ಪಥ ಬದಲಾವಣೆ : ಓಮನ್ ಕರಾವಳಿಯತ್ತ ಮುಂಗಾರು
ನವದೆಹಲಿ,ಜೂ. 12: ಈ ಬಾರಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಲಿದೆ ಎನ್ನುವ ಆತಂಕದಲ್ಲಿದ್ದ ರೈತರಿಗೆ ಈಗ ಮತ್ತೊಂದು ಆತಂಕ ಎದುರಾಗಿದೆ. ಮೊದಲೇ ಒಂದು ವಾರ ತಡವಾಗಿ ಪ್ರವೇಶಿಸಿದ್ದ ಮುಂಗಾರು ಈಗ ತನ್ನ ಪಥವನ್ನು ಬದಲಾಯಿಸಿ ಓಮನ್ ಕರಾವಳಿಯತ್ತ ಸಾಗುತ್ತಿದೆ.
ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ನಾನೌಕ್ ಚಂಡಮಾರುತವಾಗಿ ಮಾರ್ಪಟ್ಟಿದ್ದು ದಕ್ಷಿಣ ಹಾಗೂ ಉತ್ತರ ಒಳನಾಡಿನತ್ತ ಚಲಿಸಬೇಕಾಗಿದ್ದ ನೈರುತ್ಯ ಮುಂಗಾರು ಮಾರುತಗಳು ಪಥವನ್ನು ಬದಲಾಯಿಸಿ ವಾಯುವ್ಯ ದಿಕ್ಕಿನಲ್ಲಿರುವ ಓಮನ್ ಕರಾವಳಿಯತ್ತ ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ನಾನೌಕ್ ಚಂಡಮಾರುತದಿಂದಾಗಿ ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ, ಗುಜರಾತ್‌ನ ತೀರ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ .

ಚಂಡಮಾರುತದಿಂದಾಗಿ ದೇಶದ ಗುಜರಾತ್ ಕರಾವಳಿಯಲ್ಲಿ ಗಂಟೆಗೆ 35ರಿಂದ 45ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದ್ದು ಗಾಳಿಯ ವೇಗ ಗಂಟೆಗೆ 55ಕಿ.ಮೀ.ಗಳಿಗೆ ಹೆಚ್ಚುವ ಸಾಧ್ಯತೆಗಳಿವೆ. ಗೋವಾ ಮತ್ತು ಗುಜರಾತ್‌ನ ಮೀನುಗಾರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕೇರಳಕ್ಕೆ ತಡವಾಗಿ ಆಗಮಿಸಿದ ಮುಂಗಾರು ಮಳೆ ಈಗಾಗಲೇ ದುರ್ಬಲವಾಗಿದೆ. ರಾಜ್ಯ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣದಿಂದ ಕೂಡಿದ ಮಳೆಯಾಗುತ್ತಿದೆ.
ನಾನೌಕ್ ಚಂಡಮಾರುತದಿಂದಾಗಿ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ,ಕೊಡಗು ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡದಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications