Sooryavanshi: ಇನ್ನೂ ತೃಪ್ತಿಯಾಗಿಲ್ಲ ನನಗೆ: ಟೀಮ್ ಇಂಡಿಯಾಗೆ ಎಂಟ್ರಿ ಕೊಡ್ತಿದ್ದಂತೆ ಮಹದಾಸೆ ಬಿಚ್ಚಿಟ್ಟ ವೈಭವ್ ಸೂರ್ಯವಂಶಿ
Vaibhav Sooryavanshi: ಕೇವಲ 15ನೇ ವಯಸ್ಸಿನಲ್ಲೇ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿರುವ ವೈಭವ್ ಸೂರ್ಯವಂಶಿ ಇದೀಗ ತಮ್ಮ ಮಹದಾಸೆಯನ್ನ ಹೊರಹಾಕಿದ್ದಾರೆ. ಈ ಹೇಳಿಕೆ ಹೇಗಿದೆ ಅಂದ್ರೆ, ಎದುರಾಳಿ ತಂಡದ ಬೌಲರ್‌ಗಳು ಭಯಭೀತರಾಗಿ ಇವನು ಆದಷ್ಟು ಬೇಗ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲಿ ಎನ್ನುವಷ್ಟರ ಮಟ್ಟಿಗೆ.. ಈ ಲೆವೆಲ್‌ಗೆ ಭಯ ಹುಟ್ಟುಹಾಕಿದ್ದಾನೆ ಈ ಬಾಲಕ. ಹಾಗಾದ್ರೆ ಈ ಕುರಿತ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸಂದರ್ಶನವೊಂದರಲ್ಲಿ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ವೈಭವ್ ಸೂರ್ಯವಂಶಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ತಮಗೆ ಸಿಕ್ಕಿರುವ ಆರಂಭಿಕ ಯಶಸ್ಸುಗಳಿಗಷ್ಟೇ ತೃಪ್ತರಾಗಿ ಕೂರುವುದಿಲ್ಲ. ಐಪಿಎಲ್ ಪ್ರಶಸ್ತಿಗಳು, ದಾಖಲೆಗಳು ಅಥವಾ ಭಾರತ ತಂಡದ ಚೊಚ್ಚಲ ಕರೆಯು ತಮ್ಮ ಗುರಿಯ ಕೇವಲ ಆರಂಭವಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ವೈಭವ್ ಸೂರ್ಯವಂಶಿ ಮಹದಾಸೆ ಏನು?
'ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದು ನನ್ನ ಕನಸು ನಿಜವಾಗಿರುವುದೇನೋ ಹೌದು. ಆದರೆ ನಾನು ಕೇವಲ ಒಂದು ಸರಣಿ ಅಥವಾ ಕೆಲವು ವರ್ಷಗಳ ಕಾಲ ಆಡಿ ಮಾಯವಾಗುವ ಆಟಗಾರನಾಗಲು ಬಯಸುವುದಿಲ್ಲ. ನನ್ನ ನಿಜವಾದ ಗುರಿ ಮುಂದಿನ 10 ರಿಂದ 20ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಆಡಲು ಬಯಸುತ್ತೇನೆ. ನಾನು ದೇಶಕ್ಕಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡಬೇಕು,' ಎಂದು ಹೇಳಿದ್ದಾರೆ.
ದಾಖಲೆಗಳ ಸರದಾರ ವಂಡರ್ ಕಿಂಡ್
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರದ ಆಟ ಆಡಿದ ಸೂರ್ಯವಂಶಿ ಅವರು 776 ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಮತ್ತು ಎಮರ್ಜಿಂಗ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಆಫ್ ಸೀಸನ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
'ನಾನು ಕಲಿಯಬೇಕಾದದ್ದು ತುಂಬಾ ಇದೆ'
ಈ ಬಗ್ಗೆ ಮಾತನಾಡಿದ ವೈಭವ್ 'ಐಪಿಎಲ್‌ನಲ್ಲಿ ಸಿಕ್ಕ ಪ್ರಶಸ್ತಿಗಳು ಮತ್ತು ಸಚಿನ್ ಸರ್ ಅವರ ಕಿರಿಯ ವಯಸ್ಸಿನ ಪದಾರ್ಪಣೆಯ ದಾಖಲೆಯನ್ನು ಮುರಿದಿರುವುದು ಖುಷಿ ಕೊಟ್ಟಿದೆ. ಆದರೆ ಅವು ಕೇವಲ ಅಂಕಿ-ಅಂಶಗಳಷ್ಟೇ. ನನ್ನ ಕ್ರಿಕೆಟ್ ಜರ್ನಿಯಲ್ಲಿ ನಾನು ಕಲಿಯಬೇಕಾದದ್ದು ಮತ್ತು ಸಾಧಿಸಬೇಕಾದದ್ದು ಇನ್ನೂ ತುಂಬಾ ಇದೆ,' ಎಂದು ಹೇಳಿದ್ದಾರೆ.
