ಮಳೆಗಾಗಿ ಯಾವ್ಯಾವ ಮದುವೆ ಮಾಡುತ್ತಾರೆ ಗೊತ್ತಾ?
ಮೈಸೂರು, ಜೂನ್ 16: ಕಳೆದ ನಾಲ್ಕು ವರ್ಷಗಳಿಂದ ಮುಂಗಾರು ಮತ್ತು ಹಿಂಗಾರು ಮಳೆ ಉತ್ತಮವಾಗಿ ಸುರಿಯುವುದರೊಂದಿಗೆ ಕೆರೆಕಟ್ಟೆಗಳು ತುಂಬುವಂತೆ ಮಾಡಿದೆ. ಆದರೂ ಸಕಾಲದಲ್ಲಿ ಮಳೆಯಾಗದೆ ರೈತರು ಕೃಷಿ ಮಾಡಲು ಪರದಾಡುವುದು ನಿಂತಿಲ್ಲ.
ಈಗ ಮೊದಲಿನಂತೆ ಕಾಲಕ್ಕೆ ತಕ್ಕಂತೆ ಮಳೆ ಸುರಿಯುತ್ತಿಲ್ಲ. ಮುಂಗಾರಿನಲ್ಲಿ ಎಡೆಬಿಡದೆ ಸುರಿಯುವ ಜಿಟಿಜಿಟಿ ಮಳೆಯ ಆ ಚಿತ್ರಣ ಈಗ ಅಪರೂಪವಾಗುತ್ತಿದೆ. ಮಳೆ ಯಾವಾಗ ಬರುತ್ತೋ ಹೇಳಲಾಗುತ್ತಿಲ್ಲ. ಸುರಿದರೆ ಒಮ್ಮೆಗೆ ಸುರಿದು ಪ್ರಾಕೃತಿಕ ಅನಾಹುತ ಸೃಷ್ಠಿಸಿ ಸ್ತಬ್ದವಾಗಿ ಬಿಡುತ್ತದೆ.
ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ. ಸಾಮಾನ್ಯವಾಗಿ ಮುಂಗಾರಿನಲ್ಲಿ ಆರಂಭವಾದ ಮಳೆ ಒಂದೇ ಸಮನೆ ಸುರಿಯುತ್ತಿತ್ತು. ಒಮ್ಮೊಮ್ಮೆ ಮಳೆ ಜೋರಾಗಿ ಸುರಿದಂಗೆ ಪ್ರವಾಹ ಪರಿಸ್ಥಿತಿ ತಲೆದೋರುತ್ತಿತ್ತು. ಅದನ್ನು ಹೊರತುಪಡಿಸಿದರೆ ಪ್ರಕೃತಿ ವಿಕೋಪಗಳಂತಹ ಅನಾಹುತಗಳು ಸಂಭವಿಸುತ್ತಿದ್ದದ್ದು ಅಪರೂಪ. ಆದರೆ ಈಗ ಎಲ್ಲವೂ ಬದಲಾಗಿದೆ. ಅಗತ್ಯ ಸಮಯಕ್ಕೆ ಸರಿಯಾಗಿ ಮಳೆ ಸುರಿಯದ ಕಾರಣದಿಂದಾಗಿ ತೊಂದರೆಗಳು ಎದುರಾಗುತ್ತಿವೆ. ಅಷ್ಟೇ ಅಲ್ಲ ಮಳೆ ಸುರಿದರೂ ಕೂಡ ಅನಾಹುತ ತಪ್ಪಿದಲ್ಲ.
ಏಕೆ ಹೀಗಾಗುತ್ತಿದೆ ಎನ್ನುವುದನ್ನು ನೋಡಿದರೆ ಅದಕ್ಕೆ ನಾವೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ನಾವು ಅಭಿವೃದ್ಧಿಯಾಗುತ್ತಿದ್ದಂತೆಯೇ ಪರಿಸರದ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದೇವೆ. ಕಾಡು ನಾಡಾಗುತ್ತಿವೆ. ಭೂಮಿಯ ಹೆಚ್ಚಿನ ಭಾಗ ಕಾಂಕ್ರಿಟ್, ಡಾಂಬರ್‌ನಿಂದ ಮುಚ್ಚುತ್ತಿದೆ. ಇದರಿಂದ ಭೂಮಿಗೆ ಬಿದ್ದ ನೀರು ಇಂಗದೆ ಹರಿದು ಹೋಗುತ್ತಿದೆ. ಇದರಿಂದ ಅಂತರ್ಜಲದ ಸಮಸ್ಯೆ ಎದುರಾಗಿದೆ. ಪ್ರಕೃತಿಗೆ ನಾವು ಮೇಲಿಂದ ಮೇಲೆ ದ್ರೋಹ ಎಸಗುತ್ತಿರುವುದರಿಂದ ವಾತಾವರಣದಲ್ಲಿ ಏರುಪೇರಾಗುತ್ತಿದೆ. ಹೀಗಾಗಿ ಅನಾವೃಷ್ಟಿ ಮತ್ತು ಅತಿವೃಷ್ಠಿಗಳು ಹೆಚ್ಚುತ್ತಿದ್ದು, ಸಮತೋಲನ ಸಾಧ್ಯವಾಗದೆ ಪರದಾಡುವಂತಾಗಿದೆ.

