ಬೇಸಿಗೆಯಲ್ಲಿ ಕೂದಲು ಉದುರುವುದನ್ನು ತಡೆಯಲು ಆರೈಕೆ ಹೀಗಿರಲಿ: ಬಿಳಿ ಕೂದಲ ಸಮಸ್ಯೆಯೂ ನಿವಾರಣೆಯಾಗುವುದು
Summer Hair Care Tips: ಬೇಸಿಗೆಯಲ್ಲಿ ಕೂದಲಿನ ಆರೈಕೆ ಬಹಳ ಮುಖ್ಯ. ಬೇಸಿಗೆಯಲ್ಲಿ ಬಿಸಿಲ ಧಗೆಗೆ ಅತಿಯಾಗಿ ಬೆವರುತ್ತದೆ.ಹೀಗಾದಾಗ ಸ್ಕಾಲ್ಪ್‌ನಲ್ಲಿ ಎಣ್ಣೆ ಏಳಲು ಆರಂಭವಾಗುತ್ತದೆ.ಇದರಿಂದ ತಲೆಹೊಟ್ಟು, ತುರಿಕೆ ಮತ್ತು ಕೂದಲು ಉದುರುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಇದಲ್ಲದೆ, ಅತಿಯಾದ ಶಾಖದಿಂದ ಬಳಲಿ ಬೆಂಡಾಗುವಾಗ ಜನರು ಹೆಚ್ಚು ತಂಪು ಪಾನೀಯಗಳನ್ನು ಸೇವಿಸುತ್ತಾರೆ.ತಂಪು ಪಾನೀಯಗಳೆಂದರೆ ಅತಿಯಾದ ಸಕ್ಕರೆ. ಇದು ಕೂದಲು ಉದುರುವ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೂದಲಿನ ಈ ಸಮಸ್ಯೆಗಳನ್ನು ತಡೆಯಲು ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಉತ್ಪನ್ನಗಳ ಮೊರೆ ಹೋಗುತ್ತೇವೆ. ಅದರೂ ಅನೇಕ ಬಾರಿ ಈ ಉತ್ಪನ್ನಗಳಿಂದ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.
ಆದರೆ ಬೇಸಿಗೆಯಲ್ಲಿ ಸರಿಯಾದ ರೀತಿಯಲ್ಲಿ ಆರೈಕೆ ಮಾಡಿದರೆ ಕೂದಲಿನ ಸಮಸ್ಯೆ ನಿವಾರಣೆಯಾಗುವುದು.ಹಾಗಿದ್ದರೆ ಬೇಸಿಗೆಯಲ್ಲಿ ಕೂದಲಿನ ಆರೈಕೆ ಹೇಗಿರಬೇಕು ಎನ್ನುವುದರ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ.

ಕೂದಲಿಗೆ ತಂಪು ನೀಡುವ ಎಣ್ಣೆ:
ಆಯುರ್ವೇದದ ಪ್ರಕಾರ, ಕೂದಲಿಗೆ ಎಣ್ಣೆ ಹಚ್ಚುವುದು ಅತ್ಯಂತ ಮುಖ್ಯವಾಗಿದೆ. ಇದಕ್ಕಾಗಿ ದಾಸವಾಳ, ನೆಲ್ಲಿಕಾಯಿ, ಕರಿಬೇವು, ತೆಂಗಿನಕಾಯಿ ಮತ್ತು ಬ್ರಾಹ್ಮಿಯಂತಹ ಗಿಡಮೂಲಿಕೆಗಳಿಂದ ತಯಾರಿಸಿದ ಎಣ್ಣೆಯನ್ನು ಕೂದಲಿಗೆ ಬಳಸಬಹುದು.
ಕೂದಲ ಎಣ್ಣೆ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು:
ತೆಂಗಿನ ಎಣ್ಣೆ - 2 ಕಪ್
ಎಳ್ಳೆಣ್ಣೆ - 1/2 ಕಪ್
ಕ್ಯಾಸ್ಟರ್ ಆಯಿಲ್ - 1/2 ಕಪ್
ಕರಿಬೇವು - ಒಂದು ಹಿಡಿ
ಬೇವಿನ ಎಲೆಗಳು - 10
ನೆಲ್ಲಿಕಾಯಿ - 5 (ಅಥವಾ 5 ಚಮಚ ನೆಲ್ಲಿಕಾಯಿ ಪುಡಿ)
ಮೆಂತ್ಯೆ ಬೀಜ - 1 ಚಮಚ
ದಾಸವಾಳದ ಹೂವು - 3-4
ದಾಸವಾಳದ ಎಲೆಗಳು - ಒಂದು ಹಿಡಿ
ಬ್ರಾಹ್ಮಿ ಪುಡಿ - 3 ಚಮಚ
ಬಳಸುವ ವಿಧಾನ:
* ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಸೇರಿಸಿ ಮಿಶ್ರಣ ದಪ್ಪಗಾಗುವವರೆಗೆ ಕುದಿಸಿ.
