ಮೈಸೂರು ಅರಮನೆ ಬರೀ ಅರಮನೆಯಲ್ಲ ಅದೊಂದು ಸಂಗ್ರಹಾಲಯ...

ಮೈಸೂರು, ಅಕ್ಟೋಬರ್ 19: ಮೈಸೂರು ಅರಮನೆಯೇ ಹಾಗೆ ಅದೊಂದು ಸುಂದರ ಮಹಲ್. ನೋಡಿದಷ್ಟು ಮನ ತಣಿಯದ ಕಲಾ ಸುಂದರತೆಯ ಸಂಗ್ರಹಾಲಯ. ನಮಗೆ ಹೊರಗಿನಿಂದ ನೋಡಿದರೆ ಆಕರ್ಷಕವಾಗಿ ಕಾಣುವ ಈ ಅರಮನೆ ತನ್ನೊಡಲಲ್ಲಿ ಹಲವು ವಿಶೇಷತೆಗಳನ್ನು ಹುದುಗಿಸಿಟ್ಟುಕೊಂಡಿದೆ. ಹಾಗಾದರೆ ಅರಮನೆಯಲ್ಲಿ ಏನಿದೆ ಎಂಬುದನ್ನು ನೋಡುತ್ತಾ ಹೋದರೆ, ನಮ್ಮ ಕಣ್ಮುಂದೆ ಇಲ್ಲಿನ ಒಂದೊಂದು ವಸ್ತುಗಳು ಮೈಸೂರು ಮಹಾರಾಜರ ರಾಜವೈಭವದ ಕಥೆಯನ್ನು ಹೇಳುತ್ತಾ ಹೋಗುತ್ತದೆ.

ಇತಿಹಾಸದ ಪುಟಗಳನ್ನು ನೋಡುವುದಾದರೆ ಅರಮನೆಯನ್ನು 1897 ರಿಂದ ನಿರ್ಮಿಸಲು ಆರಂಭಿಸಿ 1911-12 ರಲ್ಲಿ ಸುಮಾರು 41,47,913 ರುಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಲಾಯಿತು. ಕೋಟೆ ಸೇರಿದಂತೆ ಸುಮಾರು 72 ಎಕರೆಗಿಂತಲೂ ಹೆಚ್ಚಿನ ವಿಸ್ತಾರದಲ್ಲಿ ನೆಲೆನಿಂತಿರುವ ಅರಮನೆ 74.50 ಮೀ. ಉದ್ದ ಹಾಗೂ 47.50 ಮೀಟರ್ ಅಗಲವಾಗಿದೆ. ಅರಮನೆಯ ಮುಖ್ಯ ಕಟ್ಟಡವನ್ನು ಕಂದು ಬಣ್ಣದ ದಪ್ಪ ಸ್ಪಟಿಕದ ಗಟ್ಟಿ ಶಿಲೆಗಳಿಂದ ನಿರ್ಮಿಸಲಾಗಿದೆ. ಅರಮನೆಯ ಮಧ್ಯಭಾಗದ ಐದು ಅಂತಸ್ತಿನ ಬಂಗಾರದ ಗಿಲೀಟಿನ ಗಗನಚಂಬಿ ಗೋಪುರವು ಭೂಮಿಯಿಂದ ಸುಮಾರು 145 ಅಡಿ ಎತ್ತರದಲ್ಲಿರುವುದನ್ನು ಕಾಣಬಹುದಾಗಿದೆ.

