ಮೈಸೂರು: ಜಾತಿಗಣತಿಗೆ ತೆರಳಿದ ವೇಳೆ ಕಾರು-ಬೈಕ್ ನಡುವೆ ಭೀಕರ ಅಪಘಾತ: ಶಿಕ್ಷಕ, ಶಿಕ್ಷಕಿಗೆ ಗಂಭೀರ ಗಾಯ
ಮೈಸೂರು, ಅಕ್ಟೋಬರ್ 19: ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇನ್ನೂ ಇದೀಗ ಜಾತಿಗಣತಿಗೆ ತೆರಳಿದ ವೇಳೆ ಕಾರು-ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಈ ವೇಳೆ ಶಿಕ್ಷಕ, ಶಿಕ್ಷಕಿ ಗಂಭೀರವಾಗಿ ಗಾಯಗೊಂಡ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
ಭೀಕರ ಅಪಘಾತದಲ್ಲಿ ಗಾಯಾಳುಗಳನ್ನು ಬೂದನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸ್ವಾಮೀಗೌಡ ಹಾಗೂ ಸಹ ಶಿಕ್ಷಕಿ ಮಧುಶ್ರೀ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಮುಖ್ಯಶಿಕ್ಷಕನ ಕಾಲು ಮುರಿದಿದ್ದು, ಸಹ ಶಿಕ್ಷಕಿಗೆ ಸಣ್ಣಪುಟ್ಟ ಗಾಯ ಆಗಿವೆ. ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಅಪಘಾತದಲ್ಲಿ ಇಬ್ಬರು ಸಾವು: ಇನ್ನೋವಾ ಕಾರು ಹಾಗೂ ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಇನ್ನೋವಾ ಕಾರು ಹಾಗೂ ಟಂಟಂ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ಬ್ರಿಡ್ಜ್ ಬಳಿ ನಡೆದಿದೆ. ಇನ್ನೋವಾ ಕಾರು ಹಾಗೂ ಟಂಟಂ ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್ (30) ಎಂಬುವವರು ಅಪಘಾತದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇನ್ನು ವಿಶಾಲ್ ವರತಿಲ್ಲೆ, ವಿಜಯಕುಮಾರ್ ಭೋವಿ, ಗುರುಪ್ರಸಾದ್ ಸುಂಕದ ಎಂಬುವರು ಗಾಯಾಳುಗಳಾಗಿದ್ದು, ಇವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಮತ್ತು ಗಾಯಾಳುಗಳು ನವನಗರದ 45ನೇ ಸೆಕ್ಟರ್ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಘಟನೆ ಸ್ಥಳಕ್ಕೆ ಆಮಿಸಿದ ಕಲಾದಗಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಅಪಘಾತಕ್ಕೆ ಕಾರಣ ಏನು?: ಊಟಕ್ಕೆಂದು ಹತ್ತಿರದ ವಿಜಯಪುರ ಜಿಲ್ಲೆಯ ಕೊಲ್ಹಾರಕ್ಕೆ ಹೋಗಿದ್ದ ಐವರಿದ್ದ ಟಂಟಂ ವಾಹನ ತಡರಾತ್ರಿ ಬಾಗಲಕೋಟೆ ಕಡೆಗೆ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಇನ್ನೋವಾ ಕಾರು ಚಾಲಕನ ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮುಂದೆ ಹೋಗುತ್ತಿದ್ದ ಮಹಿಂದ್ರಾ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಟಂಟಂಗೆ ಡಿಕ್ಕಿ ಹೊಡೆದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹೀಗೆ ಅಪಘಾತ ಪ್ರಕರಾಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ.












Click it and Unblock the Notifications