ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಕಡ್ಡಾಯವಲ್ಲ : ಮೊಯ್ಲಿ

ಯಾವುದೇ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ನಂಬರ್ ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ಮಂಗಳವಾರ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬುಧವಾರ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮೊಯ್ಲಿ ಆಧಾರ್ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಆಧಾರ್ ಕಾರ್ಡ್ ಕೇವಲ ಗುರುತು ಪತ್ರ ಮಾತ್ರ. ಎಲ್‌ಪಿಜಿ ಸಬ್ಸಿಡಿ ಸೇರಿದಂತೆ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಲ್ಲ ಎಂದು ಕೋರ್ಟ್ ಆದೇಶಿಸಿದೆ. ಆದ್ದರಿಂದ ಸದ್ಯ ಎಲ್‌ಪಿಜಿ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ಆದರೆ, ಈಗಾಗಲೇ ಬ್ಯಾಂಕ್ ಖಾತೆಗೆ ಸಬ್ಸಿಡಿ ಯೋಜನೆ ಜಾರಿಯಾಗಿರುವ 19 ಜಿಲ್ಲೆಗಳ ಗ್ರಾಹಕರು ಏನು ಮಾಡಬೇಕು. ಪೂರ್ಣ ಹಣ ಪಾವತಿ ಮಾಡಿ ಗ್ಯಾಸ್ ಖರೀದಿಸಬೇಕೆ? ಎಂಬ ಕುರಿತು ಮಾಹಿತಿ ನೀಡಿಲ್ಲ. (Online: LPG+ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?)
ಕರ್ನಾಟಕದಲ್ಲಿ ಈಗಾಗಲೇ ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ಬಂದಿದೆ. ಅಲ್ಲದೆ 2014ರ ಜನವರಿ 1ರ ಒಳಗೆ ಕರ್ನಾಟಕದ ಇನ್ನೂ 24 ಜಿಲ್ಲೆಗಳಲ್ಲಿ ಯೋಜನೆ ಜಾರಿ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಇಂತಹದ್ದೊಂದು ತೀರ್ಮಾನ ಕೈಗೊಂಡಿದೆ. ಸುಪ್ರೀಂಕೋರ್ಟ್ ಅನುಮತಿ ನೀಡಿದರೆ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡುವುದಾಗಿ ಮೊಯ್ಲಿ ಹೇಳಿದ್ದಾರೆ. ಆದರೆ, ಈಗಾಗಲೇ ಯೋಜನೆ ಜಾರಿಯಲ್ಲಿರುವ ಜಿಲ್ಲೆಗಳ ಬಗ್ಗೆ ಮೊಯ್ಲಿ ಸ್ಪಷ್ಟನೆ ನೀಡಿಲ್ಲ.
ಕೇಂದ್ರ ಸರ್ಕಾರದ ಸ್ಪಷ್ಟನೆ ಬೇಕು : ಮೊಯ್ಲಿ ಈ ಹೇಳಿಕೆಯಿಂದಾಗಿ ಈಗಾಗಲೇ ಯೋಜನೆ ಜಾರಿಯಾಗಿರುವ ಜಿಲ್ಲೆಗಳ ಕಥೆ ಏನು? ಎಂಬುದು ಸ್ಪಷ್ಟವಾಗಿಲ್ಲ. ತುಮಕೂರು, ಮೈಸೂರು ಜಿಲ್ಲೆಯ ಜನರು ಸಂಪೂರ್ಣ ಹಣ ನೀಡಿ ಗ್ಯಾಸ್ ಪಡೆಯಬೇಕೆ ಎಂದು ಮೊಯ್ಲಿ ಸ್ಪಷ್ಟನೆ ನೀಡಬೇಕಾಗುತ್ತದೆ. ಈಗಾಗಲೇ ಯೋಜನೆ ಘೋಷಣೆಯಾಗಿರುವ ಕರ್ನಾಟಕದ 24 ಜಿಲ್ಲೆಗಳ ಜನರು ಆಧಾರ್ ಕಾರ್ಡ್ ಪಡೆಯಬೇಕೆ ಬೇಡವೆ ಎಂಬುದು ಗೊಂದಲದ ಗೂಡಾಗಿದೆ.












Click it and Unblock the Notifications