ಮೈಸೂರಿನಲ್ಲಿ ರಾಷ್ಟ್ರೀಯ ರೈತ ಸಮಾವೇಶಕ್ಕೆ ಭರ್ಜರಿ ಸಿದ್ಧತೆ: ಹೇಗಿರಲಿದೆ ರೈತರ ಹಬ್ಬ
ಮೈಸೂರು, ನವೆಂಬರ್ 15: : ವಿಶ್ವ ರೈತ ದಿನದ ಅಂಗವಾಗಿ ರೈತರ ಹಬ್ಬ ಆಚರಿಸಲಾಗುತ್ತಿದ್ದು, ರಾಷ್ಟ್ರೀಯ ರೈತ ಸಮಾವೇಶವನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದೆ. ಸಮಾವೇಶದಲ್ಲಿ ವಿವಿಧ ರಾಜ್ಯಗಳ ನೂರಾರು ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸರ್ಕಾರಗಳು ರೈತರನ್ನು ಮೋಸಗೊಳಿಸುತ್ತಿವೆ. ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳು ಕೃಷಿಯನ್ನು ವಶಪಡಿಸಿಕೊಳ್ಳಲು ವಾಮ ಮಾರ್ಗ ಬಳಸುತ್ತಿವೆ. ಮುಂದಿನ ದಿನಗಳಲ್ಲಿ ರೈತ ಕುಲವನ್ನು ಅಪಾಯದಿಂದ ಪಾರು ಮಾಡಲು ಚಿಂತಿಸಬೇಕಾಗಿದೆ. ಅದಕ್ಕಾಗಿ ಮೈಸೂರಿನಲ್ಲಿ ರಾಷ್ಟ್ರೀಯ ರೈತ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಶುಂಠಿ ಬೆಳೆದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕಳೆದ ವರ್ಷ ಚೀಲಕ್ಕೆ 5,000 ರೂಪಾಯಿ ದರ ಇತ್ತು. ಪ್ರಸಕ್ತ ಸಾಲಿನಲ್ಲಿ 1600ಕ್ಕೆ ಇಳಿಕೆಯಾಗಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲೆಂದು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಗ್ಯಾರಂಟಿ ಕಾನೂನು ಜಾರಿಗೆ ತರಬೇಕು ಎಂದು ದೆಹಲಿಯಲ್ಲಿ ರೈತ ಹೋರಾಟ ನಡೆಸಲಾಗುತ್ತಿದೆ. ನ.25ರಿಂದ ನಡೆಯಲಿರುವ ಸಂಸತ್ ಅಧಿವೇಶನದ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆ ದೇಶಾದ್ಯಂತ ರೈತ ಚಳುವಳಿಯನ್ನು ತೀವ್ರಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚಿಗೆ ನಡೆದ ಮುಡಾ ಸಭೆಯಲ್ಲಿ 50:50 ಅನುಪಾತದ ನಿವೇಶನ ರದ್ದು ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಜಮೀನು ಕಳೆದುಕೊಂಡ ನೈಜ ರೈತರಿಗೆ ತೊಂದರೆ ಉಂಟು ಮಾಡಬಾರದು. ರೈತರಿಗೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಮುಡಾ ಕಚೇರಿಯಲ್ಲಿ ಕಡತಗಳು ಕಳ್ಳತನವಾದಾಗ ನಮ್ಮ ಸಂಘಟನೆ ಪ್ರತಿಭಟನೆ ಮಾಡಿ ಎಚ್ಚರಿಸಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡಿದ ಪರಿಣಾಮ ಹಗರಣಗಳು ಹೆಚ್ಚಾದವು ಎಂದರು.
ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹ ಧನ 500 ರೂ ನೀಡಲು ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಎಪಿಎಂಸಿಗಳಲ್ಲಿ ಹಣ್ಣು ತರಕಾರಿ ಧಾನ್ಯ ಮಾರಾಟ ಮಾಡುವ ರೈತರಿಂದ ಕಾನೂನು ಪ್ರಕಾರ ದಲ್ಲಾಳಿಗಳು ಕಮಿಷನ್ ಪಡೆಯಬಾರದು ಎಂದು ಕೃಷಿ ಮಾರಾಟ ಮಂಡಳಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘನೆ ಮಾಡಿದರೆ ರಹದಾರಿ ರದ್ದು ಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ರೈತರು ಜಾಗೃತರಾಗಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ನೀಲಕಂಠಪ್ಪ, ಪೈಲ್ವಾನ್ ವೆಂಕಟೇಶ್, ಸೂರಿ, ಉಮೇಶ್ ಉಪಸ್ಥಿತರಿದ್ದರು.












Click it and Unblock the Notifications