ರಫೇಲ್ ಒಪ್ಪಂದ ಪ್ರಕ್ರಿಯೆ: ಸುಪ್ರೀಂಕೋರ್ಟ್‌ಗೆ ವಿವರ ಸಲ್ಲಿಸಿದ ಕೇಂದ್ರ ಸರ್ಕಾರ
ನವದೆಹಲಿ, ಅಕ್ಟೋಬರ್ 27: ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರವು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ನಿರ್ಣಯ ಕೈಗೊಳ್ಳುವಿಕೆಯ ಪ್ರಕ್ರಿಯೆಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ.
ಫ್ರಾನ್ಸ್‌ನೊಂದಿಗೆ ಮಾಡಿಕೊಂಡ ಒಪ್ಪಂದದ ತಾಂತ್ರಿಕ ವಿವರ ಮತ್ತು ಬೆಲೆಗಳ ಮಾಹಿತಿಯನ್ನು ಹೊರತುಪಡಿಸಿ ಉಳಿದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಎಲ್ಲ ವಿವರಗಳನ್ನು ಅಕ್ಟೋಬರ್ 29ರ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಅ.10ರಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ನ್ಯಾಯಪೀಠ, ಕೇಂದ್ರ ಸರ್ಕಾರದಿಂದ ಮಾಹಿತಿ ಬಯಸಿತ್ತು. ಬಳಿಕ ವಿಚಾರಣೆಯನ್ನು ಅ.29ಕ್ಕೆ ನಿಗದಿಪಡಿಸಿತ್ತು.

ನ್ಯಾಯಾಲಯದ ಪ್ರಧಾನ ಕಾರ್ಯದರ್ಶಿ ಅವರಿಗೆ ಮೂರು ಲಕೋಟೆಗಳಲ್ಲಿ ಪ್ರಕ್ರಿಯೆಯ ವಿವರಗಳನ್ನು ಶನಿವಾರ ಸಲ್ಲಿಸಲಾಗಿದೆ.
ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಅವಧಿಗಳಲ್ಲಿ ಯುದ್ಧ ವಿಮಾನ ಖರೀದಿಗೆ ಮಾಡಿಕೊಂಡ ಒಪ್ಪಂದದ ವಿವರಗಳನ್ನು ಒದಗಿಸುವಂತೆ ಮತ್ತು ಒಪ್ಪಂದದ ಕುರಿತು ತನಿಖೆಗೆ ಆಗ್ರಹಿಸಲು ಹಾಗೂ ಒಪ್ಪಂದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ರಾಜಕೀಯ ಲಾಭ ಪಡೆದುಕೊಳ್ಳುವ ಸಲುವಾಗಿ ಈ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವುಗಳನ್ನು ವಜಾಗೊಳಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ನ್ಯಾಯಪೀಠವು, ರಫೇಲ್ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಅರ್ಜಿದಾರರ ಆರೋಪವನ್ನು ಈಗ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿತ್ತು.












Click it and Unblock the Notifications