ಮೆಜೆಸ್ಟಿಕ್ ಟರ್ಮಿನಲ್-1 ಪಾರ್ಕಿಂಗ್ ಸಮಸ್ಯೆಗೀಗ ಮುಕ್ತಿ: 3.29 ಕೋಟಿ ವೆಚ್ಚದ ನೂತನ ವ್ಯವಸ್ಥೆಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ಸಾರಿಗೆ ಕೇಂದ್ರವಾದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೆಜೆಸ್ಟಿಕ್) ದೀರ್ಘಕಾಲದಿಂದ ಕಾಡುತ್ತಿದ್ದ ಪಾರ್ಕಿಂಗ್ ಹಾಗೂ ಮಳೆನೀರು ನಿಲ್ಲುವ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಸಾರಿಗೆ ಮತ್ತು ಮುಜರಾಯಿ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರು ಇಂದು ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1 ರಲ್ಲಿ 3.29 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಿರುವ ನೂತನ ಪಾರ್ಕಿಂಗ್ ಪ್ರದೇಶಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಮೆಜೆಸ್ಟಿಕ್ ಎಂದೇ ಚಿರಪರಿಚಿತವಾಗಿರುವ ಈ ಬಸ್ ನಿಲ್ದಾಣವು ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಹಾಗೂ ಸಾವಿರಾರು ಬಸ್‌ಗಳ ಓಡಾಟಕ್ಕೆ ಸಾಕ್ಷಿಯಾಗುತ್ತದೆ. ರಾಜ್ಯದ ಮೂಲೆ ಮೂಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಕೇಂದ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಅತ್ಯಗತ್ಯವಾಗಿತ್ತು. ವಿಶೇಷವಾಗಿ ಬಸ್ ನಿಲ್ದಾಣದ ಟರ್ಮಿನಲ್-1ರ ಬಳಿಯಿರುವ ವಿಶ್ರಾಂತಿ ಗೃಹಕ್ಕೆ ಹೊಂದಿಕೊಂಡಂತಿರುವ ಸ್ಥಳವು ಈ ಹಿಂದೆ ಸಂಪೂರ್ಣವಾಗಿ ಗುಂಡಿಗಳಿಂದ ತುಂಬಿ ಹೋಗಿತ್ತು. ಮಳೆಗಾಲದಲ್ಲಿ ಮಳೆ ನೀರು ಹೊರಹೋಗಲು ಜಾಗವಿಲ್ಲದೆ ಆವರಣವೆಲ್ಲಾ ಕೆಸರುಮಯವಾಗುತ್ತಿತ್ತು. ಇದರಿಂದಾಗಿ ಬಸ್ ನಿಲ್ದಾಣಕ್ಕೆ ಬರುವ ಸಾರ್ವಜನಿಕ ಪ್ರಯಾಣಿಕರಿಗೆ, ಬಸ್ ಚಾಲಕರಿಗೆ, ನಿರ್ವಾಹಕರಿಗೆ ಹಾಗೂ ಸ್ಥಳದಲ್ಲಿ ಕಾರ್ಯನಿರ್ವಹಿಸುವ ನಿಗಮದ ಸಿಬ್ಬಂದಿಗಳಿಗೆ ತೀವ್ರ ತೊಂದರೆಯಾಗುತ್ತಿತ್ತು. ವಾಹನಗಳ ಸುಗಮ ಸಂಚಾರಕ್ಕೂ ಇದು ದೊಡ್ಡ ಅಡ್ಡಿಯಾಗಿತ್ತು.

ಈ ಸಮಸ್ಯೆಯ ಗಂಭೀರತೆಯನ್ನು ಅರಿತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಹಿಂದೆ ಬಸ್ ನಿಲ್ದಾಣಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪ್ರಯಾಣಿಕರು ಮತ್ತು ಸಿಬ್ಬಂದಿಯ ಹಿತದೃಷ್ಟಿಯಿಂದ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ತುರ್ತಾಗಿ ಈ ಪಾರ್ಕಿಂಗ್ ಆವರಣವನ್ನು ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಸಚಿವರ ಸೂಚನೆಯ ಮೇರೆಗೆ ತ್ವರಿತವಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಇದೀಗ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ.
ಒಟ್ಟು ಎರಡುವರೆ ಎಕರೆ (2.5 ಎಕರೆ) ವಿಸ್ತೀರ್ಣದ ಈ ಪ್ರದೇಶವನ್ನು ವಾಹನ ನಿಲುಗಡೆಗೆ ಅತ್ಯಂತ ಸೂಕ್ತ ಹಾಗೂ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ನೂತನ ಪಾರ್ಕಿಂಗ್ ಜಾಗದಲ್ಲಿ ಏಕಕಾಲಕ್ಕೆ ಅಂದಾಜು 100 ಬಸ್‌ಗಳನ್ನು ನಿಲುಗಡೆ ಮಾಡಲು ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ ವೇಳೆಯಲ್ಲಿ ನಿಲ್ದಾಣದಲ್ಲಿ ಭದ್ರತೆ ಮತ್ತು ಬೆಳಕಿನ ವ್ಯವಸ್ಥೆಗಾಗಿ ಪಾರ್ಕಿಂಗ್ ಸ್ಥಳದಾದ್ಯಂತ 11 ಹೈಮಾಸ್ಟ್ ಮಾದರಿಯ ವಿದ್ಯುತ್ ದೀಪದ ಕಂಬಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಪ್ರತ್ಯೇಕ ವಿದ್ಯುತ್ ಪ್ಯಾನಲ್ ಕೊಠಡಿಯನ್ನು ಸಹ ನಿರ್ಮಾಣ ಮಾಡಲಾಗಿದ್ದು, ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಪ್ರಮುಖವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಬಸ್‌ಗಳ ನಿಲುಗಡೆಗೆ ಇಲ್ಲಿ ಪ್ರತ್ಯೇಕವಾಗಿ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಇದರಿಂದ ದೂರದ ಊರುಗಳಿಂದ ಬರುವ ಬಸ್‌ಗಳು ಮತ್ತು ಸಿಬ್ಬಂದಿಗೆ ಹೆಚ್ಚು ಅನುಕೂಲವಾಗಲಿದೆ. ಮಳೆಗಾಲದಲ್ಲಿ ಎದುರಾಗುತ್ತಿದ್ದ ವಾಹನ ದಟ್ಟಣೆ ಹಾಗೂ ಕೆಸರಿನ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರಾರಸಾ ನಿಗಮದ (KSRTC) ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ (ಭಾ.ಆ.ಸೇ) ಉಪಸ್ಥಿತರಿದ್ದರು. ಅಲ್ಲದೆ, ನಿಗಮದ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರಿಗೆ ಇಲಾಖೆಯ ಹಲವು ಗಣ್ಯರು ಭಾಗವಹಿಸಿದ್ದರು. ಒಟ್ಟಾರೆಯಾಗಿ, ಈ ನೂತನ ಪಾರ್ಕಿಂಗ್ ವ್ಯವಸ್ಥೆಯು ಮೆಜೆಸ್ಟಿಕ್ ಬಸ್ ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಸಾರಿಗೆ ಸೇವೆಗಳ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸಲಿದೆ.













Click it and Unblock the Notifications