ಗೆಲುವಿನ ಬಳಿಕವೂ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮಾರಾಮಾರಿ
ಮೈಸೂರು, ಮೇ 16 : ಜನಾಭಿಮತ ಸಿಕ್ಕು ಚಾಮುಂಡೇಶ್ವರಿಯಲ್ಲಿ ಜಿಟಿಡಿ ಶಾಸಕರಾಗಿ ಆಯ್ಕೆಯಾದರೂ, ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಡರಾತ್ರಿ ಜಟಾಪಟಿ ನಡೆದಿದೆ.
ಹೈ ವೋಲ್ಟೇಜ್ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡರ ನಡುವಿನ ಬಲಾಬಲದಲ್ಲಿ ಜಿ.ಟಿ. ದೇವೇಗೌಡ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಂಧುವಳ್ಳಿ ಗ್ರಾಮದ ಜೆಡಿಎಸ್ ಕಾರ್ಯಕರ್ತರು ಸಂಭ್ರಮ ಪಡುತ್ತಾ ಕುಣಿದು ಕುಪ್ಪಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಕದ ಗ್ರಾಮವಾದ ಜಟ್ಟಿಹುಂಡಿಯ ಕಾಂಗ್ರೆಸ್ ಕಾರ್ಯಕರ್ತರನ್ನು ಅಪಮಾನಿಸಿದ್ದಾರೆ ಎನ್ನಲಾಗಿದೆ.

ಇದರಿಂದ ರೊಚ್ಚಿಗೆದ್ದ ಜಟ್ಟಿಹುಂಡಿ ಗ್ರಾಮದ ಕಾರ್ಯಕರ್ತರು ಪ್ರಶ್ನಿಸಲು ಹೋದಾಗ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆದಿದೆ. ಹೊಡೆದಾಟದಿಂದ ಕಾಂಗ್ರೆಸ್‌ನ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದು, ಗಾಯಗೊಂಡಿರುವ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಘಟನೆಯ ವಿಷಯ ತಿಳಿದ ಜಯಪುರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಸದ್ಯ 2 ಊರಿನಲ್ಲಿಯೂ ಪೊಲೀಸ್ ಸರ್ಪಗಾವಲು ಏರ್ಪಟ್ಟಿದೆ.












Click it and Unblock the Notifications