ಕಾಂಗ್ರೆಸ್ಸಿಗೆ ಮುಸ್ಲಿಮರ ಬೆಂಬಲ ಅಬಾಧಿತ: ಬುಖಾರಿ
ನವದೆಹಲಿ, ಏ.4: ಸಾರ್ವತ್ರಿಕ ಚುನಾವಣಾ ಕಾಲವಿದು. ಹಾಗಾಗಿ ಪುರಾತನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪರಂಪರಾಗತ ಮುಸ್ಲಿಂ ಮತ ಬ್ಯಾಂಕ್ ನತ್ತ ಮತ್ತೊಮ್ಮೆ ಸಹಾಯಹಸ್ತ ಚಾಚಿದ್ದಾರೆ. ತತ್ಸಂಬಂಧ ರಾಷ್ಟ್ರವನ್ನು ಪ್ರತಿನಿಧಿಸುವ ಮುಸ್ಲಿಂ ನಾಯಕರಿಗೆ ಮೊನ್ನೆ ಆಮಂತ್ರಣ ನೀಡಿ, ಮತ ನಿಷ್ಠೆಯನ್ನು ಬಹಿರಂಗವಾಗಿ ಘೋಷಿಸುವಂತೆ ಕೋರಿದ್ದರು.
ಆದರೆ ತಕ್ಷಣಕ್ಕೇ ದಿಲ್ಲಿಯ ಜಾಮಾ ಮಸೀದಿ ಶಾಹಿ ಇಮಾಮ್ ಸಯದ್ ಅಹಮದ್ ಬುಖಾರಿ ನೇತೃತ್ವದ ಮುಸ್ಲಿಂ ನಿಯೋಗವು ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಸಾಕಷ್ಟು ಚಿಂತನ-ಮಂಥನ ನಡೆಸಿದ ಮುಸ್ಲಿಂ ನಿಯೋಗವು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸುವುದಕ್ಕೆ ಹಿಂದೇಟು ಹಾಕಿದೆ. ಆದರೆ ಈ ಬಗ್ಗೆ ಇಂದು ಮಧ್ಯಾಹ್ನದ ವೇಳೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ತಾಜಾ ವರದಿಗಳ ಪ್ರಕಾರ ದಿಲ್ಲಿಯ ಜಾಮಾ ಮಸೀದಿ ಶಾಹಿ ಇಮಾಮ್ ಸಯದ್ ಅಹಮದ್ ಬುಖಾರಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಆದರೆ ಉತ್ತರಪ್ರದೇಶದಲ್ಲಿ ಆರ್ ಜೆಡಿ ಪಕ್ಷವನ್ನೂ ಮತ್ತು ಪಶ್ಚಿಮ ಬಂಗಾಲದಲ್ಲಿ ಟಿಎಂಸಿ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ.
ಈ ಮಧ್ಯೆ, ಸಯದ್ ಅಹಮದ್ ಬುಖಾರಿ ಕಿರಿಯ ಸೋದರ, Jama Masjid United Forum ಅಧ್ಯಕ್ಷರೂ ಆದ ಸಯದ್ ಯಾಹ್ಯಾ ಬುಖಾರಿ ಈ ಸಂಬಂಧ ಗುರುವಾರ ಹೇಳಿಕೆಯೊಂದನ್ನು ನೀಡಿದ್ದಾರೆ: 'ದೇಶದಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್ಸಿಗಿಂತ ಅಪಾಯಕಾರಿಯಾದ ಪಕ್ಷ ಯಾವುದೂ ಇಲ್ಲ. ದೇಶದಲ್ಲಿ ಅತ್ಯಂತ ಕೋಮುವಾದಿ ಪಕ್ಷವೆಂದರೆ ಅದು ಕಾಂಗ್ರೆಸ್. ಆ ಪಕ್ಷವು ಮುಸ್ಲಲ್ಮಾನರ ಬೆನ್ನಿಗೆ ಚೂರು ಹಾಕಿದೆ' ಎಂದು ಎಚ್ಚರಿಸುತ್ತಾ ಆತಂಕ ವ್ಯಕ್ತಪಡಿಸಿದ್ದಾರೆ.

ಆದರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂಬ ಸೋದರ ಶಾಹಿ ಇಮಾಮ್ ಸಯದ್ ಅಹಮದ್ ಬುಖಾರಿ ಅವರ ನಿಲುವನ್ನು ತಾವು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ ಸಯದ್ ಯಾಹ್ಯಾ ಬುಖಾರಿ ಇದಕ್ಕೆ ಕಾರಣವೂ ಇಲ್ಲದಿಲ್ಲ. ದೇಶದಲ್ಲಿ ಯಾವುದೇ ಮುಸ್ಲಿಮರನ್ನು ಕೇಳಿ ನೋಡಿ ಕಾಂಗ್ರೆಸ್ ಪಕ್ಷವು ಅತ್ಯಂತ ಕೋಮುವಾದಿ ಎಂಬುದು ವೇದ್ಯವಾಗುತ್ತದೆ.
ಬಿಜೆಪಿ ಅತ್ಯಂತ ಕೋಮುವಾದಿ ಪಕ್ಷ ಎಂದು ಮುಸ್ಲಿಮರು ಹೇಳುತ್ತಾರೆ ನಿಜ. ಆದರೆ ಬಿಜೆಪಿಯವರು ಮುಸ್ಲಿಮರ ಮೇಲೆ ಮುಂದಿನಿಂದ ದಾಳಿ ಮಾಡುತ್ತಾರೆ. ಆದರೆ ಕಾಂಗ್ರೆಸ್ಸಿನವರು ಹಾಗಲ್ಲ. ಸದಾ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುತ್ತಾರೆ. ಇಂತಹವರಿಂದ ನಮ್ಮನ್ನು ರಕ್ಷಿಸಿಕೊಳ್ಳಲಾಗುವುದಿಲ್ಲ' ಎಂದು ಕಿಡಿಕಾರಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಬಿಜೆಪಿ ಪಕ್ಷ ಗುಜರಾತಿನಲ್ಲಿ ಮುಸ್ಲಿಮರ ನರಮೇಧ ನಡೆಸಿತು. ಅದು ಕಹಿ ಸಂಗತಿ. ಅದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಸಹ ಮುಸ್ಲಿಮರನ್ನು ಬಿಟ್ಟಿಲ್ಲ ಎಂಬುದು ಹೆಚ್ಚು ಆಘಾತಕಾರಿ ಎಂದು ಸಯದ್ ಯಾಹ್ಯಾ ಬುಖಾರಿ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 30-35 ವರ್ಷಗಳ ಇತಿಹಾಸವನ್ನು ಕೆದಕಿದರೆ ಭಾಗಲ್ಪುರ, ಮೀರತ್, ಮೊರಾದಾಬಾದ್ ಅಥವಾ ಸೂರತ್ ಹಿಂಸಾಕಾಂಡಗಳೆಲ್ಲವೂ ಕಾಂಗ್ರೆಸ್ ಆಡಳಿದಲ್ಲೇ ನಡೆದಿರುವುದು ಎಂಬುದನ್ನು ಮರೆಯುವ ಹಾಗಿಲ್ಲ. ಅದು ಇಂದಿಗೂ ಮುಂದುವರಿದುಕೊಂಡು ಬಂದಿದೆ. ಮುಗ್ಧ ಮುಸ್ಲಿಮರನ್ನು ಇಂದಿಗೂ ಜೈಲಿಗಟ್ಟಲಾಗುತ್ತಿದೆ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.
ಚುನಾವಣೆ ಬಂತೆಂದರೆ ಕಾಂಗ್ರೆಸ್ಸಿನವರು ಮುಸ್ಲಿಮರ ಮನೆ ಬಾಗಿಲಿಗೆ ಬರುತ್ತಾರೆ. ಈಗ ಹೇಳಿ ಯಾಕಾಗಿ ನಾವು ಕಾಂಗ್ರೆಸ್ಸನ್ನು ಬೆಂಬಲಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.












Click it and Unblock the Notifications