೋಫಿ ಗೆಲ್ಲಲು ವಿಫಲವಾದ ವರ್ಷಗಳಲ್ಲೂ ಅವರು ತೋರಿದ ಬದ್ಧತೆ ಅಪಾರ. ಸುದೀರ್ಘ ಕಾಯುವಿಕೆ ಅಂತಿಮವಾಗಿ ಕಳೆದ ಸೀಸನ್‌ನಲ್ಲಿ ಕೊನೆಗೊಂಡಿತು. ಆ ಸಂಭ್ರಮದ ಕ್ಷಣದಲ್ಲಿದ್ದ ಭಾವುಕತೆಯು ಆ ಪ್ರಶಸ್ತಿಯು ಕೇವಲ ಫ್ರಾಂಚೈಸಿಗೆ ಮಾತ್ರವಲ್ಲದೆ ಸ್ವತಃ ಕೊಹ್ಲಿ ಅವರಿಗೆ ಎಷ್ಟು ಮಹತ್ವದ್ದಾಗಿತ್ತು ಎಂಬುದನ್ನು ಪ್ರತಿಬಿಂಬಿಸುತ್ತದೆ.

ಭಾವುಕರಾಗಿ ಕಣ್ಣೀರಿಟ್ಟಿದ್ದ ಕೊಹ್ಲಿ
ಅಲ್ಲದೆ ಆರ್‌ಸಿಬಿಯ ಸಹ ಆಟಗಾರರು ಕೊಹ್ಲಿ ಅವರಿಗಾಗಿಯೇ ಐಪಿಎಲ್ ಟ್ರೋಫಿ ಗೆಲ್ಲಲು ಶಪಥ ಮಾಡಿದ್ದರು. ಇದು ಅವರು ಇಷ್ಟು ವರ್ಷಗಳ ಕಾಲ ತೋರಿದ ಬದ್ಧತೆ ಮತ್ತು ಉತ್ಸಾಹಕ್ಕೆ ನೀಡಿದ ಗೌರವವಾಗಿತ್ತು. ಕಳೆದ ವರ್ಷ ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಗೆದ್ದಾಗ ಸಹ ಆಟಗಾರರು ಸಂಭ್ರಮದಿಂದ ಅವರತ್ತ ಧಾವಿಸುತ್ತಿದ್ದಂತೆ ಕೊಹ್ಲಿ ಭಾವುಕರಾಗಿ ಮಂಡಿಯೂರಿ ಕಣ್ಣೀರಿಟ್ಟರು.
ಅದೇ ರೀತಿಯ ಒತ್ತಡ ಈ ಸೀಸನ್‌ನಲ್ಲೂ ಕಂಡುಬರುತ್ತಿದೆ. ತಂಡದ ಹಿರಿಯ ಆಟಗಾರನಾಗಿ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಕೊಹ್ಲಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಆರ್‌ಸಿಬಿಯ ಹೋರಾಟದಲ್ಲಿ ಉತ್ತಮವಾಗಿ ಪ್ರದರ್ಶನ ತೋರುತ್ತಾ ಬಂದಿದ್ದಾರೆ.
ಕೊಹ್ಲಿ ಪ್ರದರ್ಶನದ ಬಗ್ಗೆ ಮಹತ್ವದ ಮಾಹಿತಿ
ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು ತಂಡಕ್ಕೆ ವಿರಾಟ್ ಕೊಹ್ಲಿ ನೀಡುತ್ತಿರುವ ಸ್ಥಿರ ಪ್ರದರ್ಶನ ಮತ್ತು ದೀರ್ಘಕಾಲೀನ ಕೊಡುಗೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಬೊಬಾಟ್ ಅವರು, "ವಿರಾಟ್ ಅವರ ಪ್ರದರ್ಶನಗಳನ್ನು ನಾವು ಲಘುವಾಗಿ ಪರಿಗಣಿಸಬಾರದು. ಅವರು ಮತ್ತೊಮ್ಮೆ ಒಂದು ಸೀಸನ್‌ನಲ್ಲಿ 500 ರನ್‌ಗಳ ಗಡಿ ದಾಟಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ತಂಡದಲ್ಲಿ ಇಲ್ಲದಿದ್ದರೆ, ನೀವು ಪ್ರತಿ ವರ್ಷ ಅವರ ಬದಲಿಗೆ 500 ರಿಂದ 700 ರನ್‌ಗಳನ್ನು ಭರ್ತಿ ಮಾಡುವಂತಹ ಬೇರೊಬ್ಬ ಆಟಗಾರನನ್ನು ಹುಡುಕಬೇಕಾಗುತ್ತದೆ," ಎಂದು ಹೇಳಿದ್ದಾರೆ.
'ತಂಡಕ್ಕೆ ಕೊಹ್ಲಿ ಕೊಡುಗೆ ಅಪಾರವಾಗಿದೆ'
ಕೊಹ್ಲಿ ಕೇವಲ ರನ್ ಗಳಿಸುವುದಷ್ಟೇ ಅಲ್ಲದೆ, ಅದನ್ನೂ ಮೀರಿ ತಂಡದ ಮೇಲೆ ಅವರಿಗಿರುವ ಅಪಾರ ಪ್ರೀತಿ ಬಗ್ಗೆ ಮಾತನಾಡಿದ ಅವರು, ಸೀಸನ್‌ನಿಂದ ಸೀಸನ್‌ಗೆ ಆರ್‌ಸಿಬಿ ತಂಡಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು. "ರನ್‌ಗಳ ಆಚೆಗೂ ಅವರು ತಂಡಕ್ಕೆ ನೀಡುವ ಕೊಡುಗೆಗಳು ಸಾಕಷ್ಟಿವೆ. ಅವರಲ್ಲಿ ನಾನು ಹೆಚ್ಚು ಗೌರವಿಸುವ ವಿಷಯವೆಂದರೆ ಅವರಲ್ಲಿರುವ ಶಿಸ್ತು, ಶ್ರದ್ಧೆ. ಅವರ ಎನರ್ಜಿ ಮಾತ್ರ ಎಲ್ಲದಕ್ಕಿಂತ ಮೀರಿದ್ದು," ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅವರು 2021ರ ಸೀಸನ್ ನಂತರ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದರು. ಅವರು ತಂಡದ ಬೆನ್ನೆಲುಬಾಗಿ ನಿಂತು ಪ್ರಮುಖ ನಾಯಕತ್ವದ ಪಾತ್ರವನ್ನು ನಿರ್ವಹಿಸುವುದನ್ನು ಮುಂದುವರಿಸಿದ್ದಾರೆ. ಅಂದಿನಿಂದ ಅವರು ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಈಗಿನ ನಾಯಕ ರಜತ್ ಪಾಟಿದಾರ್ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದ್ದಾರೆ.
ನಾಯಕರಿಗೆ ಬೆಂಬಲವಾಗಿರುವ ಕಿಂಗ್ ಕೊಹ್ಲಿ
ತಂಡದಲ್ಲಿ ಉತ್ತಮ ಸ್ಥಾನಮಾನವಿದ್ದರೂ ಸಹ ಕೊಹ್ಲಿ ಅಧಿಕಾರ ಚಲಾಯಿಸದೆ ಇಬ್ಬರೂ ನಾಯಕರಿಗೆ ತಮ್ಮದೇ ಆದ ರೀತಿಯಲ್ಲಿ ತಂಡವನ್ನು ಮುನ್ನಡೆಸಲು ಅಗತ್ಯವಿರುವ ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡಿದ್ದಾರೆ. ಆದರೆ ತೆರೆಯ ಮರೆಯಲ್ಲಿ ನಿರಂತರ ಮಾರ್ಗದರ್ಶನ ಮತ್ತು ಬೆಂಬಲವಾಗಿರುವ ಅವರು ತಂಡದ ಬೆನ್ನಲುಬಾಗಿದ್ದಾರೆ ಅಂದ್ರೆ ತಪ್ಪಾಗಲಾರದು.
ಮೈದಾನದ ಒಳಗೆ ಮತ್ತು ಹೊರಗೆ ತಂಡದ ವಾತಾವರಣವನ್ನು ಉತ್ತಮವಾಗಿ ರೂಪಿಸುವಲ್ಲಿ ಕೊಹ್ಲಿ ಅವರ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ. "ಅವರು ನಂಬಲಾಗದಷ್ಟು ಉನ್ನತ ಗುಣಮಟ್ಟದ ಆಟದ ಕೌಶಲ್ಯಗಳನ್ನು ಹೊಂದಿದ್ದಾರೆ," ಎಂದು ಹೊಗಳಿದ್ದಾರೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಅವರು ನಾಯಕ ಅಲ್ಲದಿರಬಹುದು. ಆದರೆ ಅವರು ನಾಯಕರ ಹಿಂದೆ ನಿಂತು ಉತ್ತಮ ಮಾರ್ಗದರ್ಶನ ನೀಡುತ್ತಾ ತಂಡದ ಯಶಸ್ಸಿಗಾಗಿ ಸದಾ ಶ್ರಮಿಸುತ್ತಾ ಬಂದಿದ್ದಾರೆ ಎಂಬುದೇ ಮೊ ಬೊಬಾಟ್ ಅವರ ಹೇಳಿಕೆಯ ಅರ್ಥವಾಗಿದೆ.












Click it and Unblock the Notifications