ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಇತಿಹಾಸ ನೆನಪಿಸಿಕೊಳ್ಳಲಿದೆ ಎಂದ ಪ್ರಧಾನಿ ನರೇಂದ್ರ ಮೋದಿ
Women's Reservation Bill: ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇಂದಿನಿಂದ (ಏಪ್ರಿಲ್ 16) ಮೂರು ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿದೆ. ಕೇಂದ್ರ ಸರ್ಕಾರವು ಸಂವಿಧಾನ (131 ನೇ ತಿದ್ದುಪಡಿ) ಮಸೂದೆ, ಕೇಂದ್ರ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ ಮತ್ತು ಸೀಮಾ ನಿರ್ಣಯ ಮಸೂದೆಯೊಂದಿಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದೆ.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಬಹುನಿರೀಕ್ಷಿತ ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಸಬಲೀಕರಣದ ಒಂದು "ಐತಿಹಾಸಿಕ ಹೆಜ್ಜೆ" ಎಂದು ಬಣ್ಣಿಸಿದರು. ಮಹಿಳಾ ಮೀಸಲಾತಿಯ ಅಗತ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, "ಈ ಮಹತ್ವದ ಕಾಯ್ದೆಯು 25 ರಿಂದ 30 ವರ್ಷಗಳ ಹಿಂದೆಯೇ ಜಾರಿಗೆ ಬರಬೇಕಿತ್ತು. ಆದರೆ, ಈಗ ನಮಗೆ ಆ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ. ದೇಶದ ಅಭಿವೃದ್ಧಿಯ ಪಥದಲ್ಲಿ ಮಹಿಳೆಯರಿಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನೀಡುವುದು ಇಂದಿನ ಅಗತ್ಯವಾಗಿದೆ," ಎಂದು ಅವರು ಅಭಿಪ್ರಾಯಪಟ್ಟರು.

'ಈ ಮಸೂದೆಯನ್ನು ಯಾರೂ ವಿರೋಧಿಸಿಲ್ಲ'
ಇದಕ್ಕೆ ವ್ಯಕ್ತವಾಗುತ್ತಿರುವ ರಾಜಕೀಯ ವಿರೋಧಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ, "ನಾನು ಬಹುತೇಕ ಎಲ್ಲಾ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ್ದೇನೆ. ಯಾರೂ ಕೂಡ ತಾತ್ವಿಕವಾಗಿ ಈ ಮಸೂದೆಯನ್ನು ವಿರೋಧಿಸಿಲ್ಲ. ಆದರೆ, ಕೆಲವು ರಾಜಕೀಯ ಹಿತಾಸಕ್ತಿಗಳಿಂದಾಗಿ ಅಪಸ್ವರ ಕೇಳಿಬರುತ್ತಿದೆ. ನಾವೆಲ್ಲರೂ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಇದನ್ನು ಜಾರಿಗೊಳಿಸಿದರೆ, ದೇಶಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಾಗಿ ಇತಿಹಾಸ ನಮ್ಮನ್ನು ಸದಾ ನೆನಪಿಸಿಕೊಳ್ಳುತ್ತದೆ," ಎಂದು ಮನವಿ ಮಾಡಿದರು.
'ರಾಜಕೀಯ ಬಣ್ಣ ಬಳಿಯುವುದು ಬೇಡ'
"ಮಹಿಳಾ ಮೀಸಲಾತಿ ಮಸೂದೆಯು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾದ ವಿಜಯವಲ್ಲ. ಇದು ಇಡೀ ರಾಷ್ಟ್ರಕ್ಕೆ ಸಿಗುವ ಸಾಮೂಹಿಕ ಯಶಸ್ಸು. ಈ ಮಸೂದೆಗೆ ರಾಜಕೀಯ ಬಣ್ಣ ಬಳಿಯುವುದು ಬೇಡ. ಮಹಿಳೆಯರ ಶಕ್ತಿಯನ್ನು ಗುರುತಿಸಿ, ಅವರಿಗೆ ನ್ಯಾಯ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ಸದನದಲ್ಲಿ ತಿಳಿಸಿದರು.
"ನಾವು ಭಾರತೀಯರು ರಾಷ್ಟ್ರಕ್ಕೆ ಹೊಸ ದಿಕ್ಕು ನೀಡಲು ಒಗ್ಗೂಡುತ್ತಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ನಾವು ಅರ್ಥಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ನಾವು ಅರ್ಥಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ. ಭಾರತ ಪ್ರಜಾಪ್ರಭುತ್ವದ ತಾಯಿ. ಈ ಅಭಿವೃದ್ಧಿಯ ಪ್ರಯಾಣದಲ್ಲಿ ಹೊಸ ಆಯಾಮವನ್ನು ಸೇರಿಸಲು ನಮಗೆ ಪವಿತ್ರವಾದ ಅವಕಾಶ ನೀಡಲಾಗಿದೆ. ರಾಷ್ಟ್ರ ನಿರ್ಮಾಣದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆಯಾದ ಮಹಿಳೆಯರನ್ನು ಸೇರಿಸಿಕೊಳ್ಳುವ ಅವಕಾಶ ನಮಗೆ ಸಿಕ್ಕಿರುವುದು ನಮ್ಮ ಅದೃಷ್ಟ," ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.












Click it and Unblock the Notifications