ಪೊರಕೆ ನೆಲಕ್ಕೆ ತಾಗಿಸದೆಯೇ 'ಕಸಗುಡಿಸಿದ' ಹೇಮಾಮಾಲಿನಿ!
ನವದೆಹಲಿ, ಜುಲೈ 13: ಲೋಕಸಭೆ ಚುನಾವಣೆಗೂ ಮುನ್ನ ಹೊಲದಲ್ಲಿ ಟ್ರ್ಯಾಕ್ಟರ್ ಏರಿ ಕಾಣಿಸಿಕೊಂಡು ವಿಪರೀತ ಟ್ರಾಲ್‌ಗೆ ಒಳಗಾಗಿದ್ದ ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ಸಾಮಾಜಿಕ ಜಾಲತಾಣದ ಟೀಕಾಕಾರರಿಗೆ ಮತ್ತೆ ಆಹಾರವಾಗಿದ್ದಾರೆ.
ಸಂಸತ್‌ನ ಹೊರಭಾಗದ ಆವರಣದಲ್ಲಿ ಶನಿವಾರ ಸ್ವಚ್ಛವಾಗಿರುವ ನೆಲವನ್ನು ಗುಡಿಸಲು ಪೊರಕೆ ಹಿಡಿದುಬಂದು ಪೋಸ್ ನೀಡಿದ ಹೇಮಾಮಾಲಿನಿ ಅವರನ್ನು ಟ್ರೋಲಿಗರು ಹಿಗ್ಗಾಮುಗ್ಗಾ ಕಾಲೆಳೆದಿದ್ದಾರೆ.
ಶನಿವಾರ ಬೆಳಿಗ್ಗೆ ಹೇಮಾಮಾಲಿನಿ ಅವರು ಪೊರಕೆ ಹಿಡಿದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಬಿಜೆಪಿ ಸಂಸದರ ಜತೆ ಸಂಸತ್ ಹೊರಭಾಗದ ಆವರಣದ ರಸ್ತೆಯಲ್ಲಿ ಕಾಣಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಸ್ವಚ್ಛ ಭಾರತ ಅಭಿಯಾನ'ದಡಿ ಸಂಸದರು ಮತ್ತು ಸಚಿವರು ಸ್ವಚ್ಛತಾ ಕಾರ್ಯ ನಡೆಸಿದರು.

ಆದರೆ, ಹೇಮಾ ಮಾಲಿನಿ ಅವರು ಕಸಗುಡಿಸಿ ಸ್ವಚ್ಛಗೊಳಿಸಿದ ಪರಿ ಕಂಡು ಸಾಮಾಜಿಕ ಜಾಲತಾಣದ ಬಳಕೆದಾರರು ದಂಗಾಗಿದ್ದಾರೆ. ಕಪ್ಪು ಕನ್ನಡಕ ಧರಿಸಿ ಟಿಪ್ ಟಾಪ್‌ಆಗಿ ಬಂದಿದ್ದ ಹೇಮಾಮಾಲಿನಿ ಅವರು ಪೊರಕೆಯಿಂದ ಜೋರಾಗಿ ಗುಡಿಸಿದರೆ ನೆಲಕ್ಕೆ ನೋವಾಗುತ್ತದೆಯೇನೋ ಎಂಬಂತೆ ಕೆಲವು ಬಾರಿ ಪೊರಕೆಯನ್ನು ನಿಧಾನವಾಗಿ ಅತ್ತಿತ್ತ ಬೀಸಿದ್ದರು. ಅವರ ಪೊರಕೆಯಿಂದ ಸ್ವಲ್ಪವೂ ಕಸ ಆಚೆ ಬರಲಿಲ್ಲ.
ಇತರೆ ಸಂಸದರು ಪೊರಕೆಯಲ್ಲಿ ಕಸವನ್ನು ಸ್ವಚ್ಛಗೊಳಿಸುತ್ತಿದ್ದರೆ ಹೇಮಾಮಾಲಿನಿ ನಗುತ್ತಾ ಕ್ಯಾಮೆರಾಗಳಿಗೆ ಪೋಸ್ ನೀಡುವುದಕ್ಕಷ್ಟೇ ಸೀಮಿತರಾದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಅವರನ್ನು ಟ್ರಾಲ್ ಮಾಡಲು ಆರಂಭಿಸಿದರು.
'ಹೇಮಾ ಮಾಲಿನಿ ಅವರು ಸ್ವಚ್ಛತಾ ಅಭಿಯಾನಕ್ಕೆ ನಿಡಿದ ಕೊಡುಗೆಯು ಸಚಿನ್ ತೆಂಡೂಲ್ಕರ್ ಭಾರತೀಯ ಸಿನಿಮಾಕ್ಕೆ ನೀಡಿದ ಕೊಡುಗೆಗೆ ಸಮ' ಎಂದು ಒಬ್ಬರು ತಮಾಷೆ ಮಾಡಿದ್ದಾರೆ,
'ಪೊರಕೆಯು ರಸ್ತೆಯನ್ನು ಮುಟ್ಟುತ್ತಿಲ್ಲ ಕೂಡ. ಕ್ಯಾಮೆರಾಕ್ಕೆ ಅದ್ಭುತವಾದ ಅಭಿನಯ ನೀಡಿದ್ದಾರೆ' ಎಂದು ಮತ್ತೊಬ್ಬರು ಟ್ರಾಲ್ ಮಾಡಿದ್ದಾರೆ.
'ಹೇಮಾಮಾಲಿನಿ ಒಬ್ಬ ಲೆಜೆಂಡ್. ಇಷ್ಟು ವರ್ಷ ನೀರು ಶುದ್ಧೀಕರಿಸಿದ ಅವರು ಈಗ ಗಾಳಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ' ಎಂದು ಕಾಲೆಳೆದಿದ್ದಾರೆ.
'ಹೇಮಾಮಾಲಿನಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಎಂಬ ಆಸ್ಕರ್ ಪ್ರಶಸ್ತಿ ಕೊಡಬೇಕು' ಎಂದು ವ್ಯಂಗ್ಯವಾಡಿದ್ದಾರೆ.
ಹೇಮಾಮಾಲಿನಿ ರಸ್ತೆ ಸ್ವಚ್ಛಗೊಳಿಸಿದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications