ಬಜೆಟ್ 2021; ರಾಷ್ಟ್ರಪತಿ ಭಾಷಣ ಬಹಿಷ್ಕರಿಸಲು 16 ಪಕ್ಷಗಳ ತೀರ್ಮಾನ
ನವದೆಹಲಿ, ಜನವರಿ 28: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 29, ಶುಕ್ರವಾರದಿಂದ ಆರಂಭಗೊಳ್ಳಲಿದ್ದು ಮೊದಲ ದಿನ ಬಜೆಟ್ ಕುರಿತ ರಾಷ್ಟ್ರಪತಿ ಭಾಷಣವನ್ನು 16 ವಿರೋಧ ಪಕ್ಷಗಳು ಬಹಿಷ್ಕರಿಸಲಿವೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಶುಕ್ರವಾರದಿಂದ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಈ ಮೊದಲ ದಿನದ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣವನ್ನು ಬಹಿಷ್ಕರಿಸಲು 16 ಪಕ್ಷಗಳು ತೀರ್ಮಾನಿಸಿರುವುದಾಗಿ ಹೇಳಿಕೆ ನೀಡಿದ್ದೇವೆ. ಯಾವುದೇ ವಿರೋಧವಿಲ್ಲದೇ, ಯಾರ ಅಭಿಪ್ರಾಯವನ್ನೂ ಪಡೆಯದೆ ಕೃಷಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಒತ್ತಾಯಪೂರ್ವಕವಾಗಿ ಜಾರಿಗೊಳಿಸಲಾಗಿದೆ. ರೈತರಿಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ" ಎಂದು ಹೇಳಿದ್ದಾರೆ.

ಬಜೆಟ್ ಮಂಡನೆಗೆ ಮುನ್ನ ಜನವರಿ 29ರಂದು ಸಂಸತ್ತಿನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜ್ಯ ಸಭೆ ಹಾಗೂ ಲೋಕಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರುವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.












Click it and Unblock the Notifications