• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇದಾರನಾಥದಲ್ಲಿ ಉದ್ಘಾಟನೆಗೊಂಡ ಶಂಕರಾಚಾರ್ಯರ ಪುತ್ಥಳಿ ಕೆತ್ತಿದ್ದು ಮೈಸೂರಿನ ಶಿಲ್ಪಿ

|
Google Oneindia Kannada News

ಮೈಸೂರು, ನವೆಂಬರ್ 5: ಬಲಿಪಾಡ್ಯಮಿ ದಿನವಾದ ಶುಕ್ರವಾರ ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನಂಜನಗೂಡು ನಂಜುಂಡೇಶ್ವರ ದೇವಸ್ಥಾನದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದರು.

ದೀಪಾವಳಿ ಹಬ್ಬದ ಪ್ರಯುಕ್ತ ನಂಜನಗೂಡಿಗೆ ಆಗಮಿಸಿದ ಸಚಿವರು, ನಂಜುಂಡೇಶ್ವರನ ಸನ್ನಿಧಾನದಲ್ಲಿ ಗೋವುಗಳಿಗೆ ಹಾರ ಹಾಕಿ ಪೂಜಿಸಿ, ನಂತರ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದರು.

ಬಳಿಕ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ, ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರಾಖಂಡದ ಕೇದಾರನಾಥದಲ್ಲಿ ಶ್ರೀಆದಿ ಶಂಕರಾಚಾರ್ಯರ ನವೀಕೃತ ಪುತ್ಥಳಿ ಉದ್ಘಾಟನೆ ಮಾಡಿದ ನೇರ ಪ್ರಸಾರದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕೇದಾರನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಶಂಕರಾಚಾರ್ಯರ ಪುತ್ಥಳಿಯನ್ನು ಕೆತ್ತಿದ್ದು, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎಂಬುದನ್ನು ತಿಳಿದು ಸಚಿವರು ಸಂತಸ ವ್ಯಕ್ತಪಡಿಸಿದರು. 12 ಅಡಿ ಎತ್ತರ, 35 ಟನ್ ತೂಕದ ಕುಳಿತ ಭಂಗಿಯಲ್ಲಿರುವ ಶಂಕರಾಚಾರ್ಯರ ಪುತ್ಥಳಿಗೆ ಹೆಗ್ಗಡದೇವನಕೋಟೆಯಿಂದ 120 ಟನ್ ಕೃಷ್ಣ ಶಿಲೆ ಬಳಸಿದ ವಿಚಾರ ತಿಳಿದು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಚಿವರು, 2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಪ್ರವಾಹದಲ್ಲಿ ದೇವಸ್ಥಾನ ಹೊರತುಪಡಿಸಿ ಬಹುತೇಕ ಎಲ್ಲಾ ಕೊಚ್ಚಿ ಹೋಗಿತ್ತು. ಅದರಲ್ಲಿ ಶಂಕರಾಚಾರ್ಯರ ಸಮಾಧಿ ಕೂಡ ಧ್ವಂಸಗೊಂಡಿತ್ತು.

ಆದರೀಗ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸಿದ ಮಹಾನ್ ದಾರ್ಶನಿಕರಾದ ಶಂಕರಾಚಾರ್ಯರ ಸಮಾಧಿಯನ್ನು ಪುನರುತ್ಥಾನಗೊಳಿಸುವುದರ ಜೊತೆಗೆ ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಇತಿಹಾಸದ ಪುಟಗಳಲ್ಲಿ ದಾಖಲಿಸುವಂತಹದ್ದು.

ಚಾರ್‌ಧಾಮ್‌ಗಳಲ್ಲಿ ಒಂದಾದ ಕೇದಾರನಾಥಕ್ಕೆ ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಇಂತಹ ಪುರಾಣ ಪ್ರಸಿದ್ಧ ಸ್ಥಳದಲ್ಲಿ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದ ದಾರ್ಶನಿಕರ ಪ್ರತಿಮೆ ಸ್ಥಾಪಿಸಿ ಲೋಕಾರ್ಪಣೆ ಮಾಡುತ್ತಿರುವುದು ನಿಜಕ್ಕೂ ನಾವೆಲ್ಲಾ ಹೆಮ್ಮೆಪಡುವ ಸಂಗತಿ ಎಂದರು.

Shankaracharyas Statue Inaugurated In Kedarnath Was Built In Mysuru

ಎಂಟನೇ ಶತಮಾನದಲ್ಲಿ ಭಾರತದಲ್ಲಿ ಹಿಂದೂ ಧರ್ಮ ಸಂಕಷ್ಟದಲ್ಲಿತ್ತು. ಆಗ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿ ಉಂಟುಮಾಡಿ ಹಿಂದೂ ಧರ್ಮವನ್ನು ಶಂಕರಾಚಾರ್ಯರು ಪುನರುತ್ಥಾನಗೊಳಿಸಿದವರು.

