ಅಸಲಿಗೆ ಸಿಬಿಐ ರಚನೆಯೇ ಸಂವಿಧಾನಬಾಹಿರ: ಹೈಕೋರ್ಟ್

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಗೌಹಾಟಿ ಹೈಕೋರ್ಟ್ ಕೇಂದ್ರೀಯ ತನಿಖಾ ದಳ CBI ರಚನೆಯೇ ಸಂವಿಧಾನಬಾಹಿರ. ಅದು ನಡೆಸುವ ಯಾವುದೇ ವಿಚಾರಣೆಯೂ ಕಾನೂನುಬದ್ಧವಲ್ಲ ಎಂದು ಸ್ಪಷ್ಟ ನುಡಿಗಳಲ್ಲಿ ಹೇಳಿದೆ.
ಇದರಿಂದ, ವಾಡಿಕೆಯಂತೆ ಆಡಳಿತಾರೂಢ ಕೇಂದ್ರ ಸರಕಾರದ ಕೈಗೊಂಬೆಯಾಗುವ CBI ಗಲಿಬಿಲಿಗೊಂಡಿದೆ. ಇನ್ನು, ಗೌಹಾಟಿ ಹೈಕೋರ್ಟಿನ ಆದೇಶ ಹೊರಬೀಳುತ್ತಿದ್ದಂತೆ ತನ್ನ ಅಸ್ತಿತ್ವದ ಬಗ್ಗೆ ಕಂಗಾಲಾಗಿರುವ ಸಿಬಿಐಗೆ ಆರೋಪಿಗಳ ಬಂಧನ/ ವಿಚಾರಣೆ ಬಗ್ಗೆ ಏನು ಮಾಡಬೇಕೋ ತಿಳಿಯದಂತಾಗಿದೆ. ಆದರೆ ಈಗಾಗಲೇ ದಾಖಲಿಸಿಕೊಂಡಿರುವ ಪ್ರಕರಣಗಳ ವಿಚಾರಣೆ ಮುಂದುವರಿಸುವಂತೆ ಗೌಹಾಟಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಅಮೆರಿಕದ FBIಗೆ ಸರಿಸಾಟಿಯಾಗಿದ್ದೇವೆ ಎಂದು ಬೀಗುತ್ತಿದ್ದ CBI ಇದರಿಂದ ಚಿಂತೆಗೀಡಾಗಿದೆ. ದೇಶದ ಅತ್ಯುನ್ನತ ತನಿಖಾದಳ ಸಿಬಿಐ ಇದೀಗ ಗೌಹಾಟಿ ಹೈಕೋರ್ಟಿನ ತೀರ್ಪು ಪ್ರಶ್ನಿಸಿ, ಸೋಮವಾರ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ. ಆದರೆ ಮೊದಲೇ ಸಿಬಿಐ ಅಸ್ತಿತ್ವದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಸುಪ್ರೀಂಕೋರ್ಟ್ ಈ ಬಗ್ಗೆ ಏನು ಹೇಳುತ್ತದೋ... ಕುತೂಹಲಕಾರಿಯಾಗಿದೆ.
ಸಿಬಿಐಗೆ ಕಾನೂನು ಮಾನ್ಯತೆಯೇ ಇಲ್ಲ: CBI ರಚನೆ/ ಸ್ಥಾಪನೆ ಕುರಿತು ನವೇಂದ್ರ ಕುಮಾರ್ ಎಂಬುವವರು ಗೌಹಾಟಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಐಎ ಅನ್ಸಾರಿ ಮತ್ತು ನ್ಯಾ. ಇಂದಿರಾ ಶಾ ಅವರ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ. ನವೇಂದ್ರ ಕುಮಾರ್ ವಿರುದ್ಧ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಕೈಬಿಡುವಂತೆ ಕೋರ್ಟ್, ಸಿಬಿಐಗೆ ಸ್ಪಷ್ಟ ಆದೇಶ ನೀಡಿದೆ.
ಕೋರ್ಟ್ ''ವಾದ'' ಏನು?: 1963ರ ಏಪ್ರಿಲ್ ನಲ್ಲಿ ಸಿಬಿಐ ಸ್ಥಾಪನೆಗೊಂಡಿದ್ದು ದೆಹಲಿ ವಿಶೇಷ ಪೊಲೀಸ್ ದಳ ಸ್ಥಾಪನೆ ಕಾಯಿದೆಯಲ್ಲಿ (Delhi Special Police Establishment-1946) ಒಳಗೊಂಡಿಲ್ಲ. ಹೀಗಾಗಿ ಸಿಬಿಐ, ಪೊಲೀಸ್ ಇಲಾಖೆಯ ಅಂಗವಲ್ಲ. ಕೇವಲ ಗೃಹ ಸಚಿವಾಲಯದ ನಿಲುವಳಿ (impugned resolution) ಮೇಲೆ ಸ್ಥಾಪಿಸಲಾಗಿದೆ. ಅಂದಿನ ರಾಷ್ಟ್ರಪತಿಗಳ ಒಪ್ಪಿಗೆಯನ್ನೂ ಪಡೆದಿಲ್ಲ. ಅದಕ್ಕೆ ಕಾನೂನು ಮಾನ್ಯತೆಯೇ ಇಲ್ಲ. ಹೀಗಾಗಿ CBI ಸ್ಥಾಪನೆಯೇ ಅಸಾಂವಿಧಾನಿಕ ಎಂದು ಕೋರ್ಟ್ ಹೇಳಿದೆ.












Click it and Unblock the Notifications