ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ: ತನ್ವೀರ್ ಸೇಠ್
ಮೈಸೂರು, ನವೆಂಬರ್ 11: ಸದ್ಯದ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದ ಅಸ್ಮಿತೆ ಉಳಿಸಿಕೊಳ್ಳಲು ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ಘೋಷಿಸಿದ್ದಾರೆ.
ರಾಜೀವ್ ನಗರ ಅಲ್ ಬದರ್ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಇದ್ದಿದ್ದರೇ ಮನೆಗೊಂದರಂತೆ ಟಿಪ್ಪು ಪ್ರತಿಮೆ ನಿರ್ಮಾಣವಾಗುತ್ತಿತ್ತು. ನಮ್ಮನ್ನು ಒಗ್ಗಟ್ಟಾಗಿಸುವ ಶಕ್ತಿ ಟಿಪ್ಪು ಹೆಸರಿಗಿದೆ. ಇಂದು ವಿವಿಧ ಪಕ್ಷಗಳಲ್ಲಿರುವ ಒಂದೇ ಸಮುದಾಯದ ಮುಖಂಡರು ಟಿಪ್ಪು ಹೆಸರಲ್ಲಿ ಒಂದಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಇನ್ನು ಟಿಪ್ಪು ಹೆಸರಿಗೆ ಅನೇಕ ಅಪಚಾರಗಳನ್ನು ಮಾಡಲಾಗುತ್ತಿದೆ. ಸುಳ್ಳು ಕತೆಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು, ನಮ್ಮ ಸಮುದಾಯ ಎಲ್ಲವನ್ನೂ ಮೌನವಾಗಿ ಸಹಿಸುತ್ತಿದೆ. ಕಾಲ ಬಂದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಟಿಪ್ಪು ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಮುಂದಿಟ್ಟು ಸರ್ವಶಕ್ತವಾದ ಅಲ್ಲಾಹ್ ನನ್ನು ಸಾಕ್ಷೀಕರಿಸಿ ಜನಪರ ಆಡಳಿತ ನಡೆಸಿದರು. ಮೈಸೂರು ರಾಜ್ಯವನ್ನಾಳಿದರೂ 260 ವರ್ಷಗಳ ಹಿಂದೆಯೇ ಶ್ರೀರಂಗಪಟ್ಟಣದ ಗುಂಬಜ್ ದ್ವಾರದ ಮೇಲೆ 'ರಿಯಾಸತೇ ದಖನ್ ಕರ್ನಾಟಕ್' ಎಂದು ಬರೆಸಿದ್ದಾರೆ. ಅಂದರೆ ಕರ್ನಾಟಕ ಎಂಬ ಹೆಸರಿನ ಕಲ್ಪನೆಯೇ ಇಲ್ಲದ ಅವರ ಆಳ್ವಿಕೆಯಲ್ಲಿ ಈ ರಾಜ್ಯವನ್ನು ಕರ್ನಾಟಕ ಎಂದು ಮೊಟ್ಟಮೊದಲ ಬಾರಿಗೆ ಸಂಬೋಧಿಸಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ ಎಂದರು.
ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಬಿಜೆಪಿ ಮುಖಂಡ ಎಚ್. ವಿಶ್ವನಾಥ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಮಾಜಿ ಮೇಯರ್‌ಗಳಾದ ಅಯೂಬ್ ಖಾನ್, ಪುಷ್ಪಲತಾ ಜಗನ್ನಾಥ್, ಪಾಲಿಕೆ ಸದಸ್ಯರಾದ ಆಫ್ತಾಬ್, ಸುಹೇಲ್ ಬೇಗ್, ಮಾಜಿ ಸದಸ್ಯ ಶೌಕತ್ ಪಾಷ, ಎಂ.ಎಫ್. ಕಲೀಂ ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ರಾಜೀವ್‌ನಗರ ಅಲ್ ಬದರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮೆರವಣಿಗೆಯ ಮೂಲಕ ಶಾಸಕ ತನ್ವೀರ್ ಸೇಠ್ ಅವರನ್ನು ಕಾರ್ಯಕ್ರಮಕ್ಕೆ ಕರೆ ತರಲಾಗಿತ್ತು. ಇನ್ನು ಕಾರ್ಯಕ್ರಮ ಮುಗಿದ ಬಳಿಕ ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷದ ಮುಖಂಡರು ಪಕ್ಷ ಭೇದ ಮರೆತು ಜೊತೆಯಾಗಿ ಭೋಜನ ಸ್ವೀಕರಿಸಿದರು. ಇನ್ನು ರಾಜಕೀಯ ಗಣ್ಯರು ಭಾಗಿ ಹಿನ್ನೆಲೆಯಲ್ಲಿ ರಾಜೀವ್‌ನಗರ ಅಲ್ ಬದರ್ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.












Click it and Unblock the Notifications