'ಕಣ್ಣಿಗೆ ಕಾಣುವುದು ಚೆಂಡು ಮಾತ್ರ, ಬೌಲರ್ ಅಲ್ಲ'
ವಿಶ್ವದ ಶ್ರೇಷ್ಠ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮ್ಮಿನ್ಸ್, ಭವನೇಶ್ವರ್ ಕುಮಾರ್ ಅವರಂತಹ ದಿಗ್ಗಜರನ್ನು ಯಾವುದೇ ಭಯವಿಲ್ಲದೆ ಐಪಿಎಲ್‌ನಲ್ಲಿ ಎದುರಿಸಿದ ಸೂರ್ಯವಂಶಿ, ತಮ್ಮ ಯಶಸ್ಸಿನ ರಹಸ್ಯವನ್ನು ಹಂಚಿಕೊಂಡಿದ್ದಾರೆ. 'ಮೈದಾನಕ್ಕಿಳಿದಾಗ ಬೌಲರ್ ಯಾರು ಎಂಬುದು ನನಗೆ ಮುಖ್ಯವಲ್ಲ. ಕೇವಲ ಚೆಂಡು ಮಾತ್ರ ನನ್ನ ಕಣ್ಣಿಗೆ ಕಾಣುತ್ತದೆ. ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ, ನೀವು ಮಾನಸಿಕವಾಗಿ ಎಷ್ಟು ದೃಢವಾಗಿದ್ದೀರಿ ಮತ್ತು ದೇಶಕ್ಕಾಗಿ ಆಡುವಾಗ ಎಷ್ಟು ಜವಾಬ್ದಾರಿಯುತವಾಗಿ ಬ್ಯಾಟ್ ಮಾಡುತ್ತೀರಿ ಎಂಬುದು ಮುಖ್ಯವಾಗುತ್ತದೆ,' ಎಂದು ಸೂರ್ಯವಂಶಿ ಹೇಳಿದ್ದಾರೆ.
ಈಗಾಗಲೇ ಐಪಿಎಲ್‌ನಲ್ಲಿ ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡು ಬೌಂಡರಿ, ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಎದುರಾಳಿ ತಂಡದ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಇವರ ಆಕ್ರಮಣಕಾರಿ ಆಟ ನೋಡಿದ ಅಭಿಮಾನಿಗಳು ಹಾಗೂ ಕ್ರಿಕೆಟ್ ದಿಗ್ಗಜರು ಕೂಡ ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಸದ್ಯ ಈಗ ವಿಶ್ವದ ಎಲ್ಲಾ ಕ್ರಿಕೆಟ್ ತಂಡಗಳ ಕಣ್ಣು ವೈಭವ್ ಮೇಲಿರುವುದಂತೂ ನಿಜ.
ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಇವರ ಈ ವಿಶ್ವಾಸ ಮತ್ತು ಸ್ಫೋಟಕ ಆಟದ ಶೈಲಿಯನ್ನು ಕೊಂಡಾಡಿದ್ದಾರೆ. ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಹಿರಿಯರ ತಂಡದ ಪರವಾಗಿ ಅಬ್ಬರಿಸಲು ಜಾಗತಿಕ ವೇದಿಕೆಯಲ್ಲಿ ಸಜ್ಜಾಗುತ್ತಿದ್ದಾರೆ. ಇವರ ಆಟ ನೋಡಲು ಇಡೀ ವಿಶ್ವವೇ ತುದಿಗಾಲಲ್ಲಿ ನಿಂತಿದೆ. ಒಟ್ಟಿನಲ್ಲಿ ಈ ಬಾಲಕ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಸಾಧನೆಗಳನ್ನು ಮಾಡಲಿ ಎನ್ನುವುದೇ ಎಲ್ಲರ ಆಶಯವಾಗಿದೆ.












Click it and Unblock the Notifications