ಹನಗೋಡು ಹೋಬಳಿಯಲ್ಲಿ ಹುಲಿಯ ಕಾಟ: ಆತಂಕದಲ್ಲಿ ರೈತ ವರ್ಗ
ಮೈಸೂರು, ಡಿಸೆಂಬರ್ 4: ಜಿಲ್ಲೆಯ ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳ ಜನರು ಸದಾ ಕಾಡು ಪ್ರಾಣಿಗಳ ಹಾವಳಿಗೆ ಸಿಲುಕಿ ತತ್ತರಿಸುತ್ತಿರುವುದು ಹೊಸದಲ್ಲ. ಆದರೆ ಈಗ ಈ ವ್ಯಾಪ್ತಿಯಲ್ಲಿ ಹುಲಿ ಅಟ್ಟಹಾಸ ಮೆರೆಯುತ್ತಿದ್ದು ಭಯದಲ್ಲಿ ಜನ ಬದುಕುವಂತಾಗಿದೆ.
ಹುಣಸೂರು ತಾಲೂಕಿನ ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ಶೆಟ್ಟಹಳ್ಳಿ, ಅಬ್ಬೂರು ಸೇರಿದಂತೆ ಹಲವು ಗ್ರಾಮಗಳ ಜನರು ಕೃಷಿ ಮತ್ತು ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಬೆಳೆದ ಬೆಳೆಯನ್ನು ಕಾಡಾನೆ ಸೇರಿದಂತೆ ಕಾಡು ಪ್ರಾಣಿಗಳು ತಿಂದು ಹಾಳು ಮಾಡುತ್ತಿದ್ದರೆ, ಮತ್ತೊಂದು ಕಡೆ ಚಿರತೆ ಹುಲಿಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಇದರ ನಡುವೆ ರೈತರು ಕೂಡ ಕಾಡಾನೆ, ಹುಲಿ, ಚಿರತೆ ದಾಳಿಗೆ ಬಲಿಯಾಗುತ್ತಿದ್ದಾರೆ.
ಮೈಸೂರಿನ ಕೊಳಚೆ ನೀರಿನ ಘಟಕದಲ್ಲಿ 10 ಮೊಸಳೆಗಳು: ಹೆಚ್ಚಿದ ಆತಂಕ
ಕಾಡಂಚಿನ ಗ್ರಾಮಗಳ ಜನರು ಇತ್ತೀಚೆಗೆ ಕೆಲ ವರ್ಷಗಳಿಂದ ಪ್ರಾಣವನ್ನು ಕೈನಲ್ಲಿಟ್ಟುಕೊಂಡು ಕೃಷಿ ಮಾಡಿಕೊಂಡು ಬದುಕುವಂತಾಗಿದೆ. ಕಾರಣ ಕಾಡಂಚಿನಲ್ಲಿನ ಆನೆ ತಡೆ ಕಂದಕಗಳು, ಸೋಲಾರ್ ಬೇಲಿ ಸೇರಿದಂತೆ ಕಾಡು ಪ್ರಾಣಿಗಳು ಅರಣ್ಯ ದಾಟದಂತೆ ಮಾಡಿದ ಯೋಜನೆಗಳು ಹಳ್ಳ ಹಿಡಿದಿದ್ದರಿಂದ ಆಗಾಗ ಕಾಡು ಪ್ರಾಣಿಗಳು ಗ್ರಾಮಗಳಿಗೆ ಸಲೀಸಾಗಿ ಬರುತ್ತಿವೆ. ಇದು ಜನರ ನಿದ್ದೆಗೆಡಿಸುವಂತೆ ಮಾಡಿದೆ.

ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ
ಈ ನಡುವೆ ಈ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹನಗೋಡು ಹೋಬಳಿಯ ಅಬ್ಬೂರು ಗ್ರಾಮದ ಕರಿಗೌಡರಿಗೆ ಸೇರಿದ ಕರುವಿನ ಮೇಲೆ ಹಾಡಹಗಲೇ ಹಠಾತ್ ದಾಳಿ ನಡೆಸಿದೆ. ಈ ವೇಳೆ ಹತ್ತಿರದಲ್ಲಿದ್ದ ಮಾಲೀಕ ಕರಿಗೌಡರು ಜೋರಾಗಿ ಕಿರುಚಿಕೊಂಡಿದ್ದರಿಂದ ಅದು ಅಲ್ಲಿಂದ ಪರಾರಿಯಾಗಿದೆ. ಆದರೆ ಜಾನುವಾರುಗಳ ರಕ್ತದ ರುಚಿ ನೋಡಿದ ಹುಲಿ ಯಾವಾಗ ಬೇಕಾದರೂ ಬರಬಹುದು ಎಂಬ ಭಯ ರೈತರನ್ನು ಕಾಡುತ್ತಿದೆ.
ಈ ವ್ಯಾಪ್ತಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸರ್ವ ರೀತಿಯ ಪ್ರಯತ್ನ ಮಾಡಿದರೂ, ಹುಲಿ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗುತ್ತಲೇ ಇದೆ. ಇದರಿಂದ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡುವುದೇ ಕಷ್ಟವಾಗಿದೆ. ಅಷ್ಟೇ ಅಲ್ಲದೆ ಯಾವಾಗ ದನದ ಕೊಟ್ಟಿಗೆಗೆ ನುಗ್ಗಿ ಬಿಡುತ್ತದೆಯೋ ಎನ್ನುವ ಭಯವೂ ರೈತರಿಗೆ ಆರಂಭವಾಗಿದೆ.

