Malnadu: ಮಲೆನಾಡನ್ನು ಬಗೆಯುವಾಗ ಸರ್ಕಾರಕ್ಕೆ ಇರುವ ಪ್ರೀತಿ ಕೊಡುವಾಗ ಬರದು: ರಾಜೀವ ಹೆಗಡೆ ಬರಹ

Malnadu: ಮಲೆನಾಡನ್ನು ಬಗೆಯುವಾಗ ಸರ್ಕಾರಕ್ಕೆ ಇರುವ ಪ್ರೀತಿ ಕೊಡುವಾಗ ಬರದು: ರಾಜೀವ ಹೆಗಡೆ ಅವರ ಬರಹ ಇಲ್ಲಿದೆ. ಮೇಲ್ಜಾತಿಯವರು ತುಳಿದರು ಎನ್ನುವ ಕಾರಣಕ್ಕೆ ಕೆಲ ಸಮುದಾಯಗಳಿಗೆ ಸಂವಿಧಾನದ ಪ್ರಕಾರ ಮೀಸಲಾತಿ ನೀಡಲಾಯಿತು. ಒಂದು ಸಮುದಾಯದ ಸಂಖ್ಯೆ ಕಡಿಮೆಯಿದೆ ಎನ್ನುವ ಕಾರಣಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಯಿತು. ಹೀಗೆ ವಿಶೇಷ ಸ್ಥಾನಮಾನ ಪಡೆದವರ ಪಟ್ಟಿ ದೊಡ್ಡದಾಗುತ್ತಲೇ ಇದೆ. ಆದರೆ ಈ ದೇಶದಲ್ಲಿ ಒಂದು ಭಾಗ ಮಾತ್ರ ಎಲ್ಲ ಶೋಷಣೆಯನ್ನು ಸಹಿಸಿಕೊಂಡು ಅರಣ್ಯ ರೋಧನೆ ಈ ದೇಶಕ್ಕೆ ವಿದ್ಯುತ್ ಬೇಕು ಎಂದಾಗ ಅಲ್ಲಿಯ ಊರನ್ನು ಮುಳುಗಿಸಲಾಗುತ್ತದೆ. ನೀರು ಬೇಕಾಂದಾಗ ಗುಡ್ಡವನ್ನೇ ಸಡಿಲಗೊಳಿಸಿ ಪೈಪ್ ಹಾಕಿ ತರಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಬೇಕೆಂದಾದರೆ ಅಣು ಸ್ಥಾವರಕ್ಕೂ ಈ ಊರೇ ಬೇಕು. ಆದರೆ ಇವೆಲ್ಲ ಶೋಷಣೆಯನ್ನು ಸಹಿಸಿಕೊಂಡ ಊರಿನ ಪ್ರಾಮಾಣಿಕ ಜನರು ನ್ಯಾಯಬದ್ಧವಾಗಿ ಬೆಳಕು ಕೇಳಿದರೆ ಕತ್ತಲೆಯತ್ತ ದೂಡುತ್ತಾರೆ. ಆರೋಗ್ಯ ಸವಲತ್ತು ಕೇಳಿದರೆ ಜನಸಂಖ್ಯೆಯಿಲ್ಲ ಎನ್ನುತ್ತಾರೆ. ರಸ್ತೆ ಕೇಳಿದರೆ, ಅರಣ್ಯ ನಾಶವಾಗುತ್ತದೆ ಎಂದು ತಲೆ ಮೇಲೆ ಹೊಡೆದು ಹೇಳುತ್ತಾರೆ. ಉದ್ಯೋಗ, ಕಾಲೇಜು, ಕೈಗಾರಿಕೆ ಕೇಳಿದರೆ, ಅದೇ ಕಾಡು ತೋರಿಸುತ್ತಾರೆ. ಒಟ್ಟಿನಲ್ಲಿ ಇವೆಲ್ಲ ಸಂಕಷ್ಟಗಳ ನಡುವೆ ಇಡೀ ರಾಜ್ಯಕ್ಕೆ ಬುದ್ಧಿವಂತರ ನಾಡು ಎನಿಸಿಕೊಂಡಿರುವ ಮಲೆನಾಡಿನ ಜನರನ್ನು ಅಕ್ಷರಶಃ ದ್ವಿತೀಯ ದರ್ಜೆಯ ನಾಗರಿಕರಂತೆ ಈ ದೇಶ ಹಾಗೂ ರಾಜ್ಯದ ಪ್ರತಿಯೊಂದು ಸರ್ಕಾರ ನಡೆಸಿಕೊಂಡಿದೆ.

ಇದನ್ನು ಕೇವಲ ಯಾವುದೊಂದು ಘಟನೆ ಮೂಲಕ ಬರೆಯುತ್ತಿಲ್ಲ. ನಮ್ಮ ಮಲೆನಾಡು ಜಿಲ್ಲೆಗಳಿಗೆ, ಅದರಲ್ಲೂ ವಿಶೇಷವಾಗಿ ಉತ್ತರ ಕನ್ನಡಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ಆಧರಿಸಿ ಈ ಅಭಿಪ್ರಾಯಕ್ಕೆ ಬರಬೇಕಿದೆ. ನಮ್ಮೂರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ಕಟ್ಟಿಸಿಕೊಡಿ ಎಂದರೆ, ನಿಮ್ಮೂರಿನಲ್ಲಿ ಜನಸಂಖ್ಯೆ ಕಡಿಮೆಯಿದೆ ಎನ್ನುತ್ತಾರೆ. ಉತ್ತಮ ರಸ್ತೆ ಸಂಪರ್ಕದ ಬಗ್ಗೆ ಮಾತನಾಡಿದರೆ ಅರಣ್ಯ ನಾಶದ ಬಗ್ಗೆ ಕಥೆ ಹೇಳುತ್ತಾರೆ. ಆದರೆ ಇದೇ ನಮ್ಮ ಜಿಲ್ಲೆಯಲ್ಲಿ ಸೀಬರ್ಡ್‌, ಕೈಗಾ ಹಾಗೂ ಜಲ ವಿದ್ಯುತ್‌ ಯೋಜನೆಗಳಿಗೆ ಕಾಡನ್ನು ಮುಳುಗಿಸುವಾಗ, ಅರಣ್ಯ ರಕ್ಷಣೆಯ ನೆನಪಾಗಲೇ ಇಲ್ಲ. ದೇಶ ಬೆಳಗಲು ಕಾಡು ನಾಶದ ಅನಿವಾರ್ಯತೆ ಇರುವಾದರೆ, ನಮ್ಮ ಮನೆಯ ದೀಪ ಬೆಳಗಲು ಕೂಡ ಇದೇ ನ್ಯಾಯ ಅನ್ವಯ ಮಾಡಬೇಕು.

Malnadu

ಮೇಲೆ ಹೇಳಿರುವ ವಿಚಾರಗಳು ಹೊಸದೇನಲ್ಲ. ನಾನಿಂದು ಬೇಸರದಿಂದ ಈ ಲೇಖನ ಬರೆಯಲು ಕಾರಣವಾಗಿದ್ದು ನಮ್ಮ ಹೆಮ್ಮೆಯ ಇಂಧನ ಇಲಾಖೆ. ನಾನು ದೀಪಾವಳಿ ಸಂದರ್ಭದಲ್ಲಿ ಊರಿಗೆ ಹೋಗಿದ್ದಾಗ ಮನೆಯಿಂದಲೇ ಕೆಲಸ ಮಾಡುವ ಪ್ರಯತ್ನ ಮಾಡಿದ್ದೆ. ಗಾಳಿ-ಮಳೆಯಿಲ್ಲದ ಆ ದಿನಗಳಲ್ಲಿ ಗಂಟೆಗೆ ಎರಡು ಮೂರು ಬಾರಿ ವಿದ್ಯುತ್‌ ಸಂಪರ್ಕದ ಕಡಿತವಾಗುತ್ತಿತ್ತು. ಯಾವುದೇ ತಾತ್ಕಾಲಿಕ ಸಮಸ್ಯೆ ಆಗಿರಬೇಕು ಎಂದುಕೊಂಡಿದ್ದೆ. ಆದಾಗ್ಯೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೆ.

