ದೆಹಲಿ ಚುನಾವಣಾ ಫಲಿತಾಂಶ : ಯಾರು, ಏನು ಹೇಳಿದರು?
ನವದೆಹಲಿ, ಫೆ. 10 : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಬ್ಬರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನೆಲ ಕಚ್ಚಿವೆ. ದೆಹಲಿಯಲ್ಲಿ ಮತ್ತೊಮ್ಮೆ ಆಪ್ ಅಧಿಕಾರಕ್ಕೆರುತ್ತಿರುವುದು ದೇಶದ ರಾಜಕೀಯ ರಂಗದಲ್ಲಿ ಹೊಸ ಚಿತ್ರ ಮೂಡಲು ಕಾರಣವಾಗಿದೆ. ದೆಹಲಿ ಫಲಿತಾಂಶದ ಕುರಿತು ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಅಭಿನಂದಿಸಿದ್ದಾರೆ. ದ್ವೇಷ ರಾಜಕಾರಣದಲ್ಲಿ ತೊಡಗಿರುವ ಶಕ್ತಿಗಳಿಗೆ ಸೋಲುಂಟಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.[ಚಿತ್ರಗಳಲ್ಲಿ: ನೆಲಕಚ್ಚಿದ ಕಮಲ, ಎಎಪಿಗೆ ಅಭೂತಪೂರ್ವ ಜಯ]
ಈ ಫಲಿತಾಂಶ ದೆಹಲಿಗೆ ಮಾತ್ರ ಸಂಬಂಧಿಸಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಕ್ತವಾಗಿರುವ ಜನಾಭಿಪ್ರಾಯವಲ್ಲ ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಪ್ರತಿಕ್ರಿಯೆ ನೀಡಿದ್ದಾರೆ. ದೆಹಿ ಚುನಾವಣೆ ಬಗ್ಗೆ ಯಾರು ಏನು ಹೇಳಿದರು ನೋಡೋಣ ಬನ್ನಿ. [ಫಲಿತಾಂಶದ ತಾಜಾ ಮಾಹಿತಿ ಇಲ್ಲಿದೆ]

ಅಭಿನಂದನೆ ಸಲ್ಲಿಸಿದ ಮೋದಿ
ದೆಹಲಿ ಚುನಾವಣೆಯಲ್ಲಿ ಗೆಲವು ಸಾಧಿಸಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ದೂರವಾಣಿ ಕರೆ ಮಾಡಿ ಕೇಜ್ರಿವಾಲ್ ಅವರನ್ನು ಅಭಿನಂದಿಸಿದ್ದಾರೆ. ನಿಮ್ಮನ್ನು ವೈಯಕ್ತಿಕವಾಗಿ ಬಂದು ಭೇಟಿಯಾಗುತ್ತೇನೆ ಎಂದು ಕೇಜ್ರಿವಾಲ್ ಮೋದಿ ಅವರಿಗೆ ತಿಳಿಸಿದ್ದಾರೆ. 2-3ದಿನದಲ್ಲಿ ಕೇಜ್ರಿವಾಲ್ ಮೋದಿಯನ್ನಯ ಭೇಟಿಯಾಗುವ ಸಾಧ್ಯತೆ ಇದೆ.

ದ್ವೇಷ ರಾಜಕಾರಣ ಮಾಡುವವರಿಗೆ ಸೋಲು
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಜಯಗಳಿಸಿರುವುದು ರಾಜಕಾರಣಕ್ಕೆ ಹೊಸ ತಿರುವು ದೊರಕಲು ಕಾರಣವಾಗಿದ್ದು ದ್ವೇಷ ರಾಜಕಾರಣದಲ್ಲಿ ತೊಡಗಿರುವ ಶಕ್ತಿಗಳಿಗೆ ಬಹು ದೊಡ್ಡ ಸೋಲುಂಟಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಚುನಾವಣೆಯ ಫಲಿತಾಂಶವು ಜನತೆಯ ವಿಜಯವನ್ನು ಸಂಕೇತಿಸುತ್ತಿದೆ ಮಾತ್ರವಲ್ಲ ಅವಿಶ್ವಾಸ ಮತ್ತು ದ್ವೇಷವನ್ನು ಹರಡುತ್ತಿರುವವರಿಗೆ ಸೋಲು ಉಂಟಾಗಿದೆ ಎಂದು ಬ್ಯಾನರ್ಜಿ ಟ್ವಿಟರ್ ಮೂಲಕ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ವಿರುದ್ಧದ ಜನಾಭಿಪ್ರಾಯವಲ್ಲ
ದೆಹಲಿ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಕ್ತವಾಗಿರುವ ಜನಾಭಿಪ್ರಾಯವಲ್ಲ ಎಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ. ಮತದಾರರು ಆಮ್ ಆದ್ಮಿ ಪಕ್ಷಕ್ಕೆ ಸಂಪೂರ್ಣ ಬಹುಮತದಲ್ಲಿ ಸರ್ಕಾರ ರಚಿಸಲು ಎರಡನೇ ಅವಕಾಶ ನೀಡಿದ್ದು , ಬಿಜೆಪಿಯನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ದೆಹಲಿ ಜನರ ಆಯ್ಕೆ ಸರಿಯಾಗಿದೆ : ಅಣ್ಣಾ
ಚುನಾವಣೆಯಲ್ಲಿ ದೆಹಲಿ ಜನರ ಆಯ್ಕೆ ಸರಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಪ್ರತಿಕ್ರಿಯೆ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಕೇಜ್ರಿವಾಲ್ ದೆಹಲಿ ಜನರ ವಿಶ್ವಾಸ ಗೆದ್ದಿದ್ದಾರೆ. ಆದ್ದರಿಂದ ಕೇಜ್ರಿವಾಲ್‌ರನ್ನು ಮತದಾರರು ಗೆಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. [ಕೇಜ್ರಿವಾಲ್ ಗೆ ಅಣ್ಣಾ ಸಲಹೆ ಏನು?]

ಮೋದಿ ಗೆಲುವಿನ ಓಟಕ್ಕೆ ಹಿನ್ನಡೆ ಉಂಟಾಗಿದೆ
'ದೆಹಲಿ ಚುನಾವಣೆಯ ಸೋಲಿನಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿನ ನಾಗಾಲೋಟಕ್ಕೆ ಹಿನ್ನಡೆ ಉಂಟಾಗಿದೆ' ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ದೆಹಲಿ ಜನರು ಆಮ್ ಆದ್ಮಿ ಪಕ್ಷದ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು ಆಪ್‌ಗೆ ಹೋಗಿವೆ' ಎಂದು ತಿಳಿಸಿದ್ದಾರೆ.

ಜನರ ತೀರ್ಪಿಗೆ ತಲೆಬಾಗುತ್ತೇವೆ
ಅರವಿಂದ್ ಕೇಜ್ರಿವಾಲ್ ಅವರಿಗೆ ಗೆಲುವಿಗಾಗಿ ಅಭಿನಂದನೆ ಸಲ್ಲಿಸುತ್ತೇನೆ. ಜನತೆಯ ತೀರ್ಪಿಗೆ ನಾವು ತಲೆ ಬಾಗುತ್ತೇವೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿ ಜನರು ಕೇಜ್ರಿವಾಲ್ ಅವರಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆ.

ಸೋಲಿನ ಹೊಣೆ ಹೊರುತ್ತೇವೆ
ದೆಹಲಿ ಚುನಾವಣೆ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ. ಕಿರಣ್ ಬೇಡಿ ಅವರನ್ನು ಕಣಕ್ಕಿಳಿಸಿದ್ದು ನಮ್ಮ ತಪ್ಪು ನಿರ್ಧಾರವಾಗಿರಲಿಲ್ಲ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಪ್ರತಿಕ್ರಿಯೆ ನೀಡಿದ್ದಾರೆ. ಕೇಜ್ರಿವಾಲ್‌ಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ದೆಹಲಿ ಜನರು ಆಪ್ ಪಕ್ಷವನ್ನು ಆಯ್ಕೆ ಮಾಡಿದ್ದಾರೆ
ದೆಹಲಿ ಜನರು ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರಿಗೆ ನನ್ನ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಜನರ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮೋದಿ ಹವಾ ಮುಗಿದ ಅಧ್ಯಾಯ
ಪ್ರಧಾನಿ ನರೇಂದ್ರ ಮೋದಿ ಅವರ ಹವಾ ಮುಗಿದ ಅಧ್ಯಾಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಷ್ಟ್ರೀಯ ಪಕ್ಷಗಳೆಲ್ಲಾ ಸೇರಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಸಾಧ್ಯವಿಲ್ಲ ಎಂದು ಗೌಡರು ಹೇಳಿದ್ದಾರೆ.

ಅನಿರೀಕ್ಷಿತ ಫಲಿತಾಂಶ
ಆಮ್ ಆದ್ಮಿ ಪಕ್ಷದ ಅಭೂತಪೂರ್ವ ಗೆಲುವಿನಿಂದ ದೇಶದಲ್ಲಿ ಈಗಲೂ ಜಾತ್ಯತೀತತೆ ಇದೆ ಎಂಬುದು ಸಾಬೀತಾಗಿದೆ ಎಂದು ಡಿಎಂಕೆ ನಾಯಕಿ ಕನಿಮೋಳಿ ಹೇಳಿದ್ದಾರೆ. ನಿಜಕ್ಕೂ ಇಂದಿನ ಫಲಿತಾಂಶ ಅನಿರೀಕ್ಷಿತವಾದದ್ದು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications