ಒಂದೇ ಕುಟುಂಬಕ್ಕೆ 2ನೇ ಬಾರಿ ಒಲಿದ ಅದೃಷ್ಟ: ಪನ್ನಾ ಗಣಿಯಲ್ಲಿ ರೈತನಿಗೆ ಸಿಕ್ಕಿತು 30 ಲಕ್ಷ ರೂ. ಮೌಲ್ಯದ ವಜ್ರ
ಸಾಮಾನ್ಯವಾಗಿ ಜೀವನದಲ್ಲಿ ಒಮ್ಮೆ ವಜ್ರ ಖರೀದಿ ಮಾಡುವುದೇ ದೊಡ್ಡ ಸಾಧನೆ ಅಥವಾ ಅದೃಷ್ಟ ಎಂದುಕೊಳ್ಳುವವರೇ ಹೆಚ್ಚು. ಅಂತಹದ್ರಲ್ಲಿ ಎರಡೆರಡು ಬಾರಿ ವಜ್ರ ಸಿಕ್ಕರೆ ಹೇಗಿರುತ್ತದೆ? ಇದು ಕಟ್ಟುಕತೆಯಲ್ಲ, ಬದಲಿಗೆ ಮಧ್ಯಪ್ರದೇಶದಲ್ಲಿ ನಡೆದ ನೈಜ ಘಟನೆ.
ಹೌದು, ಮಧ್ಯಪ್ರದೇಶದಲ್ಲಿ ಪನ್ನಾ ಜಿಲ್ಲೆಯ ಬುಡಕಟ್ಟು ರೈತ ಕುಟುಂಬವೊಂದರ ಪಾಲಿಗೆ ಅದೃಷ್ಟ ದೇವತೆ ಒಮ್ಮೆ ಮಾತ್ರವಲ್ಲ, ಎರಡು ಬಾರಿ ಒಲಿದಿದ್ದಾಳೆ. ಕೇವಲ ಎರಡು ವರ್ಷಗಳ ಅಂತರದಲ್ಲಿ ಈ ಶ್ರಮಜೀವಿ ಕುಟುಂಬಕ್ಕೆ ಎರಡನೇ ಬಾರಿಗೆ ಬೆಲೆಬಾಳುವ ವಜ್ರವೊಂದು ದೊರಕಿದ್ದು, ಅವರ ಬದುಕನ್ನು ಮತ್ತೊಮ್ಮೆ ಉಜ್ವಲಗೊಳಿಸಿದೆ. ಶ್ರಮವಹಿಸಿ ದುಡಿದರೆ ಪ್ರತಿಫಲ ಖಂಡಿತ ಸಿಗುತ್ತದೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ.

30 ಲಕ್ಷ ರೂ. ಮೌಲ್ಯದ 11 ಕ್ಯಾರೆಟ್ ವಜ್ರ ಪತ್ತೆ
ರೈತ ಹಾಗೂ ಕಾರ್ಮಿಕರಾಗಿರುವ ರಾಕೇಶ್ ಆದಿವಾಸಿ, ಅವರ ಮೂವರು ಸಹೋದರರು ಹಾಗೂ ಕೆಲ ಸಂಬಂಧಿಕರು ಸೇರಿ ಕಳೆದ ಏಪ್ರಿಲ್ ತಿಂಗಳಲ್ಲಿ ಅಹಿರ್‌ಗಾಂವ್ ಪ್ರದೇಶದಲ್ಲಿ ಖಾಸಗಿ ಜಮೀನೊಂದನ್ನು ಗುತ್ತಿಗೆಗೆ ಪಡೆದು ಗಣಿಗಾರಿಕೆ ಆರಂಭಿಸಿದ್ದರು. ಸತತ ಎರಡು ತಿಂಗಳ ಕಾಲ ಹಗಲಿರುಳು ಬೆವರು ಹರಿಸಿ ದುಡಿದ ಈ ಕುಟುಂಬಕ್ಕೆ ಸೋಮವಾರ ಬರೋಬ್ಬರಿ 11.19 ಕ್ಯಾರೆಟ್ ತೂಕದ ಉತ್ತಮ ಗುಣಮಟ್ಟದ ವಜ್ರ ದೊರೆತಿದೆ.
ಈ ಹೊಸ ವಜ್ರದ ಮಾರುಕಟ್ಟೆ ಮೌಲ್ಯ ಅಂದಾಜು 30 ಲಕ್ಷ ರೂಪಾಯಿಗಳಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ವಜ್ರ ಸಿಕ್ಕ ತಕ್ಷಣವೇ ಎಚ್ಚೆತ್ತ ಈ ಕುಟುಂಬ, ಯಾವುದೇ ತಡ ಮಾಡದೆ ಅದನ್ನು ಸರ್ಕಾರಿ ವಜ್ರದ ಕಚೇರಿಗೆ ಒಪ್ಪಿಸಿ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ. ಪನ್ನಾ ವಜ್ರ ನಿರೀಕ್ಷಕ ನೂತನ್ ಜೈನ್ ಅವರು ಕೂಡ ಇದು 11.19 ಕ್ಯಾರೆಟ್ ತೂಕದ ಅತ್ಯುತ್ತಮ ಗುಣಮಟ್ಟದ ವಜ್ರ ಎಂಬುದನ್ನು ಖಚಿತಪಡಿಸಿದ್ದಾರೆ.