ಈಗ ಮೊನ್ನೆ ಊರಿಗೆ ಹೋದಾಗಲೂ ಮತ್ತದೇ ಸಮಸ್ಯೆ ಕಾಣಿಸಿತು. ಸಿದ್ದಾಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ಸಮಸ್ಯೆಗಳಿವೆ. ದಿನದಲ್ಲಿ ಹತ್ತಾರು ಬಾರಿ ವಿದ್ಯುತ್ ಹೋಗಿ, ಬರುತ್ತಲೇ ಇರುತ್ತದೆ. ಇದರೊಂದಿಗೆ ವೊಲ್ಟೇಜ್ ಏರಿಳತವು ಇನ್ನೊಂದು ಸಮಸ್ಯೆ. ಒಂದೆಡೆ ಊರಿನಿಂದ ನಿರಂತರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ. ಮತ್ತೊಂದೆಡೆ ಈ ಏರಿಳಿತದಿಂದ ಮನೆಯಲ್ಲಿನ ವಿದ್ಯುತ್ ಸಲಕರಣೆಗಳು ಹಾಳಾಗುತ್ತಿವೆ. ನಮ್ಮ ಗೋಳು ಇಲ್ಲಿಗೆ ನಿಂತಿಲ್ಲ. ಅಷ್ಟಕ್ಕೂ ಜನಸಂಖ್ಯೆಯಿಲ್ಲದ ಊರಾಗಿರುವದರಿಂದ, ವಿದ್ಯುತ್‌ ಸಂಪರ್ಕ ಕಡಿತವಾದರೆ ಮೊಬೈಲ್ ನೆಟ್‌ವರ್ಕ್‌ ಕೂಡ ಕೆಲಸ ಮಾಡುವುದಿಲ್ಲ. ಟೆಲಿಫೋನ್‌ ಅಥವಾ ವೈ-ಫೈ ಕೂಡ ಬಂದ್‌ ಆಗುತ್ತದೆ. ವಿದ್ಯುತ್‌ ಸಂಪರ್ಕವಿಲ್ಲವೆಂದು ಹೆಸ್ಕಾಂಗೆ ಕರೆ ಮಾಡಿ ದೂರು ನೀಡಲು ಕೂಡ ಸಾಧ್ಯವಾಗದ ಹೀನಾಯ ಸ್ಥಿತಿಯಿದೆ.

ನಾನು ವಿದ್ಯುತ್ ಸಂಪರ್ಕ ಕಡಿತಕ್ಕೆ ಸಂಬಂಧಿಸಿ, ಈ ಬಾರಿ ಒಂದಿಷ್ಟು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡುವ ಪ್ರಯತ್ನ ಮಾಡಿದೆ. ಆಗ ನನಗೆ ಬಂದ ಉತ್ತರವು ವ್ಯವಸ್ಥೆ ಮೇಲಿನ ಹೇಸಿಗೆಯು ದುಪ್ಪಟ್ಟಾಗುವಂತೆ ಮಾಡಿತು. ವಿದ್ಯುತ್‌ ಕೊರತೆಯಿಂದ ನಮ್ಮೂರಿಗೆ ಪದೇಪದೆ ಸಂಪರ್ಕ ಕಡಿತ ಮಾಡಲಾಗುತ್ತಿಲ್ಲ. ಬದಲಾಗಿ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿ ಮಲೆನಾಡಿನ ಹಲವು ಪ್ರದೇಶಗಳ ಲೈನ್‌ಗಳು ದೋಷಪೂರಿತವಾಗಿವೆ. ಬೇಡಿಕೆ ಹೆಚ್ಚಾದಾಗ ಅಥವಾ ಸಣ್ಣ ಪ್ರಮಾಣದ ಎಲೆಗಳ ಸ್ಪರ್ಶವಾದರೂ ವಿದ್ಯುತ್‌ ಸಂಪರ್ಕ ಕಡಿತವಾಗುತ್ತಿದೆ. ಮಲೆನಾಡಿನ ಹಾಲಿ ಬೇಡಿಕೆ ಹಾಗೂ ಪೂರೈಕೆ ಆಧರಿಸಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಬೇಕಿದೆ. ಈ ಪ್ರದೇಶಗಳಲ್ಲಿನ ಆದಾಯದ ಕೊರತೆಯಿದೆ ಎನ್ನುವ ಕಾರಣಕ್ಕೆ, ಸರ್ಕಾರದ ಮಟ್ಟದಿಂದ ಅನುದಾನ ಬರುತ್ತಿಲ್ಲ.

ಇನ್ನೊಂದೆಡೆ ಮಲೆನಾಡಿನಂತ ಸಂಕೀರ್ಣ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಗೆ ಹೆಚ್ಚುವರಿ ಸಿಬ್ಬಂದಿ ಅಗತ್ಯವಿರುತ್ತದೆ. ಇದಕ್ಕೂ ಆದಾಯದ ಕಾರಣ ನೀಡಿ, ಸಿಬ್ಬಂದಿಯನ್ನು ಕೊಡುವುದಿಲ್ಲ. ಇದರ ಪರಿಣಾಮವಾಗಿ ಮಳೆಗಾಲದ ನಾಲ್ಕು ತಿಂಗಳಂತೂ ನಮ್ಮೂರು ಕತ್ತಲೆ ನಾಡಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ವರ್ಷದ ಉಳಿದ ದಿನವೂ ಇದೇ ರೀತಿ ಆಗುತ್ತಿದೆ. ಸ್ಥಳೀಯ ಅಧಿಕಾರಗಳ ಮಟ್ಟದಲ್ಲಿ ಇದಕ್ಕೆ ಉತ್ತರಿಸುವ ಶಕ್ತಿ ಹಾಗೂ ಸಂಪನ್ಮೂಲವಿಲ್ಲ. ಮೇಲೆ ಕುಳಿತವರಿಗೆ ನಮ್ಮ ಜಿಲ್ಲೆಯಿಂದ ಲೂಟಿ ಮಾಡಿರುವ ಸಂಪನ್ಮೂಲದ ಬಗ್ಗೆ ಕೃತಜ್ಞತೆಯೂ ಇಲ್ಲ.

ಈ ವಿದ್ಯುತ್‌, ದೂರವಾಣಿ ಸಂಪರ್ಕವಿಲ್ಲ ಎನ್ನುವುದು ಅಷ್ಟೊಂದು ಮಾನಸಿಕ ಹಿಂಸೆ ಕೊಡುವುದಿಲ್ಲ. ಆದರೆ ಈ ವಿಷಯದ ಆಳಕ್ಕೆ ಹೋದಾಗ ಸರ್ಕಾರಿ ಕಚೇರಿಗಳಿಂದ ಬರುವ ಉತ್ತರವು, ಹುಚ್ಚು ಹಿಡಿಸುವಂತಿರುತ್ತದೆ. ಮೇಲೆ ಉಲ್ಲೇಖಿಸಿದಂತೆ ವಿದ್ಯುತ್‌ ಪೂರೈಕೆಗೆ ಮೂಲಭೂತ ವ್ಯವಸ್ಥೆ ಸುಧಾರಣೆಗೆ ಹಣ ನೀಡಲು, ನಾವು ಆದಾಯ ಕೊಡುತ್ತಿಲ್ಲ. ವಿದ್ಯುತ್‌ ಸಂಪರ್ಕ ಕಡಿತವಾದ ಕೂಡಲೇ ಮೊಬೈಲ್‌ ನೆಟ್‌ವರ್ಕ್‌ನ್ನು ಬ್ಯಾಟರಿ ಅಥವಾ ಜನರೇಟರ್‌ ಮೂಲಕ ಓಡಿಸಲು ಕೂಡ ಇದೇ ಸಮಸ್ಯೆಯಿದೆ. ಇದೇ ಆದಾಯದ ಕಾರಣ ನೀಡಿ, ನಮ್ಮನ್ನು ಎಲ್ಲರ ಜಗತ್ತಿನಿಂದ ದೂರವಿಡುವ ಪ್ರಯತ್ನವಾಗುತ್ತದೆ. ಹಳ್ಳಿಗಳಿಗೆ ಅಗತ್ಯವಿರುವ ಬಸ್‌ಗಳನ್ನು ನೀಡಿ ಎಂದಾಗಲೂ, ಇದುವೇ ಆದಾಯದ ಲೆಕ್ಕ ನೀಡುತ್ತಾರೆ. ಜನಸಂಖ್ಯೆ ಕೊರತೆಯ ಕಾರಣದಿಂದ ಶಾಲೆ ಮುಚ್ಚುವಾಗಲೂ ಇದೇ ಕಾರಣ ನೀಡುತ್ತಾರೆ. ಆದರೆ ನಮ್ಮಿಂದ ಲೂಟಿ ಮಾಡಿ ರಾಜ್ಯಕ್ಕೆ ಹಂಚುತ್ತಿರುವ ಸಂಪನ್ಮೂಲವನ್ನು ಲೆಕ್ಕ ಮಾಡುವ ಸಚಿವ, ಅಧಿಕಾರಿಯು ಈ ರಾಜ್ಯದಲ್ಲಿ ಎಂದಾದರೂ ಹುಟ್ಟಲಿ ಎಂದು ನಾವು ಮಲೆನಾಡಿಗರು ಕಾಯುತ್ತಿದ್ದೇವೆ.

