ಪ್ರವಾಸಿ ತಾಣವಾಗಲಿದೆ ರಾಜವಂಶಸ್ಥರ ಸಮಾಧಿಸ್ಥಳ 'ಮಧುವನ'
ಮೈಸೂರು, ಜುಲೈ 19: ರಾಜವಂಶಸ್ಥರ ಸಮಾಧಿ ಜಾಗಕ್ಕೆ ಯಾರೂ ಹೋಗಬಾರದೆಂಬ ನಿರ್ಬಂಧದ ಕಾರಣ ಅಜ್ಞಾತ ಸ್ಥಳವಾಗಿದ್ದ ರಾಜವಂಶಸ್ಥರ ಸಮಾಧಿ ಜಾಗ ಇದೀಗ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಮುಂದೆ ಪ್ರವಾಸಿಗರ ವೀಕ್ಷಣಾ ಸ್ಥಳವಾಗಿ ಮಾರ್ಪಾಡು ಹೊಂದಲಿದೆ.
ವಿಶ್ವದ ಗಮನ ಸೆಳೆದಿರುವ ಮೈಸೂರಿಗೆ ಸಾಕಷ್ಟು ಮಂದಿ ವಿದೇಶಿ ಪ್ರವಾಸಿಗರು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥರ ಸಮಾಧಿ ಎಂದೇ ಹೆಸರಾದ ಮಧುವನಕ್ಕೆ ಹೊಸ ರೂಪ ನೀಡಿ ಪಾರಂಪರಿಕ ಸ್ಥಳದ ರೀತಿ ಅಭಿವೃದ್ಧಿಪಡಿಸಲು ಚಿಂತನೆ ನಡೆಯುತ್ತಿದೆ.
ಮೈಸೂರು ರಾಜವಂಶಸ್ಥರ ಸಮಾಧಿ ನಂಜನಗೂಡು ಬಳಿಯ ಅರಮನೆಯ ಖಾಸಗಿ ತೋಟ ಮಧುವನದಲ್ಲಿ ಇದೆ. ಇಲ್ಲಿ ರಾಜವಂಶಸ್ಥರ 45 ಸಮಾಧಿಗಳಿವೆ. ಇಲ್ಲಿಗೆ ಯಾರೂ ಹೋಗದ ಕಾರಣ ಪಾಳುಬಿದ್ದ ಸ್ಥಿತಿಯಲ್ಲಿದ್ದು, ಇದಕ್ಕೆ ಕಾಯಕಲ್ಪ ಕೊಡುವ ಕೆಲಸ ನಡೆಯುತ್ತಿದೆ.

ಮಹಾರಾಜರು ಹಾಗೂ ಅವರ ವಂಶದ ಸಮಾಧಿ ಸ್ಥಳ ರಾಜವಂಶದ ಖಾಸಗಿ ಸ್ವತ್ತಾಗಿದ್ದು, ಅದನ್ನು ನೋಡಲು ಸಾಕಷ್ಟು ಮಂದಿ ಹಿಂದಿನಿಂದಲೂ ರಾಜವಂಶಸ್ಥರಿಗೆ ಒತ್ತಾಯ ಮಾಡಿಕೊಂಡೇ ಬರುತ್ತಿದ್ದಾರೆ. ಆದರೆ ಇದಕ್ಕೆ ಅನುಮತಿ ಸಾಧ್ಯವಾಗಿರಲಿಲ್ಲ. ಆದರೂ ಅಧ್ಯಯನಕಾರರು ರಾಜವಂಶಸ್ಥರ ಒಪ್ಪಿಗೆ ಪಡೆದು ಹಲವು ಬಾರಿ ಮಧುವನಕ್ಕೆ ಬಂದಿದ್ದರು. ಇದೀಗ ಮಧುವನವನ್ನು ಸಾರ್ವಜನಿಕರಿಗೆ ಮುಕ್ತ ಮಾಡಬೇಕೆಂದು ಪ್ರವಾಸೋದ್ಯಮ ಇಲಾಖೆ ಹಾಗೂ ಹಲವು ಸಂಘ ಸಂಸ್ಥೆಗಳು ಒತ್ತಾಯಿಸಿದ ಕಾರಣ ರಾಜಮನೆತನವೇ ಇದನ್ನು ಪ್ರವಾಸಿತಾಣವಾಗಿ ರೂಪಿಸಲು ಮುಂದಾಗಿದೆ.
ಮುಂದಿನ ವರ್ಷ ಮಧುವನವನ್ನು ಸಾರ್ವಜನಿಕ ವೀಕ್ಷಣೆಗೆ ನೀಡಲು ಕೆಲಸ ನಡೆಯುತ್ತಿದ್ದು, ಪಾರಂಪರಿಕ ತಜ್ಞರು ಇಲ್ಲಿಗೆ ಭೇಟಿ ನೀಡಿ ದುರಸ್ತಿ ಮಾಡುವ ಕುರಿತು ಯೋಜನೆ ರೂಪಿಸಿದ್ದಾರೆ.












Click it and Unblock the Notifications