ಕೊರೊನಾಗೆ ತುತ್ತಾದ ಕುಟುಂಬಕ್ಕೆ 10 ಸಾವಿರ ನೀಡಿ: ದೆಹಲಿ ಕಾಂಗ್ರೆಸ್ ಒತ್ತಾಯ
ದೆಹಲಿ, ಜೂನ್ 15: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ದೆಹಲಿಯ ಸರ್ವಪಕ್ಷೆ ಸಭೆ ಕರೆದಿದ್ದರು.
ಈ ಸಭೆಯಲ್ಲಿ ''ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ಎಲ್ಲ ಕುಟುಂಬಗಳಿಗೂ 10 ಸಾವಿರ ರೂಪಾಯಿ ಪರಿಹಾರ ಘೋಷಿಸಬೇಕು'' ಎಂದು ದೆಹಲಿ ಕಾಂಗ್ರೆಸ್ ಒತ್ತಾಯಿಸಿದೆ ಎಂದು ಮೂಲಗಳು ತಿಳಿಸಿವೆ.
''ದೆಹಲಿಯಲ್ಲಿ ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಬೇಕು. ಜೊತೆಗೆ ಕೊರೊನಾ ಸೋಂಕಿಗೆ ಒಳಗಾದ ಕುಟುಂಬಕ್ಕೆ ಮತ್ತು ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಸಿಲುಕಿಕೊಂಡಿರುವ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ನೀಡಬೇಕು'' ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

''ದೆಹಲಿಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಇರುವುದರಿಂದ ಬ್ಯಾಚುಲರ್ ಆಫ್ ಫಾರ್ಮಸಿ ಅಥವಾ ನಾಲ್ಕನೇ ವರ್ಷದ ನರ್ಸಿಂಗ್‌ನ ವಿದ್ಯಾರ್ಥಿಗಳನ್ನು ಪರ್ಯಾಯವಾಗಿ ಕೊವಿಡ್ ವಿರುದ್ಧದ ಹೋರಾಟದಲ್ಲಿ ಬಳಸಿಕೊಳ್ಳಬೇಕು'' ಎಂದು ದೆಹಲಿ ಕಾಂಗ್ರೆಸ್ ಆಗ್ರಹಿಸಿದೆ.
ಕೇಂದ್ರ ಸಚಿವ ಅಮಿತ್ ಶಾ, ಎಎಪಿ ಸಂಸದ ಸಂಜಯ್ ಸಿಂಗ್, ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಚೌಧರಿ, ದೆಹಲಿ ಆರೋಗ್ಯ ಇಲಾಖೆ ಕಾರ್ಯದರ್ಶಿ ಸೇರಿದಂತೆ ಹಲವರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ದೆಹಲಿಯಲ್ಲಿ ಪ್ರಸ್ತುತ 41,182 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಇದರಲ್ಲಿ 15,823 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 24,032 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 1327 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.












Click it and Unblock the Notifications