ಪ್ರತಿಪಕ್ಷ ನೆರವಿಲ್ಲದೆ ಭೂ ಸ್ವಾಧೀನ ಕಾಯ್ದೆ ಜಾರಿ ಕಷ್ಟ!
ನವದೆಹಲಿ, ಫೆ.24: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನೇತೃತ್ವದ ಪ್ರತಿಭಟನೆ, ಪ್ರತಿಪಕ್ಷಗಳ ಅಸಹಕಾರದ ನಡುವೆ ಮಂಗಳವಾರ ವಿವಾದಿತ ಭೂ ಸ್ವಾಧೀನ ಕಾಯ್ದೆ ಮಂಡಿಸಲು ಮೋದಿ ಸರ್ಕಾರ ಸಜ್ಜಾಗಿದೆ. ಪ್ರತಿಪಕ್ಷಗಳ ನೆರವಿಲ್ಲದೆ ಕಾಯ್ದೆ ಜಾರಿಗೊಳಿಸಲು ಎನ್ ಡಿಎ ಸರ್ಕಾರಕ್ಕೆ ಸಾಧ್ಯವಿಲ್ಲ. ಲೋಕಸಭೆ ಕಲಾಪ ಗದ್ದಲದ ನಡುವೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ವಿವಾದಿತ ಕಾಯ್ದೆ ಪ್ರಕರಣ ಕ್ಲೈಮ್ಯಾಕ್ಸ್ ಹಂತ ತಲುಪಲಿದೆ.
ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭೂ ಸ್ವಾಧೀನ ಕಾಯ್ದೆಯನ್ನು ಜಾರಿ ಮಾಡಿತ್ತು. ಕಳೆದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿತ್ತು. ಇದು ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ಸುಗ್ರೀವಾಜ್ಞೆಯನ್ನು ಹಿಂಪಡೆಯುವಂತೆ ಬಿಜೆಪಿಯ ಕೆಲ ಸಚಿವರೇ ಪ್ರಧಾನಿಗೆ ಒತ್ತಡ ಹಾಕಿದ್ದರು. ಇದೀಗ ಬಜೆಟ್ ಅಧಿವೇಶನ ಆರಂಭವಾಗಿದ್ದು, ಸುಗ್ರೀವಾಜ್ಞೆ ಬಗ್ಗೆ ಚರ್ಚೆ ನಡೆಸುವಂತೆ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ. [ಕೇಂದ್ರ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಪ್ರತಿಭಟನೆ]
ರಾಜ್ಯಸಭೆ : 245 ಸ್ಥಾನ; ಯುಪಿಎ-76, ಎನ್ ಡಿಎ- 62, ಇತರೆ -86.
ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ರಾಜ್ಯಸಭೆಯಲ್ಲಿ ಬಹುಮತವಿಲ್ಲ. ಇಲ್ಲಿ ಕಾಯ್ದೆ ಅಂಗೀಕಾರವಾಗ ಬೇಕಾದರೆ ಪ್ರತಿಪಕ್ಷಗಳ ಸಹಕಾರ ಅಗತ್ಯವಾಗಿ ಬೇಕಿದೆ.

ಈಗಾಗಲೇ ಎಐಎಡಿಎಂಕೆ ಜತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತುಕತೆ ನಡೆಸಿ ವಿಶ್ವಾಸ ಗಿಟ್ಟಿಸಲು ಮುಂದಾಗಿದ್ದಾರೆ. ಆದರೆ ಉಳಿದ ಪಕ್ಷಗಳು ಮಾತ್ರ ಬೆಂಬಲ ನೀಡಲು ಹಿಂದೇಟು ಹಾಕಿವೆ. ಒಂದು ವೇಳೆ ರಾಜ್ಯಸಭೆಯಲ್ಲಿ ಮಸೂದೆ ಬಿದ್ದು ಹೋದರೆ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ.
ಅಣ್ಣಾ ಹಜಾರೆ ಪ್ರತಿಭಟನೆ ಮುಂದುವರಿಕೆ: ವಿವಾದಾತ್ಮಕ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಜಂತರ್ ಮಂತರ್ ಬಳಿ ಫೆ.22ರಿಂದ ಎರಡು ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಅಣ್ಣಾ ಅವರು ತಮ್ಮ ಪ್ರತಿಭಟನೆಯನ್ನು ಮಂಗಳವಾರ ಕೂಡಾ ಮುಂದುವರೆಸುತ್ತಿದ್ದಾರೆ. ಅಣ್ಣಾ ಅವರ ಬೆಂಬಲಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಬರಲಿದ್ದು, ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ನಿಂತಿದ್ದು, ಮೋದಿ ಸರ್ಕಾರಕ್ಕೆ ಈಗಲೇ ಪ್ರತಿಭಟನೆಯ ಬಿಸಿ ತಟ್ಟುತ್ತಿದೆ.
ಕೇಂದ್ರ ಸರ್ಕಾರ ಕಳೆದ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ವಿವಾದಾತ್ಮಕ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಜಾರಿಗೆ ತಂದಿತ್ತು. ಈ ಕಾಯ್ದೆಯನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮುಂದುವರೆದಿದೆ, ಸದನದಲ್ಲಿ ಚರ್ಚೆ ಬಿಸಿ ಕಾವೇರುತ್ತಿದೆ.












Click it and Unblock the Notifications