ಬಿಗ್ ಬಾಸ್ ಖ್ಯಾತಿಯ ಸ್ವಯಂ ಘೋಷಿತ ಸ್ವಾಮೀಜಿ ನಿಧನ
ನವದೆಹಲಿ, ಫೆಬ್ರವರಿ 03: ಬಿಗ್ ಬಾಸ್ 10ನೇ ಅವೃತ್ತಿಯ ವಿವಾದಿತ ಸ್ಪರ್ಧಿ, ಸ್ವಯಂ ಘೋಷಿತ ಸ್ವಾಮೀಜಿ ಓಂ ನಿಧನರಾಗಿದ್ದಾರೆ. ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಸ್ವಾಮಿ ಓಂ ಅವರು ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸ್ವಾಮಿ ಓಂ ಅವರ ಆಪ್ತ ಗೆಳೆಯ ಮುಕೇಶ್ ಜೈನ್ ಅವರ ಪುತ್ರ ಅರ್ಜುನ್ ಅವರು ನಿಧನ ವಾರ್ತೆಯನ್ನು ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಸ್ವಾಮಿ ಓಂ ಅವರ ದೇಹದ ಅರ್ಧ ಭಾಗಕ್ಕೆ ಲಕ್ವಾ ಹೊಡೆದಿದ್ದು, ಇದರಿಂದ ಚೇತರಿಕೆ ಕಾಣಲು ಸಾಧ್ಯವಾಗಿರಲಿಲ್ಲ. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಸ್ವಾಮಿ ಓಂ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು.

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡರೂ ತೀವ್ರವಾಗಿ ಕೃಶರಾಗಿದ್ದ ಸ್ವಾಮಿ ಓಂ ನಡೆದಾಡಲು ಕಷ್ಟಪಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟರು ಎಂದು ಅರ್ಜುನ್ ತಿಳಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದೆಹಲಿಯ ನಿಗಮ್ ಬೋಧ್ ಘಾಟ್ ನಲ್ಲಿ ನೆರವೇರಿಸಲಾಗುತ್ತದೆ ಎಂದು ಹೇಳಿದರು.
ಟಿವಿ ಟಾಕ್ ಶೋವೊಂದರಲ್ಲಿ ಸ್ವಾಮಿ ಓಂ ಅವರು ಮಹಿಳೆಯೊಬ್ಬರ ಜತೆ ಕೈ ಕೈ ಮಿಲಾಯಿಸಿದ್ದರು. ಹಿಂದಿ ಬಿಗ್ ಬಾಸ್ ಮನೆಯಲ್ಲಿದ್ದಾಗ ಧರ್ಮ, ಮಹಿಳೆಯರ ಗೌರವದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು. ಬಿಗ್ ಬಾಸ್ ನಿಂದ ಬಂದ ಬಳಿಕ ಅರೆ ನಗ್ನ ಯುವತಿ ಜತೆ ಯೋಗ, ಧ್ಯಾನ ಎಂದೆಲ್ಲ ವಿಡಿಯೋ ಮಾಡಿ ಇಂಟರ್ನೆಟ್ ನಲ್ಲಿ ಹಾಕಿದ್ದರು. ನಂತರ ದೆಹಲಿಯ ವಿಕಾಸ್ ನಗರದಲ್ಲಿ ನಾಥುರಾಮ್ ಗೋಡ್ಸೆ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡುವಾಗ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿ ಧರ್ಮದೇಟು ತಿಂದಿದ್ದರು.












Click it and Unblock the Notifications