ಅಪರಾಧಕ್ಕೆ ಪ್ರೇರೇಪಿಸಿದ ಡಾನ್ಸ್ ಇಂಡಿಯಾ ಡಾನ್ಸ್ ಹುಚ್ಚು
ನವದೆಹಲಿ, ಸೆಪ್ಟೆಂಬರ್, 25 : ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಾದಾಸೆ ಹೊತ್ತ ಅಪ್ರಾಪ್ತ ಯುವಕ ಹಾಗೂ ಯುವತಿ ಶಾಲಾ ಬಾಲಕನನ್ನು ಅಪಹರಿಸಿ ಬೆಟ್ಟದಿಂದ ತಳ್ಳಿ ಕೊಂದ ಧಾರುಣ ಘಟನೆ ನಗರದಲ್ಲಿ ನಡೆದಿದೆ.
ಜಿ ಟಿವಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಇಂಗಿತವನ್ನು ಇಟ್ಟುಕೊಂಡ ಯುವಕ ಯುವತಿಯರಿಗೆ ಹಣದ ಅಭಾವ ಎದುರಾಯಿತು. ಆಗ ಶಾಲಾ ಬಾಲಕನನ್ನು ಅಪಹರಿಸಿ ಪೋಷಕರಿಂದ ಹಣ ಕೀಳುವ ಹುನ್ನಾರ ರೂಪಿಸಿದ ಇವರು ಮಗುವನ್ನು ಬೆಟ್ಟದಿಂದ ತಳ್ಳಿ ಕೊಂದಿದ್ದಾರೆ.[ಮಗಳನ್ನು ಕೊಲ್ಲುವಾಗ ತಾಯಿ ಪ್ರೀತಿ ಎಲ್ಲಿ ಹೋಗಿತ್ತು?]

ಏನಿದು ಘಟನೆ :
ಯುವಕ ಯುವತಿಯರು ನೃತ್ಯದಲ್ಲಿ ಹಾಗೂ ಕೋರಿಯೋ ಗ್ರಾಫ್ ನಲ್ಲಿ ಸಾಧನೆ ಮಾಡಬೇಕೆಂದು ದೆಹಲಿ ಮತ್ತು ಹರಿಯಾಣದ ಹಲವು ಡ್ಯಾನ್ಸ್ ಅಕಾಡೆಮಿಗಳಿಗೆ ಭೇಟಿ ಮಾಡಿದ್ದರು. ಅಲ್ಲದೇ ಇಬ್ಬರು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಆಕಾಂಕ್ಷೆ ಹೊಂದಿದ್ದರು.
ಕಳೆದ ವರ್ಷ ಜಿ ಟಿವಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನೃತ್ಯ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲಿ ಯುವಕ ಭಾಗವಹಿಸಿದ್ದ. ಆಗ ಯಾವುದೋ ಅಪರಿಚಿತ ವ್ಯಕ್ತಿ ಈತನಿಗೆ ಎರಡನೇ ಸುತ್ತಿಗೆ ಮುಂದುವರೆಯಲು 40,000 ಹೊಂದಿಸಿಕೊಂಡು ಬರುವುದಾಗಿ ತಿಳಿಸಿದ್ದನು.
ಬಡವರಾದ ಇವರು ಅಷ್ಟೊಂದು ಹಣ ತರಲು ಶಕ್ತರಾಗಿರಲಿಲ್ಲ. ಆದರೆ ನೃತ್ಯದ ಕನಸು ಮನದಲ್ಲಿ ಗಾಢವಾಗಿ ನೆಲೆಯೂರಿತ್ತು. ಆಗ ಇವರಿಬ್ಬರು ಮಗುವನ್ನು ಅಪಹರಿಸಿ ಹಣ ಪಡೆಯುವ ಯೋಜನೆ ರೂಪಿಸಿ ದೆಹಲಿಯ ಬಾದಾರ್ ಪುರದ 13 ವರ್ಷದ ಸ್ವಪ್ನೇಶ್ ಗುಪ್ತಾ ಎಂಬ ಬಾಲಕನನ್ನು ಅಪಹರಿಸಿದ್ದಾರೆ.
ಮಗು ನಾಪತ್ತೆಯಿಂದ ಆತಂಕಗೊಂಡ ಸ್ವಪ್ನೇಶ್ ತಂದೆ ರಾಜೇಶ್ ಗುಪ್ತಾ ಪೊಲೀಸರಿಗೆ ಸೆಪ್ಟೆಂಬರ್ 15ರಂದು ದೂರು ನೀಡಿದ್ದರು. ಬಳಿಕ ರಾಜೇಶ್ ಗೆ ಸೆಪ್ಟೆಂಬರ್ 20ರ ಭಾನುವಾರದಂದು ಫೋನ್ ಮಾಡಿದ ಅಪಹರಣಕಾರರು 60,000 ನೀಡಿದರೆ ಮಗು ನೀಡುವುದಾಗಿ ಬೇಡಿಕೆ ಇಟ್ಟರು.
ಅಪಹರಣಕಾರರ ಕರೆಯ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಯಿಂದ ಪಡೆದ ಬಾದರ್ ಪುರದ ಪೊಲೀಸರು ಅವರನ್ನು ಬುಧವಾರ ಬಂಧಿಸಿದ್ದು, ಮಗುವಿನ ಶವವು ಉತ್ತರಖಂಡದ ರಾಮನಗರ ಜಿಲ್ಲೆಯ ರಾಣಿಕೇತ್ ರಸ್ತೆಯ ಬದಿಯಲ್ಲಿ ಪತ್ತೆಯಾಗಿದೆ.
ಶಾಲಾ ಬಾಲಕನನ್ನು ಕೊಂದದ್ದು ಏಕೆ?
ಶಾಲಾ ಬಾಲಕ ಸ್ವಪ್ನೇಶ್ ಗುಪ್ತಾ ಮನೆಗೆ ಹೋದಾಗ ನಮ್ಮೆಲ್ಲಾ ಮಾಹಿತಿಯನ್ನು ಪೋಷಕರಿಗೆ ಹೇಳಿ ಬಿಡುತ್ತಾನೆ. ನಮ್ಮನ್ನು ಆತ ಗುರುತಿಸಿದ್ದಾನೆ. ಪೊಲೀಸರು ಸಂಪೂರ್ಣ ಮಾಹಿತಿ ಕಲೆಹಾಕಿ ನಮ್ಮನ್ನು ಬಂಧಿಸಿ ಬಿಡುತ್ತಾರೆ ಎಂದು ಚಿಂತಿಸಿದ ಯುವಕ ಯುವತಿ ಮಗುವನ್ನು ಬೆಟ್ಟದಿಂದ ತಳ್ಳಿ ಕೊಂದಿದ್ದಾರೆ.












Click it and Unblock the Notifications