ದೆಹಲಿಯಲ್ಲಿ 3 ಮಕ್ಕಳ ನಿಗೂಢ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್
ನವದೆಹಲಿ, ಜುಲೈ 28: ದೆಹಲಿಯಲ್ಲಿ ಒಂದೇ ಮನೆಯ ಮೂವರು ಸಹೋದರಿಯರು ಮೃತರಾದ ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಮ್ಯಾಜಿಸ್ಟ್ರಿಯಲ್ ತನಿಖೆಯ ವರದಿ ಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಈ ಮೂವರು ಸಹೋದರಿಯರಿಗೆ ಇವರ ತಂದೆ ನೀಡಿದ 'ಮಾತ್ರೆ'ಯೇ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಈ ವರದಿ ಹೇಳಿದೆ. ಮಕ್ಕಳು ಅಪೌಷ್ಟಿಕತೆಯಿಂದ ಸಾವಿಗೀಡಾಗಿದ್ದಾರೆ ಎಂದು ಮೇಲ್ನೋಟಕ್ಕೆ ಗ್ರಹಿಸಲಾಗಿತ್ತು. ಆದರೆ ಮಕ್ಕಳ ಶವ ಪತ್ತೆಯಾದ ಜಾಗದಲ್ಲಿ ಕಂಡುಬಂದ ಕೆಲವು ಮಾತ್ರೆಗಳು ಅನುಮಾನ ಹುಟ್ಟಿಸಿದ್ದವು.
ಇದೀಗ ಈ ವರದಿಯೂ ಮಾತ್ರೆಯ ಬಗ್ಗೆ ಉಲ್ಲೇಖಿಸಿದೆ. ಅದೂ ಅಲ್ಲದೆ ಮಕ್ಕಳು ಸಾವಿಗೀಡಾದಾಗಿನಿಂದ ತಂದೆ ನಾಪತ್ತೆಯಾಗಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಮಕ್ಕಳಿಗೆ ಯಾವುದೋ ಮಾತ್ರೆ ನೀಡಿದ್ದರಿಂದ ಮಕ್ಕಳು ವಾಂತಿ ಮತ್ತು ಬೇಧಿಯಿಂದ ನಿತ್ರಾಣರಾಗಿದ್ದಾರೆ. ಹಾಗೆಯೇ ಅವರು ಆಹಾರವಿಲ್ಲದೆ, ನಿಶ್ಶಕ್ತಿಯಿಂದ ಮೃತರಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ನಾಪತ್ತೆಯಾಗಿರುವ ತಂದೆಯನ್ನು ಪತ್ತೆ ಮಾಡಲು ಪೊಲಿಸರು ಬಲೆ ಬೀಸಿದ್ದಾರೆ.
ದೆಹಲಿಯ ಮಂಡಾವಾಲಿಯಲ್ಲಿ 2,4, 8 ವರ್ಷದ ಮೂವರು ಸಹೋದರಿಯರು ಜುಲೈ 25 ರಂದು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡ ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರು ಆಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸ್ವತಃ ದೆಹಲಿ ಸರ್ಕಾರವೇ ಆದೇಶಿಸಿದ್ದು, ತನಿಖೆ ಪ್ರಗತಿಯಲ್ಲಿದೆ.












Click it and Unblock the Notifications