ಕನಕಪುರದ ಮಗನಿಗೆ ರಾಜಮರ್ಯಾದೆ: ಮೆಣಸಿನಕಾಯಿ-ಬೆಳ್ಳುಳ್ಳಿ ಜೊತೆಗೆ 500 ಕೆಜಿ ಸೇಬಿನ ಹಾರ, ಪೂರ್ಣಕುಂಭ ಸ್ವಾಗತ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಶಿವಕುಮಾರ್ ಇದೇ ಮೊದಲ ಬಾರಿಗೆ ತವರು ಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿದರು. ಯುವಕರು, ತಾಯಂದಿರು ಕನಕಪುರದ ಮಗನನ್ನು ಬಹುವಿಜೃಂಭಣೆಯಿಂದ ಸ್ವಾಗತಿಸಿದರು. ಹಾರೋಹಳ್ಳಿಯಲ್ಲಿ ಸಿಎಂ ಮೇಲೆ ಮಲ್ಲಿಗೆ ಹೂವಿನ ಮಳೆ ಸುರಿಸಲಾಯಿತು. ದೃಷ್ಟಿ ನಿವಾರಣೆಗೆ ಮೆಣಸಿನಕಾಯಿ, ಬೆಳ್ಳುಳ್ಳಿ ಬೃಹತ್ ಹಾರ ಹಾಕಿ ಬೆಂಬಲಿಗರು ಸಂಭ್ರಮಿಸಿದರು. ಕನಕಪುರದಲ್ಲಿ ಭಾನುವಾರ ಹಬ್ಬದ ವಾತಾವರಣ ಕಂಡು ಬಂತು.
ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದ ಸಾರ್ವಜನಿಕರು ಡಿ.ಕೆ. ಶಿವಕುಮಾರ್ ಅವರಿಗೆ ಜೈಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಶುಭಾಶಯ ಕೋರುವ ಬ್ಯಾನರ್ ಗಳು, ಫ್ಲೆಕ್ಸ್ ಗಳು ಕಾಂಗ್ರೆಸ್ ಪಕ್ಷದ ಬಾವುಟಗಳು ರಾರಾಜಿಸಿದ್ದು ಕಂಡು ಬಂತು.

ಡಿಕೆಶಿಗಾಗಿ 1 ಕ್ವಿಂಟಾಲ್ ಮೆಣಸಿನಕಾಯಿ, ಬೆಳ್ಳುಳ್ಳಿ ಹಾರ
ನೂತನ ಸಿಎಂಗೆ ಯಾರ ದೃಷ್ಟಿಯೂ ತಾಕದಿರಲಿ ಎಂದು ಹಾರೋಹಳ್ಳಿ ಜನರು ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಪೋಣಿಸಿ ಮಾಡಿದ್ದ ಬೃಹತ್ ಹಾರ ಹಾಕಿದ್ದು ವಿಶೇಷವಾಗಿತ್ತು. ಈ ಹಾರಕ್ಕೆ ಸುಮಾರು 50 ಕೆ.ಜಿ ಒಣ ಮೆಣಸಿನಕಾಯಿ 70 ಕೆಜಿಗೂ ಹೆಚ್ಚು ಹಸಿಮೆಣಸಿನಕಾಯಿ ಮತ್ತು 50 ಕೆ.ಜಿಗೂ ಹೆಚ್ಚು ಬೆಳ್ಳುಳ್ಳಿ ಬಳಸಲಾಗಿತ್ತು.
500 ಕೆಜಿ ತೂಕದ ಸೇಬಿನ ಹಾರ ಹಾಕಿ ಸ್ವಾಗತ
ಸಿಎಂಗಾಗಿ ಕಗ್ಗಲೀಪುರ, ತುಂಗಣಿ, ನಾರಾಯಣಪುರಗಳಲ್ಲಿ ಅಭಿಮಾನಿಗಳು ಸುಮಾರು 500 ಕೆಜಿಗೂ ಹೆಚ್ಚು ಸೇಬು ಬಳಸಿ ಬೃಹತ್ ಹಾರಗಳನ್ನು ಮಾಡಿಸಲಾಗಿತ್ತು. ಕ್ರೇನ್ ಮೂಲಕ ಸಿಎಂಗೆ ಹಾರ ಹಾಕಿ ಜನರು ಅಭಿಮಾನ ಮೆರೆದರು. ತುಂಗಣಿಯಲ್ಲಿ ಎರಡು ಸೇಬಿನ ಹಾರಗಳು ಕಂಡು ಬಂದವು. ಹೆರಿಂದ್ಯಾಪನಹಳ್ಳಿಯಲ್ಲಿ ಮಾಡಿದ್ದ ಸೇಬಿನ ಹಾರ 30 ಅಡಿಗೂ ಹೆಚ್ಚು ಉದ್ದವಾಗಿತ್ತು. ಬೆಂಬಲಿಗರ ಸಂಭ್ರಮ ನೋಡಿದ ಡಿಕೆ ಶಿವಕುಮಾರ್ ಒಂದು ಕ್ಷಣ ಭಾವುಕರಾದರು.
ಸಿಎಂಗೆ ಪೂರ್ಣಕುಂಭ ಸ್ವಾಗತ: ಜಾನಪದ ಮೆರುಗು
"ನಾರಾಯಣಪುರದಲ್ಲಿ ಪೂಜಾಕುಣಿತ ಕಲಾವಿದರು ಸ್ವಾಗತಿಸಿದರೆ, ಕೊಳಗೊಂಡನಹಳ್ಳಿಯಲ್ಲಿ ನಂದಿಧ್ವಜ, ಪಟ ಕುಣಿತ, ನಂದಿಧ್ವಜ ಹೊತ್ತ ಕಲಾವಿದರು ಸ್ವಾಗತಿಸಿದರು. ಪ್ರತಿ ಊರಿನಲ್ಲೂ ತಮಟೆ, ನಗಾರಿ ಸದ್ದು ಮೇಳೈಸಿತ್ತು. ಬೇಕುಪ್ಪೆಯಲ್ಲಿ ಮನೆದೇವರು ಕೆಂಕೇರಮ್ಮನಿಗೆ ಹಾಗೂ ತುಂಗಣಿಯಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಸಹೋದರ ಡಿ.ಕೆ.ಸುರೇಶ್ ಅವರ ಜೊತೆಗೂಡಿ ಪೂಜೆ ಸಲ್ಲಿಸಿದರು. ಕ್ಷೇತ್ರದ ಗಡಿ ಭಾಗದಲ್ಲಿ ಮಹಿಳೆಯರು ಪೂರ್ಣಕುಂಭ ಮೂಲಕ ಊರ ಮಗನನ್ನು ಸ್ವಾಗತಿಸಿದ್ದು ಕಂಡು ಬಂತು.
ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಾಗ ಕರ್ನಾಟಕದಲ್ಲಿ ಯುವ ಯುಗ ಆರಂಭ ಎಂದು ಯುವಕರನ್ನು ಗಮನದಲ್ಲಿಟ್ಟುಕೊಂಡು ಘೋಷಣೆ ಮಾಡಿದ್ದರು. ಪ್ರತಿ ಊರಿನಲ್ಲೂ ಯುವಕರು ನೀಡಿದ ಕೊಡುಗೆಗೆ ಧನ್ಯವಾದ ತಿಳಿಸಿದರು. ಪ್ರತಿ ಊರಿನಲ್ಲೂ ಯುವಕರೇ ಮುಂದೆ ನಿಂತು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದ್ದು ಸಾಮಾನ್ಯ ಎಂಬಂತಿತ್ತು.
ನಿಮ್ಮ ಸೇವಕ ಎಂದು ಸಾಷ್ಟಾಂಗ ನಮಸ್ಕರಿಸಿದ ಡಿಕೆಶಿ
ಅದ್ಧೂರಿ ಸ್ವಾಗತ ಕಂಡು ಭಾವುಕರಾದ ಡಿಕೆ ಶಿವಕುಮಾರ್ ಅವರು, ನಿಮ್ಮ ಪ್ರೀತಿಗೆ ಆಭಾರಿ. ನಿಮ್ಮಿಂದ ನಾನು ವಿಧಾನಸೌಧದ ಮೂರನೇ ಮಹಡಿಯಲ್ಲಿದ್ದೇನೆ. ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ನಿಮಗೆಲ್ಲರಿಗೂ ಕೋಟಿ, ಕೋಟಿ ವಂದನೆಗಳು. ನಿಮ್ಮ ಪಾಲಿಗೆ ನಾನು ಸಿಎಂ ಅಲ್ಲ, ಸೇವಕ. ನನ್ನ ಕೊನೆಯುಸಿರು ಇರುವವರೆಗೂ ನಿಮ್ಮ ಮನೆ ಮಗನಾಗಿ ಸೇವೆ ಮಾಡುವೆ. ಸ್ವಂತ ಮಗನಂತೆ ನನ್ನನ್ನು ಬೆಳೆಸಿದ್ದೀರಿ. ನನ್ನ ಕ್ಷೇತ್ರದ ಪ್ರತಿಯೊಬ್ಬರಿಗೂ ಸಾಷ್ಟಾಂಗ ನಮಸ್ಕಾರಗಳು. ನಾನು ಈ ಕ್ಷೇತ್ರ ದಾಟಿ ಹೋದಾಗ ಮಾತ್ರ ಮುಖ್ಯಮಂತ್ರಿ. ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ ಎಂದು ಪುನರುಚ್ಚರಿಸಿದರು.
ಮುಂದುವರಿದು, ಅವರು, ನೀವೆ ನನ್ನ ಶಕ್ತಿ, ಬದುಕು ನೀವೇ, ಉಸಿರು ನೀವೇ. ನನ್ನ ಬದುಕಿನ ಕಷ್ಟ ಕಾಲದಲ್ಲಿ ನೀವು ನನಗೆ ನೆರಳಾಗಿದ್ದೀರಿ. ನಿಮ್ಮ ಸೇವಕನಾಗಿ ಮುಂದುವರಿದು, ಋಣ ತೀರಿಸುತ್ತೇನೆ ಎಂದರು.
ಚುನಾವಣಾ ಗೆಲುವು ಸ್ಮರಣೆ
ಕಗ್ಗಲೀಪುರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡಿದ ಶಿವಕುಮಾರ್ ಅವರು, ನಿಮ್ಮಿಂದಲೇ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ಚುನಾವಣಾ ಪ್ರಚಾರಕ್ಕೆ ಬರದೇ ಇದ್ದರೂ 1.23 ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದೀರಿ ಎಂದು ಸ್ಮರಿಸದರು. ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಗನಾಗಿ ಜನರ ಮುಂದೆ ನಿಂತಿದ್ದೇನೆ. ಈ ಕ್ಷೇತ್ರದ ಜನ ನನ್ನ ಪರವಾಗಿ ಪ್ರಾರ್ಥನೆ ಮಾಡಿದ್ದೀರಿ. ನೋವು, ದುಃಖವನ್ನು ಅನುಭವಿಸಿದ್ದೀರಿ. ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾನು ಕುಳಿತುಕೊಳ್ಳಬೇಕು ಎಂದು ನೀವು ಪ್ರಾರ್ಥನೆ ಮಾಡಿದ್ದರ ಫಲವಾಗಿ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ತಿಳಿಸಿದರು.
ಸ್ವಂತ ಸೂರಿನ ಭರವಸೆ ಕೊಟ್ಟ ಮುಖ್ಯಮಂತ್ರಿ
ಟಿ.ಬೇಕುಪ್ಪೆಯಲ್ಲಿ ಮಾತನಾಡಿದ ಅವರು, ಮನುಷ್ಯ ಹುಟ್ಟುವಾಗ ತಂದೆ ತಾಯಿ, ಗುರು, ದೇವರ ಹಾಗೂ ಸಮಾಜ ಋಣದಲ್ಲಿ ಹುಟ್ಟುತ್ತಾನೆ. ನಾನೀಗ ನಿಮ್ಮ ಋಣದಲ್ಲಿದ್ದು, ಅದನ್ನು ತೀರಿಸುವ ಕೆಲಸ ಮಾಡುತ್ತೇನೆ. ನಿಮ್ಮ ತಾಲ್ಲೂಕಿನ ಮಗ, ನಿಮ್ಮ ಸೇವಕ. ಈಗ 136 ಸ್ಥಾನಗಳನ್ನು ಗೆಲ್ಲಿಸಿ 2028ಕ್ಕೆ ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಏರುವಂತೆ ಮಾಡುವ ಜವಾಬ್ದಾರಿ ನಿಮ್ಮ ಬಳಿಯಿದೆ. ರಾಮನಗರ ಹಾಗೂ ಹಾರೊಹಳ್ಳಿಯ ಪ್ರತಿ ಬಡವರ ತಲೆಯ ಮೇಲೂ ಸ್ವಂತ ಸೂರು ಇರಬೇಕು ಎಂಬುದು ನನ್ನ ಆಸೆ. ಈ ಆಸೆಯನ್ನು ಆದಷ್ಟು ಬೇಗ ಸಾಕಾರಗೊಳಿಸಲಾಗುವುದು ಎಂದು ಭರವಸೆ ನಿಡಿದರು.
ವಾಹನ ಮುಂಭಾಗ ವೀರ ಗಂಗಾಧರ ಅಜ್ಜಯ್ಯನ ಫೋಟೋ
ಇನ್ನು ಡಿಕೆ ಶಿವಕುಮಾರ್ ಅವರು ರೋಡ್ ಶೋ ನಡೆಸಿದ ವಾಹನದ ಮುಂಭಾಗದಲ್ಲಿ ಅಜ್ಜಯ್ಯನ ಫೋಟೊ ಅಳವಡಿಸಿದ್ದು ವಿಶೇಷವಾಗಿತ್ತು. ವೀರ ಗಂಗಾಧರ ಅಜ್ಜಯ್ಯನ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂದೇಶವನ್ನು ಅವರು ಕೊಟ್ಟರು. ಬೇಕುಪ್ಪೆ ಗ್ರಾಮದಲ್ಲಿ ಭಾಷಣ ಮಾಡುವ ವೇಳೆ ಆಂಬ್ಯುಲೆನ್ಸ್ ಬಂದ ಕಾರಣಕ್ಕೆ ಮಧ್ಯದಲ್ಲೇ ಭಾಷಣ ನಿಲ್ಲಿಸಿದ ದಾರಿ ಮಾಡಿಕೊಡಲು ಸೂಚಿಸಿದರು. ಬಳಿಕ ಮಾತು ಮುಂದುವರಿಸಿದರು. ಅಭಿಮಾನಿಗಳು ಜಯಘೋಷ ಹಾಕಿದರು.














Click it and Unblock the Notifications