ದೆಹಲಿ: 'ಪೊರಕೆ' ಹಿಡಿಯಲು ಹೋದ 'ಕೈ'ಗೆ ಮುಖಭಂಗ, ಎಎಪಿ ಸೆಡ್ಡು
ನವದೆಹಲಿ, ಮಾರ್ಚ್ 19: ಹಿರಿಯ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಆಮ್ ಆದ್ಮಿ ಪಕ್ಷದ ಜೊತೆಗೆ ಅಂತಿಮ ಹಂತದ ಸಂಧಾನ ನಡೆಸಲು ಯತ್ನಿಸಿದ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ. ದೆಹಲಿಯಿಂದ ಲೋಕಸಭೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳನ್ನು ಈಗಾಗಲೇ ಹೆಸರಿಸಲಾಗಿದ್ದು, ಪಟ್ಟಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಆಮ್ ಆದ್ಮಿ ಪಕ್ಷ ಪ್ರಕಟಿಸಿದೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರವೊಂದನ್ನು ಬರೆದು ಎಎಪಿ ಜತೆ ಸಖ್ಯ ಬೇಡ ಎಂದಿದ್ದರು. ಇದಾದ ಬಳಿಕ ಎನ್ಸಿಪಿಯ ಶರದ್ ಪವಾರ್ ಅವರು ದೆಹಲಿಗೆ ತೆರಳಿ ಸಂಧಾನ ಮಾತುಕತೆ ನಡೆಸಿದ್ದರು. ಎಎಪಿ ಸಂಸದ ಸಂಜಯ್ ಸಿಂಗ್ ಭೇಟಿ ಮಾಡಿದರೂ ಕಾಂಗ್ರೆಸ್ಸಿಗೆ ಸಿಹಿ ಸಿಗಲಿಲ್ಲ.
ಮೇ 12 ರಂದು ದೆಹಲಿ ಲೋಕಸಭೆಯ ಏಳು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬರಲಿದೆ.

ದೆಹಲಿಯ ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಳೆದಬಾರಿ ಜಯಭೇರಿ ಬಾರಿಸಿತ್ತು. ಜೊತೆಗೆ, ಎಲ್ಲಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಎರಡನೇ ಸ್ಥಾನದಲ್ಲಿತ್ತು. ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಪಿಲ್ ಸಿಬಲ್, ಅಜಯ್ ಮೇಕನ್, ಜೈಪ್ರಕಾಶ್ ಅಗರವಾಲ್ ಸೇರಿದಂತೆ ಎಲ್ಲರೂ ಮೂರನೇ ಸ್ಥಾನದಲ್ಲಿದ್ದರು.
ಎಎಪಿ ಅಭ್ಯರ್ಥಿಗಳ ಪಟ್ಟಿ:
ಪೂರ್ವ ದೆಹಲಿ : ಅತಿಶಿ
ವಾಯುವ್ಯ ದೆಹಲಿ: ಗುಗ್ಗನ್ ಸಿಂಗ್
ದಕ್ಷಿಣ ದೆಹಲಿ: ರಾಘವ್ ಛಡ್ಡಾ
ಈಶಾನ್ಯ ದೆಹಲಿ: ದಿಲೀಪ್ ಪಾಂಡೆ
ನವದೆಹಲಿ: ಬ್ರಿಜೇಶ್ ಗೋಯಲ್
ಚಾಂದಿನಿ ಚೌಕ್ : ಪಂಕಜ್ ಗುಪ್ತ
ಪಶ್ಚಿಮ ದೆಹಲಿ : ಬಲ್ಬೀರ್ ಸಿಂಗ್
ಮಾರ್ಚ್ 02ರಂದು 6 ಅಭ್ಯರ್ಥಿಗಳ ಹೆಸರಿದ್ದ ಪಟ್ಟಿಯನ್ನು ಪ್ರಕಟಿಸಿದ್ದ ಎಎಪಿ, ಮಾರ್ಚ್ 17ರಂದು ಅಂತಿಮ ಅಭ್ಯರ್ಥಿಯ ಹೆಸರನ್ನು ಎಎಪಿ ಮುಖಂಡ, ಸಚಿವ ಗೋಪಾಲ್ ರಾಯ್ ಪ್ರಕಟಿಸಿತ್ತು. ಎಎಪಿ ಜತೆ ಮೈತ್ರಿ ಮಾಡಿಕೊಳ್ಳಬೇಕೆ? ಬೇಡವೇ? ಎಂಬುದರ ಬಗ್ಗೆ ಆಂತರಿಕ ಸಮೀಕ್ಷೆ ನಡೆಸಿದ ಶೀಲಾ ದೀಕ್ಷಿತ್ ಅವರು ನಂತರ ಹೈಕಮಾಂಡ್ ಗೆ ಪತ್ರ ಬರೆದಿದ್ದರು.












Click it and Unblock the Notifications