ಅಸ್ಸಾಂ: ಎನ್ ಆರ್ ಸಿ ಆಕ್ಷೇಪ, ಅಹವಾಲಿಗೆ ಡಿ. 15 ಕೊನೆ ದಿನ: ಸುಪ್ರೀಂ
ನವದೆಹಲಿ, ನವೆಂಬರ್ 1: ಅಸ್ಸಾಮ್ ನಲ್ಲಿ ಹೊಸದಾದ ನಾಗರಿಕರ ಪಟ್ಟಿ ಬಗ್ಗೆ ಆಕ್ಷೇಪ ಹಾಗೂ ಅಹವಾಲುಗಳು ಇದ್ದಲ್ಲಿ ಸಲ್ಲಿಸಲು ಇದ್ದ ಕೊನೆ ದಿನಾಂಕವನ್ನು ಡಿಸೆಂಬರ್ 15ಕ್ಕೆ ಸುಪ್ರೀಂ ಕೋರ್ಟ್ ಗುರುವಾರದಂದು ವಿಸ್ತರಣೆ ಮಾಡಿದೆ.
ಸುಲಭವಾಗಿ ನಕಲು ಮಾಡಬಹುದು ಎಂಬ ಕಾರಣಕ್ಕೆ ಈ ಹಿಂದೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಮಾನ್ಯ ಮಾಡದೇ ಇದ್ದ ಐದು ದಾಖಲಾತಿಗಳನ್ನು ಸಹ ಈಗ ಸಲ್ಲಿಸಬಹುದು ಎಂದು ಮುಖ್ಯ ನಾಯಮೂರ್ತಿ ರಂಜನ್ ಗೊಗೊಯ್ ಅನುಮತಿ ನೀಡಿದರು.
1951ರ ರಾಷ್ಟ್ರೀಯ ಪೌರತ್ವ ನೋಂದಣಿ, 1966 ಹಾಗೂ 1971ರ ಮತದಾರರ ಪಟ್ಟಿ, 1971ರವರೆಗಿನ ವಲಸಿಗ ನೋಂದಣಿ ಪ್ರಮಾಣ ಪತ್ರ ಹಾಗೂ 1971ರ ತನಕ ವಿತರಿಸಿರುವ ರೇಷನ್ ಕಾರ್ಡ್ ಗಳನ್ನು ಈಗ ದಾಖಲಾತಿಯಾಗಿ ಮಾನ್ಯ ಮಾಡಲಾಗುತ್ತದೆ.

ನೆರೆಯ ದೇಶಗಳಿಂದ ಬಂದು ಅಸ್ಸಾಮ್ ನಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚುವ ಸಲುವಾಗಿ ಎನ್ ಆರ್ ಸಿ ನಡೆಸಲಾಗುತ್ತಿದೆ. ಕಳೆದ ಜೂನ್ ಮೂವತ್ತರಂದು ಪ್ರಕಟಿಸಿದ್ದ ಪಟ್ಟಿಯಲ್ಲಿ ನಲವತ್ತು ಲಕ್ಷಕ್ಕೂ ಹೆಚ್ಚು ಮಂದಿ ಹೆಸರು ಬಿಟ್ಟುಹೋಗಿತ್ತು. ಅಂತಹವರು ಹೊಸದಾಗಿ ಅಹವಾಲು ಸಲ್ಲಿಸಬಹುದು ಎಂದು ಅವಕಾಶ ನೀಡಲಾಗಿತ್ತು.
60 ದಿನದೊಳಗೆ ಅಹವಾಲು ಅಥವಾ ಆಕ್ಷೇಪ ಸಲ್ಲಿಸುವಂತೆ ಸೆಪ್ಟೆಂಬರ್ 25ರಂದು ಸುಪ್ರೀಂ ಕೋರ್ಟ್ ಪೀಠವು ತಿಳಿಸಿತ್ತು. ಇದೀಗ ಅಧಿಕಾರಿಗಳು ನೋಟಿಸ್ ನೀಡಲು ಹೊಸದಾಗಿ ಜನವರಿ 15, 2019ರ ತನಕ ಅಂತಿಮ ದಿನಾಂಕ ವಿಸ್ತರಣೆ ಮಾಡಿದೆ. ಮುಂದಿನ ವರ್ಷದ ಏಪ್ರಿಲ್ 1ರಿಂದ ಪರಿಶೀಲನೆ ಆರಂಭವಾಗುತ್ತದೆ.












Click it and Unblock the Notifications