* ನಂತರ ಗ್ಯಾಸ್ ಆಫ್ ಮಾಡಿ.
* ಈ ಮಿಶ್ರಣ ಸ್ವಲ್ಪ ತಣ್ಣಗಾಗಲು ಬಿಡಿ.
* ನಂತರ ಅದನ್ನು ಫಿಲ್ಟರ್ ಮಾಡಿ ಗಾಜಿನ ಪಾತ್ರೆಯಲ್ಲಿ ಹಾಕಿಡಿ.
* ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ಎಣ್ಣೆಯನ್ನು ಹಚ್ಚಿ.
ರಾತ್ರಿ ಎಣ್ಣೆಯಿಂದ ಮಸಾಜ್ ಮಾಡಿ ಮತ್ತು ಮರುದಿನ ಬೆಳಿಗ್ಗೆ ಕೂದಲನ್ನು ತೊಳೆಯಿರಿ. ಅಥವಾ ಕೂದಲು ತೊಳೆಯುವ 2 ಗಂಟೆಗಳ ಮೊದಲು ಕೂದಲಿಗೆ ಈ ಎಣ್ಣೆ ಹಚ್ಚಿ.
ಪ್ರತಿದಿನ ನೆಲ್ಲಿಕಾಯಿ ಸೇವಿಸಿ:
ನಿಮ್ಮ ಕೂದಲು ಅತಿಯಾಗಿ ಉದುರುತ್ತಿದ್ದರೆ ಅರ್ಧ ಟೀ ಚಮಚ ಆಮ್ಲಾ ಪುಡಿಯನ್ನು ನಿತ್ಯ ಸೇವಿಸಿ.ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆಲ್ಲಿಕಾಯಿಯನ್ನು ಕ್ಯಾಂಡಿ ಅಥವಾ ಸಿರಪ್ ರೂಪದಲ್ಲಿಯೂ ಸೇವಿಸಬಹುದು.ನಿಯಮಿತವಾಗಿ ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಕೂದಲಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಇದು ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ತಡೆಯುತ್ತದೆ. ಜೊತೆಗೆ ತಲೆಹೊಟ್ಟು ನಿವಾರಣೆಗೂ ಸಹಾಯ ಮಾಡುತ್ತದೆ.ಇದು ಕೂದಲಿನ ಬೇರುಗಳನ್ನು ಬಲಪಡಿಸಿ, ರಕ್ತದ ಹರಿವನ್ನು ಸುಧಾರಿಸುತ್ತದೆ. ಇದಲ್ಲದೆ, ಬ್ರಾಹ್ಮಿ, ಭೃಂಗರಾಜ ಮತ್ತು ಕರಿಬೇವಿನ ಎಲೆಗಳ ಜೊತೆ ನೆಲ್ಲಿಕಾಯಿ ಬಳಸಿದರೆ ಕೂದಲು ಉದುರುವಿಕೆ ಮತ್ತು ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸಬಹುದು.
ಅಲೋವೆರಾ ಜೆಲ್:
ಅಲೋವೆರಾ ಜೆಲ್ ಅನ್ನು ಕೂದಲಿಗೆ ಸ್ನಾನ ಮಾಡುವ 30 ನಿಮಿಷಗಳ ಮೊದಲು ಹಚ್ಚಬೇಕು.ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಮೃದುಗೊಳಿಸಲು ಮತ್ತು ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಲೋವೆರಾ ನಿಮ್ಮ ಕೂದಲನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಇದರಲ್ಲಿ ಯಾವುದೇ ಹಾನಿಕಾರಕ ಕೆಮಿಕಲ್‌ಗಳಿರುವುದಿಲ್ಲ. ಹಾಗಾಗಿ ಇದು ನಿಮ್ಮ ಕೂದಲನ್ನು ಪೋಷಿಸುತ್ತದೆ ಮತ್ತು ಬಲಪಡಿಸುತ್ತದೆ.