ವಾಹನಗಳ ಪರಿಕಲ್ಪನೆಯೇ ಇಲ್ಲದಂತ ಕಾಲದಲ್ಲಿ ದೇಶದಾದ್ಯಂತ ಕಾಲ್ನಡಿಗೆಯಲ್ಲಿ ಅದ್ವೈತ ತತ್ವ ಪ್ರಚಾರ ಮಾಡಿದ ಮಹಾತ್ಮರು, ಕೇವಲ ಮೂವತ್ತೆರಡನೇ ವಯಸ್ಸಿನಲ್ಲೇ ದೇಹತ್ಯಾಗ ಮಾಡಿದರು. ಆದರೆ ಅಲ್ಪಾಯಸ್ಸಿನಲ್ಲಿಯೇ ದೇಶದ ಜನತೆಗೆ ಅಪಾರ ಜ್ಞಾನವನ್ನು ನೀಡಿ ಹೋದವರು. ಸಕಲ ವೇದಪಾರಂಗತರಾದ ಶಂಕರಾಚಾರ್ಯರು, ಘಟಾನುಘಟಿ ಪಂಡಿತರನ್ನು ಆಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಮಣಿಸಿ ಸರ್ವಜ್ಞ ಪೀಠವನ್ನೇರಿದವರು.

ಜ್ಞಾನ, ಧರ್ಮ ಪ್ರಸಾರಕ್ಕಾಗಿ ಹಾಗೂ ಜನತೆಯ ಒಳಿತಿಗಾಗಿ ದೇಶದ ನಾಲ್ಕು ಕಡೆಗಳಲ್ಲಿ ಪೀಠಗಳನ್ನು ಸ್ಥಾಪಿಸಿದವರು. ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರಿ ಹಾಗೂ ದಕ್ಷಿಣದಲ್ಲಿ ಶಾರದಾ ಪೀಠ ಸ್ಥಾಪಿಸಿದರು. ಈ ನಾಲ್ಕರಲ್ಲಿ ಶೃಂಗೇರಿಯ ಶಾರದಾ ಪೀಠ ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಎಂಟನೇ ವಯಸ್ಸಿನಲ್ಲಿ ನಾಲ್ಕೂ ವೇದಗಳನ್ನು ಕಲಿತು, ಹನ್ನೆರಡನೇ ವಯಸ್ಸಿಗೆ ಸರ್ವ ಶಾಸ್ತ್ರಗಳನ್ನು ಅರಿತು, ಹದಿನಾರನೇ ವಯಸ್ಸಿಗೆ ಭಾಷ್ಯವನ್ನು ಬರೆದು ಮೂವತ್ತೆರಡನೇ ವಯಸ್ಸಿಗೆ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಇಹಲೋಕ ತ್ಯಜಿಸಿದವರು ಶಂಕರಾಚಾರ್ಯರು.

ಶಂಕರಾಚಾರ್ಯರು ಭೇಟಿ ನೀಡಿದ ಸ್ಥಳಗಳೆಲ್ಲ ಇದೀಗ ಆಧ್ಯಾತ್ಮಿಕ, ವಿದ್ಯಾ ಕೇಂದ್ರಗಳಾಗಿ ಜಗತ್ತಿಗೆ ಜ್ಞಾನ ಸಂಪತ್ತನ್ನು ಧಾರೆ ಎರೆಯುತ್ತಿವೆ. ಇಂತಹ ದೇವತಾ ಸ್ವರೂಪಿಯಾದ ಆಚಾರ್ಯರ ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಸಕಲರು ಕೈಜೋಡಿಸಬೇಕು ಎಂದು ಕರೆಕೊಟ್ಟರು.

14 ಲಕ್ಷ ರೈತರಿಗೆ 10,203.52 ಕೋಟಿ ರೂ. ಸಾಲ
ನಂಜನಗೂಡು ದೇವಸ್ಥಾನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಲಾಗುತ್ತಿದೆ. 30 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ವಿತರಣೆ ಗುರಿ ನೀಡಲಾಗಿದ್ದು, ಇದರಲ್ಲಿ 14 ಲಕ್ಷ ರೈತರಿಗೆ 10,203.52 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ನಷ್ಟ ಹಾಗೂ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತವಾಗಿರುವ ಬಗ್ಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಗಮನಕ್ಕೆ ತರಲಾಗಿದೆ ಎಂದರು.

   ಅಪ್ಪು ಸಾವಿನ ಅನುಮಾನಕ್ಕೆ ವೈದ್ಯರು ಕೊಟ್ಟ ಸ್ಪಷ್ಟನೆ ಏನು? | Oneindia Kannada

   ಈ ಸಂದರ್ಭದಲ್ಲಿ ಶಾಸಕ ಹರ್ಷವರ್ಧನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಕಾಫಿ ಬೋರ್ಡ್ ಅಧ್ಯಕ್ಷ ಕೃಷ್ಣಪ್ಪಗೌಡ, ಜಿಲ್ಲಾಧ್ಯಕ್ಷರಾದ ಮಂಗಳ ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

   English summary
   Mysuru sculptor Arun Yogiraj built the idol of Sankaracharya inaugurated by Prime Minister Narendra Modi at Kedarnath.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X