ಮಳೆಗಾಗಿ ದೇವರ ಮೊರೆ
ಮಳೆಗಾಲದಲ್ಲಿ ಮಳೆ ಬಾರದೆ ಹೋದರೆ ಅದಕ್ಕಿಂತ ಭಯ ಪಡಬೇಕಾದ ಸಂಗತಿ ಮತ್ತೊಂದಿಲ್ಲ. ನೀರು ಮನುಷ್ಯನಿಗೆ ಅತ್ಯಮೂಲ್ಯವಾಗಿದ್ದು ಅದು ಸಮೃದ್ಧವಾಗಿ ಸಿಗಬೇಕಾದರೆ ಮಳೆ ಸುರಿಯಲೇ ಬೇಕು. ಮಳೆ ಉತ್ತಮವಾಗಿ ಸುರಿದರೆ ಎಲ್ಲರೂ ನೆಮ್ಮದಿಯುಸಿರು ಬಿಡಲು ಸಾಧ್ಯವಾಗುತ್ತದೆ. ವೈಜ್ಞಾನಿಕವಾಗಿ ಮಳೆ ಹೇಗೆ ಸುರಿಯುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ಮಳೆ ಸುರಿಯದೆ ಹೋದಾಗ ನಾವೆಲ್ಲರೂ ಬೇರೆ ದಾರಿಕಾಣದೆ ದೇವರ ಮೊರೆ ಹೋಗುತ್ತೇವೆ. ಪೂಜೆ ಪುರಸ್ಕಾರ ಯಜ್ಞಗಳನ್ನು ಮಾಡುತ್ತೇವೆ. ಗ್ರಾಮೀಣ ಪ್ರದೇಶಗಳಲ್ಲಂತೂ ಮಳೆ ಸುರಿಸಲು ಹಲವಾರು ಸಂಪ್ರದಾಯಗಳು ಜಾರಿಯಲ್ಲಿದ್ದು, ಅದೆಲ್ಲವನ್ನು ಮಾಡುವ ಮೂಲಕ ದೇವರಿಗೆ ಮೊರೆಯಿಡುತ್ತಾರೆ.
ಇಷ್ಟಕ್ಕೂ ಮಳೆಗಾಗಿ ಏನೆಲ್ಲ ಮಾಡುತ್ತಾರೆ ಎಂಬುದನ್ನು ನೋಡಿದರೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಳೆ ಬಾರದೆ ಬರ ಕಾಡಿದಾಗ ಬಹಳಷ್ಟು ಮಂದಿ, ಕಪ್ಪೆ, ಕತ್ತೆ, ಅರಳಿ ಬೇವಿಗೆ, ಗಂಡುಮಕ್ಕಳಿಗೆ ಮದುವೆ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದನ್ನು ನಾವು ನೋಡಿದ್ದೇವೆ. ಮೇಲುನೋಟಕ್ಕೆ ಮೂಢನಂಬಿಕೆಯಂತೆ ಕಂಡು ಬಂದರೂ ಅದರಾಚೆಗೆ ಇರುವ ನಂಬಿಕೆಯನ್ನು ನಾವು ತಳ್ಳಿಹಾಕುವಂತಿಲ್ಲ.

ಕಪ್ಪೆಗಳ ಮದುವೆ
ಇನ್ನು ಕಪ್ಪೆ ಮದುವೆ ಮಾಡುವ ಸಂಪ್ರದಾಯ ಹೇಗೆ ಇರುತ್ತದೆ ಎಂದರೆ, ಗ್ರಾಮದ ಯುವಕರು ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ತಂದು, ಯುವಕರು ಗಂಡು ಕಪ್ಪೆಗೆ ಅಲಂಕಾರ ಮಾಡಿದರೆ, ಯುವತಿಯರು ಹಾಗೂ ಮಹಿಳೆಯರು ಹೆಣ್ಣು ಕಪ್ಪಗೆ ಶೃಂಗಾರ ಮಾಡಿ, ನಂತರ ಮುತ್ತೈದೆಯರು ಕಳಸ ಹೊತ್ತುಕೊಂಡು ನೀರು ತರುವ ಶಾಸ್ತ್ರಕ್ಕೆ ಮುಂದಾಗುತ್ತಾರೆ. ಇದರ ಜತೆಗೆ ಗಂಡು ಕಪ್ಪೆಗೆ ಯುವಕರು ಹಸೆಮಣೆ ಏರಿಸುವ ಶಾಸ್ತ್ರ ಮಾಡುತ್ತಾರೆ.