ರೈತ ಕುಟುಂಬಕ್ಕೆ ವಜ್ರ ತಂದಿದ್ದ 2024ರ ಅದೃಷ್ಟ
ಈ ಬುಡಕಟ್ಟು ರೈತ ಕುಟುಂಬಕ್ಕೆ ವಜ್ರ ಸಿಗುತ್ತಿರುವುದು ಇದೇ ಮೊದಲೇನಲ್ಲ. 2024ರಲ್ಲಿ ಇದೇ ಕುಟುಂಬಕ್ಕೆ 19.22 ಕ್ಯಾರೆಟ್ ತೂಕದ ವಜ್ರವೊಂದು ದೊರೆತಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಹರಾಜಿನಲ್ಲಿ ಆ ವಜ್ರ ಬರೋಬ್ಬರಿ 93 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿತ್ತು. ಆ ಹಣದಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸಿತ್ತು.
ಆದರೆ, ಒಮ್ಮೆ ಹಣ ಕೈಸೇರಿತು ಎಂದು ಈ ಕುಟುಂಬ ತಮ್ಮ ಕಾಯಕವನ್ನು ಮರೆಯಲಿಲ್ಲ. ಶ್ರಮದ ಮೇಲಿನ ನಂಬಿಕೆಯೊಂದಿಗೆ ಗಣಿಗಾರಿಕೆಯನ್ನು ಮುಂದುವರಿಸಿದ ಪರಿಣಾಮವಾಗಿ ಈಗ ಮತ್ತೆ ಅವರ ಕೈಗೆ 30 ಲಕ್ಷ ರೂ. ಮೌಲ್ಯದ ವಜ್ರ ಸೇರಿದೆ.
ಮಧ್ಯಪ್ರದೇಶದ ಪನ್ನಾ ಗಣಿಯಲ್ಲಿ ಮುಂದಿನ ಹೂಡಿಕೆ
ವಜ್ರ ಪತ್ತೆಯಾದ ಖುಷಿಯಲ್ಲಿ ಮಾತನಾಡಿರುವ ರಾಕೇಶ್ ಅವರ ಸಹೋದರ ರಾಜು ಆದಿವಾಸಿ, "ಕಳೆದ ಬಾರಿ ಸಿಕ್ಕ ಹಣ ನಮ್ಮ ಬದುಕನ್ನು ಬದಲಾಯಿಸಿತು, ಆದರೆ ನಾವು ದುಡಿಯುವುದನ್ನು ನಿಲ್ಲಿಸಲಿಲ್ಲ. ಈಗ ಮುಂಬರುವ ಹರಾಜಿನಲ್ಲಿ ಈ ವಜ್ರವೂ ಮಾರಾಟವಾಗಲಿದ್ದು, ನಿಯಮಾನುಸಾರ ಸರ್ಕಾರವು ರಾಯಲ್ಟಿ ಕಡಿತಗೊಳಿಸಿ ಉಳಿದ ಹಣವನ್ನು ನಮ್ಮ ಅಧಿಕೃತ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ" ಎಂದು ತಿಳಿಸಿದ್ದಾರೆ. ಈ ಹೊಸ ಹಣವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಗಣಿಗಾರಿಕೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಹೂಡಿಕೆ ಮಾಡುವುದಾಗಿ ರಾಕೇಶ್ ಹೇಳಿದ್ದಾರೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವಜ್ರದ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ. ಸರ್ಕಾರವೇ ಇಲ್ಲಿ ಗುತ್ತಿಗೆ ಆಧಾರದ ಮೇಲೆ ಸಾರ್ವಜನಿಕರಿಗೆ ಗಣಿಗಾರಿಕೆ ಮಾಡಲು ಅವಕಾಶ ನೀಡುತ್ತದೆ. ಸಿಕ್ಕ ವಜ್ರಗಳನ್ನು ಪಾರದರ್ಶಕವಾಗಿ ಹರಾಜು ಹಾಕಿ, ತೆರಿಗೆ ಕಳೆದು ಉಳಿದ ಹಣವನ್ನು ಶೋಧಕರಿಗೆ ನೀಡುವ ಮೂಲಕ ಸರ್ಕಾರ ಸ್ಥಳೀಯರ ಆರ್ಥಿಕ ಪ್ರಗತಿಗೂ ನೆರವಾಗುತ್ತಿದೆ.
ಹೀಗಾಗಿ ಇಲ್ಲಿನ ಸಾವಿರಾರು ಕುಟುಂಬಗಳು ಅದೃಷ್ಟದ ಹುಡುಕಾಟದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಈ ನೆಲದಲ್ಲಿ ಅಡಗಿರುವ ವಜ್ರಗಳು ಆಗಾಗ ಇಂತಹ ಸ್ಥಳೀಯ ಕಾರ್ಮಿಕರು ಹಾಗೂ ರೈತರ ಬದುಕನ್ನು ರಾತ್ರೋರಾತ್ರಿ ಬದಲಾಯಿಸಿದ ಅನೇಕ ಉದಾಹರಣೆಗಳಿವೆ.












Click it and Unblock the Notifications