ಹೊಲಗದ್ದೆಗಳಲ್ಲಿ ಕೆಲಸ ಮಾಡಲು ರೈತರಿಗೆ ಆತಂಕ
ಬಹಳ ದಿನಗಳಿಂದ ಹುಲಿ ಕಾಣಿಸಿಕೊಳ್ಳದ ಕಾರಣ ಜನ ನೆಮ್ಮದಿಯಾಗಿದ್ದರು. ಇದೀಗ ಮತ್ತೆ ಹುಲಿ ಕಾಣಿಸಿಕೊಂಡಿರುವುದರಿಂದ ಈ ವ್ಯಾಪ್ತಿಯ ಜನರಿಗೆ ನಿದ್ದೆ ಇಲ್ಲದಂತಾಗಿದೆ. ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಭಯಪಡುವಂತಾಗಿದೆ. ನಾಗರಹೊಳೆ ಉದ್ಯಾನವನದಂಚಿನಲ್ಲಿ ಜಮೀನು ಹೊಂದಿ ಅದರಲ್ಲಿ ಕೃಷಿ ಮಾಡಿಕೊಂಡು ನೂರಾರು ಕುಟುಂಬಗಳು ಬದುಕುತ್ತಿವೆ. ಇವರಿಗೆ ಕೃಷಿ ಹೊರತು ಪಡಿಸಿದರೆ ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲದಾಗಿದೆ. ಹೀಗಿರುವಾಗ ಹುಲಿ ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಮುಂದೇನು ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಹಸು ಮತ್ತು ಮೇಕೆಯನ್ನು ಕೊಂದು ತಿಂದು ಹಾಕಿದ ಹುಲಿ
ಇದೀಗ ಜಾನುವಾರುಗಳನ್ನು ಟಾರ್ಗೆಟ್ ಮಾಡುತ್ತಿರುವ ಹುಲಿ ಮನುಷ್ಯರ ಮೇಲೆಯೂ ದಾಳಿ ಮಾಡುವ ಸಾಧ್ಯತೆಯಿದೆ. ಮತ್ತು ಯಾವ ಪ್ರದೇಶದಲ್ಲಿ ಈ ಹುಲಿ ಇರುತ್ತದೆ ಅಂದಾಜಿಸಲು ಅಸಾಧ್ಯವಾಗಿದೆ. ಇದರಿಂದ ಕಾಡಂಚಿನ ರೈತರಲ್ಲಿ ಭಯ ಶುರುವಾಗಿದ್ದು, ಅರಣ್ಯದಿಂದ ಬಂದ ಹುಲಿ ಮತ್ತೆ ಅರಣ್ಯಕ್ಕೆ ಸೇರದೆ, ಪೊದೆ ಒಳಗಡೆ ಅವಿತುಕೊಂಡು ಅಟ್ಟಹಾಸ ಮೆರೆಯುತ್ತಿರುವುದರಿಂದ ಓಡಾಡಲು, ಕೆಲಸ ಮಾಡಲು ಜನರು ಭಯಪಡುತ್ತಿದ್ದಾರೆ.
ಕಳೆದ ಒಂದು ವಾರದ ಹಿಂದೆ ಹುಲಿ ಅಬ್ಬೂರು ಗ್ರಾಮದ ತಿಮ್ಮೇಗೌಡರಿಗೆ ಸೇರಿದ ಹಸು ಮತ್ತು ಮೇಕೆಯನ್ನು ಕೊಂದು ತಿಂದು ಹಾಕಿತ್ತು. ಅಲ್ಲದೆ ಮೂರು ದಿನಗಳ ಹಿಂದೆ ಸಮೀಪದ ಶೆಟ್ಟಳ್ಳಿ ಅಬ್ಬೂರು ಹಾಗೂ ಬಿ.ಆರ್. ಕಾವಲ್ ಗ್ರಾಮದಲ್ಲಿ ಹುಲಿಯ ಹೆಜ್ಜೆ ಪತ್ತೆಯಾಗಿತ್ತು. ಹುಲಿಯು ಜಾನುವಾರುಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿರುವುದರಿಂದ ಈ ಭಾಗದ ಜನತೆ ಆತಂಕಗೊಂಡಿದ್ದು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ತೋಟಗಳಿಗೆ ಕೆಲಸಕ್ಕೆ ತೆರಳುವ ಕೂಲಿ- ಕಾರ್ಮಿಕರು ಭಯದಲ್ಲಿ ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುವಂತಾಗಿದೆ.

ಹುಲಿಗಾಗಿ ಅರಣ್ಯ ಇಲಾಖೆ ಹುಡುಕಾಟ
ತಕ್ಷಣ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಕ್ರಮ ವಹಿಸಬೇಕು ಎಂದು ನೇರಳಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಹುಣಸೂರು ವಲಯದ ಡಿಆರ್‌ಎಫ್ಒ ಸಿದ್ದರಾಜು ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ. ಇನ್ನು ಸಾಕು ಆನೆಯ ಮೂಲಕ ಕಾರ್ಯಾಚರಣೆ ನಡೆಸಿ ಹುಲಿಯ ಚಲನವಲನಗಳನ್ನು ಪತ್ತೆಹಚ್ಚಿ ಕೂಡಲೇ ಕ್ರಮ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸದ್ಯ ಹುಲಿಗಾಗಿ ಹುಡುಕಾಟ ನಡೆಯುತ್ತಿದೆ. ಅದು ಪತ್ತೆಯಾಗಿ ಅದರ ಸೆರೆಯಾಗುವ ತನಕ ಸುತ್ತಲಿನ ಜನರು ನೆಮ್ಮದಿಯಾಗಿ ನಿದ್ದೆ ಮಾಡದಂತಾಗಿದೆ.