ನಂತರ ಗಂಡು ಕಪ್ಪೆಯನ್ನು ಪುಟಾಣಿ ಮಕ್ಕಳು ಗ್ರಾಮದ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಹೆಣ್ಣಿನ ಮನೆಗೆ ಕರೆದೊಯ್ಯುತ್ತಾರೆ. ಆಗ ಹೆಣ್ಣು ಕಪ್ಪೆಯ ಕಡೆಯವರು ಮನೆ ತುಂಬಿಸಿಕೊಳ್ಳುವ ಶಾಸ್ತ್ರವನ್ನು ಮಾಡುತ್ತಾರೆ. ಬಳಿಕ ಪುರೋಹಿತರು ಮೂಹೂರ್ತಕ್ಕೆ ಕಾಲ ನಿಗದಿ ಮಾಡಿ ಗಂಡು ಮತ್ತು ಹೆಣ್ಣು ಕಪ್ಪೆಗಳನ್ನು ಮದುವೆ ಚಪ್ಪರದ ಮಂಟಪಕ್ಕೆ ಕರೆ ತಂದು ಗ್ರಾಮದ ಐದು ಜನ ಮುತ್ತೈದೆಯರು ನವ ವಧು ವರರಿಗೆ ಕಂಕಣವನ್ನು ಕಟ್ಟಿ, ಅರಿಶಿನ ಕುಂಕುಮ ಇಟ್ಟು ಮಡಿಲಕ್ಕಿ ತುಂಬುತ್ತಾರೆ.
ಪುರೋಹಿತರು ಸೂಕ್ತ ಸಮಯದಲ್ಲಿ ಎಲ್ಲರ ಸಮ್ಮುಖದಲ್ಲಿ ಮಂತ್ರಪಠಣ ಮಾಡಿ ಗಟ್ಟಿಮೇಳದೊಂದಿಗೆ ಮಾಂಗಲ್ಯ ಮಂತ್ರವನ್ನು ಪಠಿಸುತ್ತಾ ಕಪ್ಪೆಗಳಿಗೆ ತಾಳಿ ಕಟ್ಟಿಸುತ್ತಾರೆ. ಈ ವೇಳೆ ಗ್ರಾಮದ ಹಿರಿಯರು, ಮುಖಂಡರು, ಮುತ್ತೈದೆಯರು ನೂತನ ವಧುವರರಿಗೆ ಶುಭ ಹಾರೈಸುತ್ತಾರೆ. ಇದಾದ ನಂತರ ನವ ದಂಪತಿಗಳನ್ನು ಒಂದು ತಟ್ಟೆಯಲ್ಲಿ ಕುಳ್ಳರಿಸಿ ಗ್ರಾಮದ ಪುಟಾಣಿ ಮಕ್ಕಳು ಮೆರವಣಿಗೆ ಮೂಲಕ ಪ್ರತಿಯೊಂದು ಮನೆಗೆ ಕರೆದೊಯ್ದು ಮಡಲಕ್ಕಿ ತುಂಬಿಸಿ, ಅಕ್ಷತೆ ಹಾಕಿಸಿ ಗ್ರಾಮದ ಅರಳಿ ಮರದಡಿಯಲ್ಲಿ ಅರತಕ್ಷತೆ ನಡೆಸುತ್ತಾರೆ.

ಕತ್ತೆಗಳಿಗೂ ವಿವಾಹ
ಕತ್ತೆಗಳಿಗೆ ನಡೆಯುವ ಮದುವೆಯಲ್ಲಿ ಗಂಡು ಹೆಣ್ಣು ಕತ್ತೆಗಳೊಂದಿಗೆ ದೇವಸ್ಥಾನಕ್ಕೆ ತೆರಳುವ ಹಿರಿಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಶುಭಲಗ್ನದಲ್ಲಿ ದೇಗುಲದ ಪೂಜಾರಿ ಅರಿಶಿಣದ ಕೊಂಬಿನ ತಾಳಿಯನ್ನು ಗ್ರಾಮದ ವ್ಯಕ್ತಿಯೊಬ್ಬನ ಮೂಲಕ ಕತ್ತೆಗೆ ಕಟ್ಟಿಸಿ ಮದುವೆ ಮಾಡಿಸುತ್ತಾರೆ. ಇದೇ ವೇಳೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಬಳಿಕ ಎಲ್ಲರೂ ಒಂದೆಡೆ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕತ್ತೆಗಳ ಮೆರವಣಿಗೆ ಮಾಡುತ್ತಾರೆ. ಈ ಸಂದರ್ಭ ಪ್ರತಿ ಮನೆಯಲ್ಲೂ ಮಹಿಳೆಯರು ಕತ್ತೆಗಳಿಗೆ ಆರತಿ ಎತ್ತಿ ಪೂಜೆ ಸಲ್ಲಿಸಲಾಗುತ್ತದೆ. ದಾರಿಯುದ್ದಕ್ಕೂ ತಮಟೆ ಬಡಿಯುತ್ತಾ, ಕುಣಿಯುತ್ತಾ ಯುವಕರು ಮಕ್ಕಳು ಮೆರವಣಿಗೆಯಲ್ಲಿ ಸಾಗಿ ದೇವಸ್ಥಾನಕ್ಕೆ ಹಿಂತಿರುಗುತ್ತಾರೆ.

ಮರಗಳ ನಡುವೆ ವಿವಾಹ
ವಧು-ವರರಿಗೆ ಮಾಡುವಂತೆಯೇ ಅರಳಿಮರ ಮತ್ತು ಬೇವಿನಮರಕ್ಕೂ ಸಿಂಗಾರ ಮಾಡಿ ಕಳಶಗಳನ್ನು ತಂದು ಪೂಜೆ ಮಾಡಿ ಅರಳಿಮರ (ವರ) ಮತ್ತು ಬೇವಿನಮರ(ವಧು)ಗಳನ್ನು ಸಿಂಗಾರ ಮಾಡಿ ಮನೆತುಂಬಿಸುವ ಶಾಸ್ತ್ರವನ್ನು ಮಾಡಲಾಗುತ್ತದೆ. ಇದೇ ವೇಳೆ ಬಳೆ ತೊಡಿಸುವ ಶಾಸ್ತ್ರವೂ ನಡೆಯುತ್ತದೆ. ಬಳಿಕ ಮಂಗಳವಾದ್ಯದೊಂದಿಗೆ ತಾಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮುತ್ತೈದೆಯರು ಗ್ರಾಮದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ಪುರೋಹಿತರು ಮಂತ್ರಗಳನ್ನು ಪಠಿಸಿ ಮಾಂಗಲ್ಯಧಾರಣೆಯೊಂದಿಗೆ ಮದುವೆ ವಿವಾಹ ಮಾಡಲಾಗುತ್ತದೆ. ಬಳಿಕ ಮದುವೆಗೆ ಆಗಮಿಸಿದವರಿಗೆ ಊಟ ಮಾಡಿ ಖುಷಿಪಡುತ್ತಾರೆ.

ಗಂಡು ಮಕ್ಕಳಿಗೆ ಮದುವೆ
ಕೆಲವೆಡೆ ಇಬ್ಬರು ಗಂಡು ಮಕ್ಕಳಿಗೆ ಹೆಣ್ಣು-ಗಂಡಿನ ವೇಷ ತೊಡಿಸಿ ಮದುವೆ ಮಾಡುವ ಸಂಪ್ರದಾಯವಿದೆ. ಇಬ್ಬರು ಬಾಲಕರನ್ನು ವಧು-ವರರನ್ನಾಗಿ ಸಿಂಗರಿಸಿ ಅವರಿಗೆ ವಿವಾಹ ಮಾಡಿ ಬೆಳದಿಂಗಳಲ್ಲಿ ಮೆರವಣಿಗೆ ಮಾಡಿ ಮಳೆಗಾಗಿ ಪೂಜಾ ಕೈಂಕರ್ಯ ನೆರವೇರಿಸಲಾಗುತ್ತದೆ.
ರಾತ್ರಿಯಿಡೀ ಮಳೆಗಾಗಿ ಹಾಡುಗಳನ್ನು ಹಾಡುತ್ತಾ ಮಳೆರಾಯನನ್ನು ಕರೆದು ಜನ ತಮ್ಮ ಪರಿಸರದಲ್ಲಿ ಕಾಣಿಸಿಕೊಂಡಿರುವ ಭೀಕರ ಬರಗಾಲದಿಂದ ತಮ್ಮನ್ನು ಪಾರು ಮಾಡುವಂತೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.












Click it and Unblock the Notifications