ಜಂತರ್ ಮಂತರ್‌ನಲ್ಲಿ ಕೋಮು ಘೋಷಣೆ: ಬಿಜೆಪಿಯ ಅಶ್ವಿನಿ ಉಪಾಧ್ಯಾಯ, ಇತರ ಮೂವರ ಬಂಧನ
ನವದೆಹಲಿ, ಆ.10: ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಉದ್ರಿಕ್ತ ಘೋಷಣೆಗಳನ್ನು ಎತ್ತಿರುವ ವಿಡಿಯೋಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಮತ್ತು ಇತರ ಮೂವರನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.
ಭಾರತ್ ಜೋಡೋ ಆಂದೋಲನದಲ್ಲಿ ಉದ್ರಿಕ್ತ ಘೋಷಣೆಗಳನ್ನು ಎತ್ತಿರುವ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದರು. ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಹಾಗೆಯೇ ದೆಹಲಿ ಪೊಲೀಸರು ಸೋಮವಾರ ಬಿಜೆಪಿಯ ಅಶ್ವಿನಿ ಉಪಾಧ್ಯಾಯಗೆ ಸಮನ್ಸ್ ನೀಡಿದ್ದರು ಮತ್ತು ವಿಚಾರಣೆಗೆ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ತಿಳಿಸಿದ್ದರು.
ಈಗ ವಿನೀತ್ ಕ್ರಾಂತಿ ಮತ್ತು ಪಿಂಕಿ ಭಯ್ಯಾರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು, ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಈ ಪ್ರಕರಣದಲ್ಲಿ ಯಾರು ಹೊಣೆಗಾರರಾಗುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಏನಿದು ಪ್ರಕರಣ?
ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಮು ಘೋಷಣೆಗಳನ್ನು ಎತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಭಾರತ್ ಜೋಡೋ ಆಂದೋಲನದಿಂದ ಪ್ರತಿಭಟನೆ ಆಯೋಜಿಸಲಾಗಿದೆ. ವಕೀಲ ಮತ್ತು ಮಾಜಿ ಬಿಜೆಪಿ ವಕ್ತಾರ ಅಶ್ವಿನಿ ಉಪಾಧ್ಯಾಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ಭಾರತ್ ಜೋಡೋ ಆಂದೋಲನದ ಮಾಧ್ಯಮ ಉಸ್ತುವಾರಿ ಶೀಪ್ರಾ ಶ್ರೀವಾಸ್ತವ ತಿಳಿಸಿದ್ದಾರೆ. ಆದಾಗ್ಯೂ, ಕೋಮು ಘೋಷಣೆಗಳನ್ನು ಹಾಕಿದವರಿಗೂ ನಮ್ಮಈ ಆಂದೋಲನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಈ ಆಂದೋಲನದ ಮಾಧ್ಯಮ ಉಸ್ತುವಾರಿ ಶೀಪ್ರಾ ಶ್ರೀವಾಸ್ತವ ಹೇಳಿದ್ದಾರೆ.
ಇನ್ನು ಕೋವಿಡ್ -19 ಮಾರ್ಗಸೂಚಿಯ ಪ್ರಕಾರ ಕೂಟಗಳನ್ನು ಕೂಡುವುದು ನಿಷೇಧಿಸಿಲಾಗಿರುವ ಹಿನ್ನೆಲೆ ಆರಂಭದಲ್ಲಿ ಈ ಆಂದೋಲನದ ಕಾರ್ಯಕ್ರಮಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಹೊಸದಿಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ''ಈ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಆದರೆ ಬಳಿಕ ಉಪಾಧ್ಯಾಯ ಬೇರೆಯೇ ಒಳಾಂಗಣ ಸ್ಥಳ ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿತ್ತು,'' ಎಂದಿದ್ದಾರೆ.

''ಸ್ಥಳದಲ್ಲಿ ಪೊಲೀಸ್ ವ್ಯವಸ್ಥೆಗಳಿದ್ದು ಪೊಲೀಸರು ಸುಮಾರು 50 ಜನರು ಬರುವ ನಿರೀಕ್ಷೆಯಲ್ಲಿದ್ದರು. ಆದರೆ ಇದ್ದಕ್ಕಿದ್ದಂತೆ ಅನೇಕ ಜನರು ಸಣ್ಣ ಗುಂಪುಗಳಲ್ಲಿ ಸೇರಲು ಪ್ರಾರಂಭಿಸಿ ಈ ಕಾರ್ಯಕ್ರಮದಲ್ಲಿ ಹಲವಾರು ಜನರು ಸೇರಿದರು,'' ಎಂದು ಅಧಿಕಾರಿ ತಿಳಿಸಿದ್ದಾರೆ. 'ಶಾಂತಿಯುತ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಆದರೆ ಸ್ಥಳದಿಂದ ತೆರಳುವಾಗ, ಘೋಷಣೆಗಳನ್ನು ಕೂಗಿದ್ದಾರೆ,'' ಎಂದು ಕೂಡಾ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ
ಅಶ್ವಿನಿ ಉಪಾಧ್ಯಾಯ ಹೇಳುವುದೇನು?
ಸೋಮವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಅಶ್ವಿನಿ ಉಪಾಧ್ಯಾಯ ತಮ್ಮ ಪತ್ರದಲ್ಲಿ, ಸೇವ್ ಇಂಡಿಯಾ ಫೌಂಡೇಶನ್‌ನಿಂದ ಸೋಮವಾರ ಜಂತರ್ ಮಂತರ್ ಬಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
"ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಒಬ್ಬ ವ್ಯಕ್ತಿಯು ದ್ವೇಷಪೂರಿತ ಭಾಷಣ ಮಾಡುತ್ತಿರುವುದನ್ನು ಕಾಣಬಹುದು ಮತ್ತು ಕೆಲವರು ನನಗೆ ತಿಳಿದಿಲ್ಲದಿದ್ದರೂ ಅಥವಾ ಜನರನ್ನು ನೋಡಿಲ್ಲದಿದ್ದರೂ ಟ್ವಿಟ್ಟರ್, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ನನ್ನನ್ನು ನಿಂದಿಸುತ್ತಿದ್ದಾರೆ. ವಿಡಿಯೋದಲ್ಲಿರುವ ಈ ಜನರನ್ನು ನಾನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ," ಎಂದು ಬಿಜೆಪಿ ಅಶ್ವಿನಿ ಉಪಾಧ್ಯಾಯ ಹೇಳುತ್ತಾರೆ.
ವೈರಲ್ ವಿಡಿಯೋಗಳಲ್ಲಿ ಕೋಮು ಘೋಷಣೆಗಳನ್ನು ಕೂಗುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅಶ್ವಿನಿ ದೆಹಲಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications