ಕೇಂದ್ರ ಬಜೆಟ್; ಟ್ರ್ಯಾಕ್ಟರ್ ಜಾಥಾಗೆ ಮುಂದಾದ 125 ಮಂದಿ ಮೇಲೆ FIR
ನವದೆಹಲಿ, ಫೆಬ್ರುವರಿ 01: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಕೆಲವು ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿದ್ದರೆ, ಬಹುಪಾಲು ಸಂಘಗಳು ಹೋರಾಟ ಮುಂದುವರೆಸಿವೆ. ಆದರೆ ಇಂದಿನ ಕೇಂದ್ರ ಬಜೆಟ್ ಸಂದರ್ಭ ಸಂಸತ್ತಿಗೆ ಟ್ರ್ಯಾಕ್ಟರ್ ಮೆರವಣಿಗೆ ಯೋಜನೆ ರೂಪಿಸಿದ್ದ ರೈತ ಸಂಘಗಳು ಈ ಪ್ರಯತ್ನದಿಂದ ಹಿಂದೆ ಸರಿದಿವೆ.
ಹೀಗಾಗ್ಯೂ ಟ್ರ್ಯಾಕ್ಟರ್ ಮೆರವಣಿಗೆ ಕೈಗೊಳ್ಳಲು ಕೆಲ ರೈತರು ಮುಂದಾಗಿದ್ದು, ಫಿರೋಜಾಬಾದ್ ಜಿಲ್ಲೆಯಲ್ಲಿ ಸೆಕ್ಷನ್ 144ರ ಅಡಿಯಲ್ಲಿ ಹಾಗೂ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಆರೋಪದಡಿಯಲ್ಲಿ 125 ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ನಡುವೆ ಸೋಮವಾರ ಸಿಂಘು ಗಡಿಯಲ್ಲಿ ಮತ್ತೆ ಗಲಭೆ ವಾತಾವರಣ ಸೃಷ್ಟಿಯಾಗಿತ್ತು. ಹರಿಯಾಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮಂದಸೌರದಲ್ಲಿ ರೈಲು ತಡೆ ಎಚ್ಚರಿಕೆ ನೀಡಿದ್ದರು. ಬ್ಯಾರಿಕೇಡ್ ಗಳನ್ನು ತೆಗೆದು, ತಮ್ಮ ಪ್ರತಿಭಟನೆಗೆ ಅವಕಾಶ ನೀಡಬೇಕೆಂದು ರೈತರು ಕೇಳಿಕೊಂಡಿದ್ದು, ಇದಕ್ಕೆ ಪೊಲೀಸರು ನಿರಾಕರಿಸಿದ ಕಾರಣ ಗಲಭೆ ಏರ್ಪಟ್ಟಿತ್ತು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೋಮವಾರ ದೆಹಲಿಯಾದ್ಯಂತ ಪೊಲೀಸರು ಶೀಲ್ಡ್ ಹಾಗೂ ಖಡ್ಗಗಳೊಂದಿಗೆ ಗಸ್ತು ತಿರುಗುತ್ತಿದ್ದುದು ಕಂಡುಬಂತು. ಗಣರಾಜ್ಯೋತ್ಸವದಂದು ನಡೆದ ಗಲಭೆಯಲ್ಲಿ ಪೊಲೀಸರ ಮೇಲೆ ಖಡ್ಗದಿಂದ ದಾಳಿ ನಡೆಸಲಾಗಿದ್ದು, ಇದೀಗ ಪೊಲೀಸರಿಗೆ ಖಡ್ಗ ಹಾಗೂ ಶೀಲ್ಡ್ ಗಳನ್ನು ನೀಡಲಾಗಿದೆ.
ಪಿಐಎಲ್ ತಿರಸ್ಕರಿಸಿದ ನ್ಯಾಯಾಲಯ: ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ. ರೈತರ ಪ್ರತಿಭಟನೆಯನ್ನು ನಿಯಂತ್ರಿಸಿ ಕೆಂಪು ಕೋಟೆಗೆ ಅವರು ನುಗ್ಗುವುದನ್ನು ತಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿ ಪೊಲೀಸರು ಹಾಗೂ ತನಿಖಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಪೊಲೀಸರು ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಕೆಲವರ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ. ಇಷ್ಟು ಬೇಗ ಈ ವಿಚಾರದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ತಿಳಿಸಿ ವಜಾಗೊಳಿಸಿದೆ.












Click it and Unblock the Notifications