ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಿಂಟೇಜ್ ಕಾರುಗಳ ಮ್ಯೂಸಿಯಂ-ಏನೆಲ್ಲ ವಿಶೇಷತೆಗಳಿವೆ ಗೊತ್ತಾ?
ಮೈಸೂರು, ಏಪ್ರಿಲ್, 05: ಸಾಂಸ್ಕೃತಿಕ ನಗರಿ ಅಂತಲೇ ಹೆಸರುವಾಸಿ ಆಗಿರುವ ಮೈಸೂರಿನ ಹೊರವಲಯದಲ್ಲಿ "ಪಯಣ" ಎಂಬ ಹೆಸರಿನಲ್ಲಿ ವಿಟೇಜ್ ಕಾರುಗಳ ಸಂಗ್ರಹದ ಅದ್ಭುತ ಮ್ಯೂಸಿಯಂ ತಲೆ ಎತ್ತಿದೆ. ಇದು ಥೇಟ್ ಕಾರ್ ಟೈಯರ್ ರೀತಿಯಲ್ಲೇ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಹಾಗಾದರೆ ಇದನ್ನು ಸ್ಥಾಪನೆ ಮಾಡಿದ್ದು ಯಾರು ಹಾಗೂ ಇಲ್ಲಿ ಏನೆಲ್ಲ ವಿಶೇಷತೆಗಳನ್ನು ಕಾಣಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈ ಮ್ಯೂಸಿಯಂ ಎಂಥವರನ್ನು ತನ್ನತ್ತ ಸೆಳೆದುಬಿಡುತ್ತದೆ. ಮೊದಲೇ ಮೈಸೂರು ಪ್ರವಾಸಿ ತಾಣಗಳಲ್ಲಿ ಒಂದು ಸುಂದರ ತಾಣವಾಗಿದೆ. ಅಲ್ಲದೆ ಪ್ರವಾಸಿಗರ ಮೆಚ್ಚುಗೆಗೂ ಪಾತ್ರವಾಗಿದೆ. ಮೈಸೂರಿನ ಹೊರವಲಯದಲ್ಲಿರುವ ಈ ಪಯಣ ವಿಂಟೇಜ್ ಕಾರ್ ಮ್ಯೂಸಿಯಂ ಅನ್ನು ಈ ವಾರದ ಆರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಅದ್ಭುತವಾಗಿ ವಿನ್ಯಾಸಗೊಳಿಸಲಾದ ಈ ವಸ್ತುಸಂಗ್ರಹಾಲಯದಲ್ಲಿ ಕಳೆದ ಐದು ದಶಕಗಳಲ್ಲಿ ಸಂಗ್ರಹಿಸಲಾದ ಆಟೋಮೊಬೈಲ್‌ಗಳ ಸಂಗ್ರಹವನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಈ ವಸ್ತುಸಂಗ್ರಹಾಲಯವನ್ನು ಕಾರಿನ ಟೈರ್‌ನ ಹೊರಭಾಗದ ರೀತಿಯಲ್ಲೇ ನಿರ್ಮಾಣವಾಗಿದೆ.ಇನ್ನು ಇದು ಧರ್ಮಸ್ಥಳದಲ್ಲಿರುವ ಪ್ರಸಿದ್ಧ 'ಮಂಜೂಷಾ' ಕಾರ್ ಮ್ಯೂಸಿಯಂನ ಒಂದು ಭಾಗವಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಬಳಸಿರುವ ವಿಂಟೇಜ್ ಕಾರುಗಳನ್ನು ಸಹ ಈ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಒಂದು ಕಾಲದಲ್ಲಿ ಮೈಸೂರು ಮಹಾರಾಜರ ಒಡೆತನದಲ್ಲಿದ್ದ ಅದ್ಭುತ ಕಾರುಗಳು, ಅತ್ಯಾಕರ್ಷಕ ಜೀಪ್‌ಗಳನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ವಿಶಾಲವಾದ ದೊಡ್ಡ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿದ್ದು, ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಪ್ರತಿ ವಿಂಟೇಜ್ ಕಾರಿನ ಹಿಂದಿನ ರೋಚಕ ಕಥೆಗಳನ್ನು ತಿಳಿದುಕೊಳ್ಳಬಹುದಾಗಿದೆ.
ವಸ್ತುಸಂಗ್ರಹಾಲಯವು ಬಯಲು ರಂಗಮಂದಿರ, ಫುಡ್ ಕೋರ್ಟ್ ಮತ್ತು ಆಟದ ಮೈದಾನವನ್ನು ಸಹ ಒಳಗೊಂಡಿದೆ. ಈ ಪಯಣ ವಿಂಟೇಜ್ ಕಾರ್ ಮ್ಯೂಸಿಯಂ ಉದ್ಘಾಟನೆಯು ಮೈಸೂರಿನ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.












Click it and Unblock the Notifications