ಅಗಸ್ಟಾ ಆರೋಪಿ ಕ್ರಿಶ್ಚಿಯನ್ ಮೈಕಲ್‌ಗೆ ಬಿಡುಗಡೆ ಭಾಗ್ಯ ಸದ್ಯಕ್ಕಿಲ್ಲ
ನವದೆಹಲಿ, ಜನವರಿ 5: ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್‌ನನ್ನು ದೆಹಲಿಯ ನ್ಯಾಯಾಲಯವೊಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಜಾರಿ ನಿರ್ದೇಶನಾಲಯವು (ಇ.ಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧಿಸಿದಂತೆ ವಿಚಾರಣೆ ನಡೆಸಲು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಿತ್ತು. ಅದಕ್ಕೆ ಸಹಮತಿ ಸೂಚಿಸಿದ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್, ಮೈಕಲ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಅತಿ ಗಣ್ಯರಿಗೆ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿಸುವ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಹಣ ಪಡೆದುಕೊಂಡಿದ್ದ ಆರೋಪ ಎದುರಿಸುತ್ತಿರುವ ಮೈಕಲ್‌ನನ್ನು ದುಬೈನಿಂದ ಗಡಿಪಾರು ಮಾಡಲಾಗಿತ್ತು. ಇ.ಡಿ. ಅಧಿಕಾರಿಗಳು ಡಿ.22ರಂದು ಆತನನ್ನು ಬಂಧಿಸಿದ್ದರು. ಬಳಿಕ ಏಳು ದಿನಗಳ ಕಾಲ ಸಂಸ್ಥೆಯ ವಶಕ್ಕೆ ಒಪ್ಪಿಸಲಾಗಿತ್ತು.

ವಿಚಾರಣೆ ಸಂದರ್ಭದಲ್ಲಿ ಕ್ರಿಶ್ಚಿಯನ್ ಮೈಕಲ್, 'ಇಟಲಿಯ ಮಹಿಳೆ ಮಗ' ಮತ್ತು 'ದೇಶದ ಮುಂದಿನ ಪ್ರಧಾನಿಯಾಗಲು ಹೊರಟಿರುವವರು' ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿದ್ದಾಗಿ ಇ.ಡಿ. ಪರ ವಕೀಲರು ನ್ಯಾಯಾಲಯಕ್ಕೆ ಕಳೆದ ವಾರ ತಿಳಿಸಿದ್ದರು.












Click it and Unblock the Notifications