ಮೈಸೂರಿನಲ್ಲಿ ಮೂರು "ನಮ್ಮ ಕ್ಲಿನಿಕ್" ಕೇಂದ್ರಗಳ ಆರಂಭ, ಯಾವೆಲ್ಲ ರೋಗಗಳಿಗೆ ಚಿಕಿತ್ಸೆ ಲಭ್ಯ?
ಮೈಸೂರು, ಡಿಸೆಂಬರ್, 15: ರಾಜ್ಯಾದ್ಯಂತ ನಮ್ಮ ಕ್ಲಿನಿಕ್ ಆರಂಭಗೊಂಡಿದ್ದು, ಬುಧವಾರ ಮೈಸೂರು ಜಿಲ್ಲೆಯಲ್ಲಿ ಮೂರು ಕೇಂದ್ರಗಳು ಕಾರ್ಯಾರಂಭ ಆಗಿವೆ.
ನಗರ ಕೇಂದ್ರಕ್ಕೆ ಹೊಂದಿಕೊಂಡಿರುವ ಹೂಟಗಳ್ಳಿ ಗ್ರಾಮಾಂತರ ವ್ಯಾಪ್ತಿಯಲ್ಲಿ, ಹೆಗ್ಗಡದೇವನ ಕೋಟೆ, ತಿ.ನರಸೀಪುರ ತಾಲೂಕಿನಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಯಿತು. ನಗರದ ವ್ಯಾಪ್ತಿಯಲ್ಲಿ ಮೂರು ಕಡೆ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಮೊದಲಿಗೆ ಈಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೂಟಗಳ್ಳಿಯಲ್ಲಿ ಆರಂಭಿಸಲಾಗಿದೆ. ಇದೇ ರೀತಿ ಹಾಗೂ ಕೆಲವೇ ದಿನಗಳಲ್ಲಿ ಶ್ರೀರಾಂಪುರ ಮತ್ತು ಎರಗನಹಳ್ಳಿಯಲ್ಲಿ ಗ್ರಾಮಾಂತರ ಭಾಗದಲ್ಲಿ, ಕೆ.ಆರ್.ನಗರದಲ್ಲಿ ಆರಂಭವಾಗಲಿದೆ. ನಗರ ಪ್ರದೇಶದಲ್ಲಿ ಆರೋಗ್ಯ ಸೇವೆಯಿಂದ ವಂಚಿತವಾಗಿರುವ ಹಿಂದುಳಿದ ಹಾಗೂ ದುರ್ಬಲ ವರ್ಗದವರು ವಾಸಿಸುವ ಪ್ರದೇಶಗಳಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ನಮ್ಮ ಕ್ಲಿನಿಕ್ ಆರಂಭಗೊಂಡಿದೆ.
ಮೂರು ನಮ್ಮ ಕ್ಲಿನಿಕ್ ಕೇಂದ್ರಗಳ ಆರಂಭ
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಈ ಬಗ್ಗೆ ಮಾತನಾಡಿ, ಪಿಎಚ್‌ಸಿ ಮಾದರಿಯಲ್ಲಿಯೇ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ. ವೈದ್ಯರು, ಸ್ಟಾಪ್ ನರ್ಸ್, ಗ್ರೂಪ್ ಡಿ, ಡಾಟಾ ಎಂಟ್ರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಕ್ಲಿನಿಕ್ ಸಮೀಪದಲ್ಲಿರುವ ಪಿಎಚ್‌ಸಿಯ ಎಎನ್‌ಎಂ (ಕಿರಿಯ ಆರೋಗ್ಯ ಸಹಾಯಕಿಯರು) ಸೇರಿದಂತೆ ಇನ್ನಿತರ ಕ್ಷೇತ್ರದ ಕಾರ್ಯ ಸಿಬ್ಬಂದಿ, ಲಸಿಕಾ ಸಿಬ್ಬಂದಿಗಳೇ ಇಲ್ಲಿಯೂ ಅದೇ ಕೆಲಸವನ್ನು ಮುಂದುವರೆಸುತ್ತಾರೆ. ನಗರ ಪ್ರದೇಶದಲ್ಲಿ ವಾಸಿಸುವವರ ಪ್ರಾಥಮಿಕ ಆರೋಗ್ಯದಲ್ಲಿ ಹಣ ದುಂದುವೆಚ್ಚವಾಗದಂತೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಅಂದಾಜು 14 ಮಾದರಿಯ ಚಿಕಿತ್ಸೆಗಳು ಇಲ್ಲಿ ದೊರೆಯುತ್ತವೆ ಎಂದು ತಿಳಿಸಿದರು.

ಯಾವೆಲ್ಲ ರೋಗಗಳಿಗೆ ಚಿಕಿತ್ಸೆ ಲಭ್ಯ?
ಇಲ್ಲಿ ಗರ್ಭಿಣಿ ಆರೈಕೆ ಹಾಗೂ ಬಾಣಂತಿ ಸೇವೆ, ನವಜಾತ ಶಿಶು ಆರೈಕೆ ಹಾಗೂ ಚುಚ್ಚು ಮದ್ದು ಸೇವೆ. ಮಕ್ಕಳ ಹಾಗೂ ಹದಿಹರೆಯದವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಅಡಿಯಲ್ಲಿ ಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ಅಸಂಕ್ರಾಮಿಕ ರೋಗಗಳ ನಿರ್ವಹಣೆ, ಹಿರಿಯ ನಾಗರಿಕರು ಹಾಗೂ ಉಪಶಾಮಕ ಆರೈಕೆಯನ್ನು ಮಾಡಲಾಗುತ್ತದೆ. ಕಣ್ಣು, ದಂತ ಆರೋಗ್ಯ ಸೇವೆಗಳ ಅನುಷ್ಠಾನದ ಅಡಿ ತುರ್ತು ವೈದ್ಯಕೀಯ ಸೇವೆ, ಮಾನಸಿಕ ಆರೋಗ್ಯಕ್ಕೂ ಸಹ ಚಿಕಿತ್ಸೆ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ರಾಜ್ಯದ ಜನತೆಗೆ ಆರೋಗ್ಯ ಸೇವೆ ಉತ್ತಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಮ್ಮ ಕ್ಲಿನಿಕ್ ಆರಂಭಿಸಲು ಮುಂದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ನಮ್ಮ ಕ್ಲಿನಿಕ್‌ಗಳು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿವೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ನಮ್ಮ ಕ್ಲಿನಿಕ್' ಲೋಗೊ ವಿನ್ಯಾಸಗೊಳಿಸಲು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಸೃಜನಾತ್ಮಕ ಮತ್ತು ನವೀನ ಲೋಗೋ ವಿನ್ಯಾಸ ಮಾಡಲು ರಾಜ್ಯದ ಜನತೆ ಅವಕಾಶವಿದೆ. ನಮ್ಮ ಕ್ಲಿನಿಕ್‌ನ ವಿಭಿನ್ನ ಮತ್ತು ಆಕರ್ಷಕ ಗುರುತು ಹೇಗಿರಬೇಕು ಅನ್ನುವುದನ್ನು ಈಗ ನೀವೆ ನಿರ್ಧರಿಸಬಹುದಾಗಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಇತ್ತೀಚೆಗಷ್ಟೇ ಮಾಹಿತಿಯನ್ನು ನೀಡಿದ್ದರು.












Click it and Unblock the Notifications