ಮೈಸೂರು : ನಕಲಿ ನೋಟು ಮುದ್ರಣ, ಹವ್ಯಾಸಿ ಕಲಾವಿದರ ಬಂಧನ
ಮೈಸೂರು, ಅಕ್ಟೋಬರ್ 15 : ಸಿನಿಮಾ ನಿರ್ಮಾಣ ಮಾಡಲು ನಕಲಿ ನೋಟು ಮುದ್ರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಹವ್ಯಾಸಿ ಕಲಾವಿದರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಒಬ್ಬ ಆರೋಪಿ ಪರಾರಿಯಾಗಿದ್ದು ಉದಯಗಿರಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಭರತ್, ಲಿಕೇಶ್ ಮತ್ತು ತೇಜಸ್ ಎಂಬುವವರು ನಕಲಿ ನೋಟು ಮುದ್ರಿಸಿ ಮಾರಾಟ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ಭರತ್ ಮತ್ತು ಲಿಕೇಶ್‌ರನ್ನು ಪೊಲೀಸರು ಬಂಧಿಸಿದ್ದು, ತೇಜಸ್ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳಿಂದ 100 ರೂ. ಮುಖಬೆಲೆಯ 110 ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. [ಮೈಸೂರಿನಲ್ಲಿದೆ ನಕಲಿ ನೋಟಿನ ಜಾಲ]

ಗುರುವಾರ ಬೆಳಗ್ಗೆ ಕಲ್ಯಾಣನಗರ ಬಡಾವಣೆಯಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ವೇಳೆ ಭರತ್ ಮತ್ತು ಲಿಕೇಶ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರು ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮನೆಯೊಂದರಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. [ಖೋಟಾ ನೋಟು ಪತ್ತೆ ಮಾಡುವುದು ಹೇಗೆ?]
ಆರೋಪಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದಾಗ ನಕಲಿ ನೋಟು ತಯಾರಿಕೆಗೆ ಬಳಸುತ್ತಿದ್ದ ಪ್ರಿಂಟರ್, ಇಂಕು, ಮಾರ್ಕರ್, ಕಾಗದಗಳು ಪತ್ತೆಯಾಗಿದ್ದು ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಆರು ತಿಂಗಳಿನಿಂದ ನಕಲಿ ನೋಟು ಮುದ್ರಣ ಮಾಡುತ್ತಿರುವಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. [ನೋಟು ನೋಡದೆ ಕಿಸೆಗೆ ಹಾಕಿದ್ರೆ ಕಥೆ ಮುಗೀತು!]
ಸಿನಿಮಾ ಮಾಡಲು ಹೊರಟಿದ್ದರು : ಭರತ್, ಲಿಕೇಶ್ ಮತ್ತು ತೇಜಸ್ ಹ್ಯವಾಸಿ ಕಲಾವಿದರು. ಮೂವರು ಸೇರಿ ಸಿನಿಮಾ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದರು. ಅದಕ್ಕೆ ಅಗತ್ಯವಿರುವ ಹಣಕ್ಕಾಗಿ ನಕಲಿ ನೋಟು ಮುದ್ರಣ ಆರಂಭಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಪರಾರಿಯಾಗಿರುವ ತೇಜಸ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.












Click it and Unblock the Notifications