ಮಾಧ್ಯಮದವರನ್ನು ಜೈಲಿಗೆ ಅಟ್ಟುವೆ: ಕೇಜ್ರಿವಾಲ್
ನವದೆಹಲಿ, ಮಾ 14: ದೆಹಲಿಯ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಅರವಿಂದ್ ಕೇಜ್ರಿವಾಲ್ ಮತ್ತೊಂದು ವಿವಾದಕಾರಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳು ವಸ್ತುನಿಷ್ಠ ವರದಿ ಪ್ರಸಾರ ಮಾಡುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಾಧ್ಯಮದವರನ್ನು ಜೈಲಿಗೆ ಅಟ್ಟುತ್ತೇವೆ ಎಂದು ಗುಡುಗಿದ್ದಾರೆ.
ಕಳೆದ ಒಂದು ವರ್ಷದಿಂದ ಮಾಧ್ಯಮಗಳು ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮ ಮತ್ತು ಸಾರ್ವಜನಿಕ ಸಭೆಯನ್ನು ವೈಭವೀಕರಿಸುತ್ತಿವೆ. ಒಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಂಡರೂ ಮಾಧ್ಯಮದವರಿಗೆ ರೈತರ ಚಿಂತೆ ಇಲ್ಲ. ಈಗ ಮಹಾಚುನಾವಣೆಯ ಸಂದರ್ಭದಲ್ಲಂತೂ ಮಾಧ್ಯಮಗಳು ಬಿಕರಿಯಾಗಿವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೆಲವು ಮಾಧ್ಯಮಗಳು ನರೇಂದ್ರ ಮೋದಿ ಪರ ಪ್ರಚಾರ ಮಾಡಲು ಹೆಚ್ಚಿನ ದುಡ್ಡಿಗೆ ಮಾರಾಟವಾಗಿವೆ. ಮೋದಿ ಪ್ರಧಾನಿಯಾದರೆ ದೇಶ 'ರಾಮರಾಜ್ಯ' ಆಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಇಂತಹ ಮಾಧ್ಯಮಗಳ ಕಾರ್ಯಕ್ರಮಗಳು "ಪೈಡ್ ನ್ಯೂಸ್" ಎಂದು ಜನರಿಗೆ ತಿಳಿಯದೇ ಇರದು ಎಂದು ಕೇಜ್ರಿವಾಲ್ ವ್ಯಂಗ್ಯ ವಾಡಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ ವಿರುದ್ದ ಹರಿಹಾಯುತ್ತಿದ್ದ ಕೇಜ್ರಿವಾಲ್, ರೈತರು ತಮ್ಮ ಕೃಷಿ ಭೂಮಿಗಳನ್ನು ಒಂದು ರೂಪಾಯಿಗೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಮಾಧ್ಯಮದವರಿಗೆ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕೆನ್ನುವ ಜವಾಬ್ದಾರಿ ಬೇಕಿಲ್ಲ. ಅವರಿಗೆ ಬರೀ ಮೋದಿ ಉತ್ಪ್ರೇಕ್ಷೆ ಮಾತ್ರ ಬೇಕು ಎಂದೆ ಬೇಸರ ವ್ಯಕ್ತ ಪಡಿಸಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಾಧ್ಯಮದವರ ಮೇಲೆ ಸವಿಸ್ತಾರ ವಾದ ವಿಚಾರಣೆ ನಡೆಸಿ ಅವರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ಕಾರ್ಯಕ್ರಮದ ನಂತರ ಕೇಜ್ರಿವಾಲ್ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ 'ಮಾಧ್ಯಮದರು ಜೈಲಿಗೆ ಅಟ್ಟುವೆ' ಎನ್ನುವ ಹೇಳಿಕೆಯ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ನಾನು ನಿಮ್ಮ ವಿರೋಧ ಯಾಕೆ ಕಟ್ಟು ಕೊಳ್ಳಲಿ, ನಾನು ಹಾಗೆ ಹೇಳಲೇ ಇಲ್ಲ ಎಂದು ಕೇಜ್ರಿವಾಲ್ ಉಲ್ಟಾ ಹೊಡೆದಿದ್ದಾರೆ.
ಆಮ್ ಆದ್ಮಿ ಪಕ್ಷ, ಕೇಜ್ರಿವಾಲ್ ಅವರ ಹೇಳಿಕೆಯನ್ನು ಸಮರ್ಥಿಸಿ ಕೊಂಡಿದೆ. ಇಂಡಿಯಾ ಟುಡೇ, ಜೀ ನ್ಯೂಸ್ ಮತ್ತು ಇಂಡಿಯಾ ನ್ಯೂಸ್ ವಿರುದ್ದ ದೂರು ದಾಖಲಿಸುವುದಾಗಿ ಹೇಳಿದೆ.
ಕೇಜ್ರಿವಾಲ್ ಹೇಳಿಕೆಗೆ ಬ್ರಾಡ್ ಕಾಸ್ಟ್ ಎಡಿಟರ್ಸ್ ಅಸೋಶಿಯೇಷನ್ ತೀವ್ರ ವಿರೋಧ್ಯ ವ್ಯಕ್ತ ಪಡಿಸಿದೆ. ಕೇಜ್ರಿವಾಲ್ ಯಾವುದೇ ಪುರಾವೆ, ಆಧಾರ ಇಲ್ಲದೆ ಇಂತಹ ಹೇಳಿಕೆ ನೀಡಬಾರದು ಎಂದು ತರಾಟೆಗೆ ತೆಗೆದು ಕೊಂಡಿದೆ.












Click it and Unblock the Notifications