ದಾಸವಾಳದ ಚಹಾ:
ಕೂದಲಿನ ಆರೋಗ್ಯಕ್ಕಾಗಿ ದಾಸವಾಳದ ಚಹಾವನ್ನು ಪ್ರತಿದಿನ ಸೇವಿಸಬಹುದು. ದಾಸವಾಳ ಚಹಾವು ಕೂದಲಿನ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುವ ಅದ್ಭುತ ಪಾನೀಯವಾಗಿದೆ.ಇದು ಕೂದಲು ಉದುರುವಿಕೆಯನ್ನು ತಡೆಯುವುದರ ಜೊತೆಗೆ ಬಿಳಿ ಕೂದಲಿನ ಸಮಸ್ಯೆಯಿಂದಲೂ ಮುಕ್ತಿ ನೀಡುತ್ತದೆ.ದಾಸವಾಳ ಹೂವುಗಳನ್ನು ಬಳಸಿ ಮನೆಯಲ್ಲಿಯೇ ದಾಸವಾಳ ಚಹಾವನ್ನು ತಯಾರಿಸಬಹುದು.
ದಾಸವಾಳದ ಚಹಾ ತಯಾರಿಸುವುದು ಹೇಗೆ:
1 ಕಪ್ ನೀರಿಗೆ 1 ಚಮಚ ಒಣಗಿದ ದಾಸವಾಳದ ಹೂವುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ.ಸ್ವಲ್ಪ ತಣ್ಣಗಾದ ಬಳಿಕ ಸೋಸಿ ಕುಡಿಯಿರಿ.
ಅಕ್ಕಿ ನೀರು:
ಅಕ್ಕಿ ನೆನೆಸಿಟ್ಟ ಅಥವಾ ಅಕ್ಕಿ ತೊಳೆದ ನೀರು ಕೂಡಾ ಕೂದಲ ಆರೈಕೆಗೆ ಬೆಸ್ಟ್. ಕೂದಲು ತೊಳೆಯುವ 20 ನಿಮಿಷಗಳ ಮುಂಚೆ ಈ ನೀರನ್ನು ಕೂದಲಿಗೆ ಹಚ್ಚಬೇಕು.ಅಕ್ಕಿ ನೀರಿನಲ್ಲಿ ಇನೋಸಿಟಾಲ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಸಂಯುಕ್ತಗಳಿವೆ. ಇದು ಒಣ ಕೂದಲಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇನ್ನು ಅಕ್ಕಿ ನೀರಿನಲ್ಲಿ ಅಮೈನೋ ಆಮ್ಲಗಳಿದ್ದು, ಇದು ಕೂದಲಿನ ಬೇರುಗಳನ್ನು ಗಟ್ಟಿಯಾಗಿಸುತ್ತದೆ.ಈ ಮೂಲಕ ಕೂದಲು ಉದುರುವುದನ್ನು ತಡೆಯಬಹುದು.
ನ್ಯಾಚ್ಯುರಲ್ ಹೇರ್ ಮಾಸ್ಕ್:
ಮಜ್ಜಿಗೆ, ನೆಲ್ಲಿಕಾಯಿ, ದಾಸವಾಳ, ಬೇವು, ಅಲೋವೆರಾ ಮುಂತಾದ ಗಿಡಮೂಲಿಕೆಗಳಿಂದ ತಯಾರಿಸಿದ ಹೇರ್ ಮಾಸ್ಕ್ ಅನ್ನು ವಾರಕ್ಕೊಮ್ಮೆ ಕೂದಲಿಗೆ ಹಚ್ಚಿಕೊಳ್ಳಿ.
ಯೋಗ ಮತ್ತು ಪ್ರಾಣಾಯಾಮ:
ಅನುಲೋಮ-ವಿಲೋಮ, ಭ್ರಮರಿ, ಶೀತಲಿ ಮತ್ತು ಶಿತ್ಕರಿ ಮುಂತಾದ ಪ್ರಾಣಾಯಾಮ ವ್ಯಾಯಾಮಗಳು ದೇಹದಲ್ಲಿನ ಹೆಚ್ಚುವರಿ ಪಿತ್ತರಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಮೂಲಕ ಕೂದಲು ಬೂದು ಬಣ್ಣಕ್ಕೆ ತಿರುಗುವ ಪ್ರಕ್ರಿಯೆಯನ್ನು ನಿಧಾನ ಮಾಡಬಹುದು. ಜೊತೆಗೆ ಈ ವ್ಯಾಯಾಮಗಳು ಬೇಸಿಗೆಯಲ್ಲಿ ತಂಪು ಪಾನೀಯಗಳನ್ನು ಕುಡಿಯುವ ಹಂಬಲವನ್ನು ಕಡಿಮೆ ಮಾಡುತ್ತವೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications