PM Narendra Modi: ಕರ್ನಾಟಕ ವಿಭಜಿಸಲು ಕಾಂಗ್ರೆಸ್ ಸಂಚು: ನಂಜನಗೂಡಿನಲ್ಲಿ ಗುಡುಗಿದ ಪ್ರಧಾನಿ ಮೋದಿ
ಮೈಸೂರು, ಮೇ, 07: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ನಂಜನಗೂಡಿಗೆ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ದೇಶದಿಂದ ಕರ್ನಾಟಕವನ್ನು ವಿಭಜಿಸಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಆರೋಪ ಮಾಡಿದರು.
ನಂಜಗೂಡಿನ ಎಲಚಗೆರೆ ಗ್ರಾಮದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತ್ ಮಾತಾಕೀ, ಭಜರಂಗ್ ಬಲಿಕೀ ಎನ್ನುತ್ತಲೇ ಭಾಷಣ ಶುರು ಮಾಡಿದರು. ದಕ್ಷಿಣ ಕಾಶಿ, ನಂಜನಗೂಡು ಜನತೆಗೆ ನನ್ನ ನಮಸ್ಕಾರ ಎನ್ನುವ ಮೂಲಕ ಕನ್ನಡದಲ್ಲೇ ಮಾತು ಆರಂಭಿಸಿದರು. ಚಾಮುಂಡೇಶ್ವರಿ, ನಂಜುಂಡೇಶ್ವರ ಸ್ವಾಮಿ, ಮಲೆ ಮಹದೇಶ್ವರ ಸ್ವಾಮಿ, ಸುತ್ತೂರು ಮಠದ ಸ್ವಾಮೀಜಿಗೆ, ಆದಿಚುಂಚನಗಿರಿ ಸ್ವಾಮೀಜಿಗೆ ನಮಿಸುವೆ ಎಂದರು.

ಕರ್ನಾಟಕ ಚುನಾವಣೆಯಲ್ಲಿ ಇದು ಇತಿಹಾಸ ಆಗಬೇಕು. ರಾಜ್ಯವನ್ನು ದೇಶದ ನಂಬರ್ ಒನ್ ಮಾಡುವ ಚುನಾವಣೆ ಇದಾಗಿದೆ. ಇಲ್ಲಿ ಮಹಾ ಯಜ್ಞ ನಡೆಯುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಮೇಲೆ ಜನತೆ ಭರವಸೆ ಇಟ್ಟಿದ್ದಾರೆ. ಕರ್ನಾಟಕದ ಎಲ್ಲೆಡೆ ಕೇಳಿ ಬರುತ್ತಿರುವ ಒಂದೇ ಕೂಗೆಂದರೆ ಅದು ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ತಿಳಿಸಿದರು.
ಡಬಲ್ ಎಂಜಿನ್ ಸರ್ಕಾರದ ಎಂದರೆ ಡಬಲ್ ಸೇವೆ, ಶಕ್ತಿಯಿಂದ ಕೆಲಸ ಮಾಡುವ ಸರ್ಕಾರ ಎಂದು ಎಂದರು. ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಹೆಚ್ಚು ಅಭಿವೃದ್ಧಿ ಆಗಿದೆ. ಭಾರತ ಪ್ರಪಂಚದಲ್ಲಿ ಐದನೇ ಆರ್ಥಿಕ ಶಕ್ತಿಯಾಗಿ ಮಾರ್ಪಟ್ಟಿದೆ. ವಿದೇಶ ಬಂಡಾವಳ ಹಾಗೂ ರಫ್ತು ಹೆಚ್ಚಾಗುತ್ತಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಇದರ ಪೂರ್ಣ ಲಾಭ ಪಡೆಯಲಿಲ್ಲ. ಇದೀಗ ನಾವು ಬಹುದೊಡ್ಡ ಗರ್ವ ಪಡೆಯಬೇಕಿದೆ. ಮೊಬೈಲ್ ತಯಾರಿಕೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೂಲ ತಯಾರಿಕಾ ಕಂಪನಿ ಭಾರತ ಹಾಗೂ ಕರ್ನಾಟಕಕ್ಕೂ ಬರುತ್ತಿದೆ. ಕಾಂಗ್ರೆಸ್ ಜೆಡಿಎಸ್‌ಗೆ ಈ ಭಾವನೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಭಾರತ ರಕ್ಷಣಾ ವಿಭಾಗದಲ್ಲಿ ನಿರಂತರ ಶಕ್ತಿ ಪಡೆಯುತ್ತಿದ್ಧೇವೆ. ಹೊಸ ಕ್ರಾಂತಿ ಆಗುತ್ತಿದೆ. ಏಷ್ಯಾದಲ್ಲಿ ಬಹುದೊಡ್ಡ ಹೆಲಿಕಾಪ್ಟರ್ ತಯಾರಿ ರಾಜ್ಯದಲ್ಲಿ ಆಗುತ್ತಿದೆ. ಕರ್ನಾಟಕ ಸ್ಟಾರ್ಟ್ ಅಪ್ ಇಂಡಸ್ಟ್ರಿ ರಾಜಾಧಾನಿ ಆಗಬೇಕಿದೆ. ಇಲ್ಲಿ ರೈಲಿನ ಕಾರ್ಯಾಚರಣೆ ಪ್ರಗತಿ ಕಾಣುತ್ತಿದೆ. ರೈಲಿನ ವಿದ್ಯುದ್ದೀಕರಣ ಆಗುತ್ತಿದೆ. ವರ್ಷಕ್ಕೆ 7 ಕಿಲೋ ಮೀಟರ್ ವಿದ್ಯುದ್ದೀಕರಣ ಆಗುತ್ತಿತ್ತು. 9 ವರ್ಷದಲ್ಲಿ 1,600 ರೈಲು ಮಾರ್ಗಗಳ ವಿದ್ಯುದ್ದೀಕರಣ ಆಗಿದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಅಲ್ಲ, ಅದು ಇತಿಹಾಸದಲ್ಲಿ ಮೋಸ ಮಾಡಿದೆ. ಕಾಂಗ್ರೆಸ್ ಬರೀ ಸುಳ್ಳು ಹೇಳಿಕೊಂಡು ಬರುತ್ತಿದೆ. ಇದರಿಂದ ದೇಶದಲ್ಲಿ ಬಡತನ ನಿವಾರಣೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಮೋದಿಗೆ ಎಲ್ಲಿಂದ ಹಣ ಬರುತ್ತಿದೆ ಎಂದು ಜನರಿಗೂ ಅನಿಸಿರಬಹುದು. ಆದರೆ ಇದು ಜನರ ಹಣ. ಕಾಂಗ್ರೆಸ್ ಲೂಟಿ ಮಾಡಿದ ಹಣ. ಆ ಹಣವನ್ನು ಅಭಿವೃದ್ಧಿಗೆ ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನವದೆಹಲಿಯಿಂದ 100 ಪೈಸೆ ಕಳುಹಿಸಿದರೆ ಅದರಲ್ಲಿ 85 ಪೈಸೆ ಕಾಂಗ್ರೆಸ್ ಜೇಬಿಗೆ ಹೋಗುತ್ತದೆ. ಇದನ್ನು ನಾನು ಹೇಳಿಲ್ಲ. ರಾಜೀವ್ ಗಾಂಧಿ ಹೇಳಿದ್ದರರು. ಇದರಿಂದ ಅಭಿವೃದ್ಧಿ ಹೇಗೆ ಆಗುತ್ತದೆ. 85% ಕಮಿಷನ್ ಸರ್ಕಾರ ಕಾಂಗ್ರೆಸ್‌ನದ್ದು. ಹೀಗಾದರೆ ಹಣ ಎಲ್ಲಿ ಉಳಿಯುತ್ತದೆ? ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇನ್ನು ಅಭಿವೃದ್ಧಿ ಹೆಚ್ಚಾಗಲು ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದರು.












Click it and Unblock the Notifications