ಕೊನೆಯದಾಗಿ: ಇವೆಲ್ಲ ಕೊರತೆಗಳಿದ್ದರೂ ಅಳುತ್ತ ಕೂರುವ ಮಂದಿಯಲ್ಲ. ಇಂದಿಗೂ, ಹಿಂದೆಯೂ ಈ ರಾಜ್ಯದ ಅತ್ಯುತ್ತಮ ಸರ್ಕಾರಿ ಶಾಲೆಗಳು ನಮ್ಮೂರಿನಲ್ಲಿವೆ. ರಾಜ್ಯಕ್ಕೆ ಟಾಪರ್‌ಗಳು ಈ ಮಲೆನಾಡಿನಿಂದ ಪ್ರತಿವರ್ಷವೂ ಹತ್ತಾರು ವಿದ್ಯಾರ್ಥಿಗಳು ಬರುತ್ತಾರೆ. ಶಿಕ್ಷಣ ವಲಯದಿಂದ ಹಿಡಿದು ಎಲ್ಲಿ ನೋಡಿದರೂ ನಮ್ಮ ಪ್ರತಿಭೆಗಳು ಮಿನುಗುತ್ತಿರುತ್ತಾರೆ. ಅಂದ್ಹಾಗೆ ಇವರಲ್ಲಿ ಹೆಚ್ಚಿನವರು ಜಾತ್ಯತೀತವಾಗಿ ಮೆರಿಟ್‌ ಆಧಾರದಲ್ಲಿಯೇ ಮೇಲೆ ಬಂದವರಾಗಿದ್ದಾರೆ. ರಾಜ್ಯದ ಹಲವೆಡೆ ಕೊರತೆಗಳನ್ನು ಇರಿಸಿಕೊಂಡು ವಿಶೇಷ ಸ್ಥಾನಮಾನಕ್ಕಾಗಿ ಹೋರಾಡುತ್ತಿದ್ದರೆ, ನಾವು ಮಲೆನಾಡಿಗರು ಸ್ವಂತ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿದ್ದೇವೆ. ಈ ಸರ್ಕಾರಿ ಶಾಲೆಗಳು ಜನರ ಕಾರಣದಿಂದ ಉದ್ಧಾರವಾಗಿಯೇ ಹೊರತು, ಸರ್ಕಾರದ ಯಾವುದೇ ವಿಶೇಷ ಯೋಗದಾನವಿಲ್ಲ. ನಾವು ಮಲೆನಾಡಿಗರು ಲೆಕ್ಕ ಕೇಳುತ್ತಾ ಕುಳಿತರೆ, ಯಾವ ಸರ್ಕಾರದಿಂದಲೂ ಚುಕ್ತಾ ಮಾಡಲಾಗದು. ಆದಾಗ್ಯೂ ನಾವು ಕೇಳುವ ಸಣ್ಣ ಬೇಡಿಕೆ ಕೂಡ ನಿಮಗೆ ಕಾಣಿಸದು ಎಂದರೆ, ಈ ಸರ್ಕಾರ, ಮುಖ್ಯಮಂತ್ರಿ, ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರೆಷ್ಟು....

ಬರಹ: ರಾಜೀವ ಹೆಗಡೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+