ಅರಮನೆ ಅಂಗಳದ ಸುತ್ತ ನಿರ್ಮಾಣ

ಅರಮನೆ ಅಂಗಳದ ಸುತ್ತ ನಿರ್ಮಾಣ

ಅರಮನೆಯು ಬೆಳಕಿಗೆ ಬಿಟ್ಟಿರುವ ಅಂಗಳದ (ತೊಟ್ಟಿ) ಸುತ್ತಲೂ ಕಟ್ಟಲ್ಪಟ್ಟಿದೆ. ಈ ತೊಟ್ಟಿಯ ಪೂರ್ವಭಾಗಕ್ಕೆ 21 ಅಡಿ ಅಗಲ ಹಾಗೂ 66 ಅಡಿ ಎತ್ತರವಿರುವ ಆಕರ್ಷಕ ಆನೆಯ ದ್ವಾರವಿದೆ. ದೊಡ್ಡ ಅಂಗಳದಲ್ಲಿ ಹೊರಗಡೆ ಸಜ್ಜೆಗೆ ಹೋಗುವ 15 ಅಡಿ ಅಗಲವುಳ್ಳ ದಾರಿಗಳು ದೊಡ್ಡ ಚೌಕದ ಹಾಗೆ ಕಾಣುತ್ತವೆ. ಇನ್ನು ಎರಡನೆ ಅಂತಸ್ತಿನಲ್ಲಿ ಪೂರ್ವ ಭಾಗಕ್ಕೆ 155 ಅಡಿ ಅಗಲವಿರುವ ವಿಶಾಲ ರಾಜ ಸಭಾ ಮಂದಿರವಿದೆ. ಅದರ ಮೇಲೆ ಖಾಸಗಿ ನಿವಾಸಿ ಸ್ಥಳಗಳಿವೆ. ಕೆಳಗಿನ ಉಪ್ಪರಿಗೆಗೆ ಬಂದರೆ ಅಂಗಳದ ಉತ್ತರ ಭಾಗದಲ್ಲಿ ಆಯುಧ ಶಾಲೆ, ಪುಸ್ತಕ ಭಂಡಾರ, ಅವುಗಳ ಮೇಲೆ ಸಂಗೀತದ ಕೊಠಡಿ, ಸ್ತ್ರೀಯರ ಸ್ವಾಗತ ಕೊಠಡಿ ಮತ್ತು ಮೂರನೆಯ ಅಂತಸ್ತಿನಲ್ಲಿ ವಿಶ್ರಾಂತಿ ಕೊಠಡಿಗಳಿವೆ. ಒಳ ಅಂಗಳದ ಪಶ್ಚಿಮಕ್ಕೆ ಹಳೆಯ ಅರಮನೆಯಿದೆ. ದಕ್ಷಿಣ ಭಾಗದ ಹತ್ತಿರದಲ್ಲೇ ಮುದ್ದಾದ ನವಿಲಿನ ಕಲ್ಯಾಣ ಭದ್ರ ಮಂಟಪವಿದೆ. ಮುಂದೆ ಹೋದರೆ ಎರಡನೆಯ ಉಪ್ಪರಿಗೆಯಲ್ಲಿ ಅಂಬಾವಿಲಾಸ ಸಭಾ ಮಂಟಪವಿದೆ. ಅರಮನೆಯ ದಕ್ಷಿಣ ಭಾಗದಲ್ಲಿ ರಾಣಿ ವಿಲಾಸ ಹಾಗೂ ಪೂಜಾ ಕೊಠಡಿಗಳಿವೆ. ಇವು ಅಂಬಾವಿಲಾಸ ಸಭಾ ಭವನದವರೆಗೂ ವಿಸ್ತರಿಸಿವೆ.

ಹಿಂದೂ ಗ್ರೀಕ್ ಕಲೆಯ ರೂಪರೇಖೆ

ಹಿಂದೂ ಗ್ರೀಕ್ ಕಲೆಯ ರೂಪರೇಖೆ

ಮಧ್ಯಭಾಗದ ಮೂರು ನಾಲ್ಕು ಮತ್ತು ಐದನೇ ಅಂತಸ್ತುಗಳು ಮುಖ್ಯಗೋಪುರ ಶಿಖರಕ್ಕೆ ಆಧಾರಸ್ತಂಭಗಳಂತೆ ನಿಂತಿವೆ. ಅರಮನೆಯ ಹೊರನೋಟ ಹಿಂದೂ ಗ್ರೀಕ್ ಕಲೆಯ ರೂಪರೇಖೆಗಳಂತೆ ಕಂಡರೆ, ಬಾಗಿಲುಗಳ ಕಮಾನುಗಳ ಕಂಬ ಮತ್ತು ಬೋದುಗಳ ಅಲಂಕಾರಗಳು ಸ್ಪಷ್ಟ ಹೊಯ್ಸಳ ರೀತಿಯ ಕಲಾಕೃತಿಗಳಾಗಿವೆ. ಅರಮನೆಯ ಮಧ್ಯದ ಗೋಪುರವು ಪ್ರಭಾವಯುತವಾಗಿದ್ದು, ಉಳಿದವುಗಳೆಲ್ಲವೂ ಅದಕ್ಕೆ ಹೊಂದಿಕೊಂಡ ಆಕೃತಿಗಳಾಗಿವೆ. ಅರಮನೆಯ ಮುಖ್ಯ ಮುಖಭಾಗದಲ್ಲಿ ಬೆಳಕು ಮತ್ತು ನೆರಳನ್ನು ಪಡೆಯುವ ಉದ್ದೇಶದಿಂದ ಗೋಪುರಗಳ, ಮಸೀದಿಯ ರೀತಿಯ ಶಿಖರಗಳ ಕೈಸಾಲೆ, ಉಪ್ಪರಿಗೆಯ ಮೊಗಸಾಲೆಗಳ. ವಸಾರೆ, ಪಡಸಾಲೆ, ಜಗಲಿಗಳ ಪೌಳಿ ಮಂಟಪಗಳ ಹಾಗೂ ಗೋಪುರ ಶಿಖರಗಳನ್ನು ಬಿಡಿಸಿ ನಿರ್ಮಿಸಲಾಗಿದೆ.

ಹಿಂದೂ ಗ್ರೀಕ್ ಕಲೆಯ ಮಿಳಿತ

ಹಿಂದೂ ಗ್ರೀಕ್ ಕಲೆಯ ಮಿಳಿತ

ಮುಂಭಾಗದಲ್ಲಿ ಬೃಹತ್ ಕಂಬಗಳ ಜೊತೆಗೆ ಸ್ಪಟಿಕದ ಗಟ್ಟಿ ಶಿಲೆಗಳನ್ನು ಕೊರೆದು ನಿರ್ಮಿಸಿರುವ ಪಡಸಾಲೆ, ಉಪ್ಪರಿಗೆಯ ಮೊಗಸಾಲೆಗಳು ತಮ್ಮದೇ ಆದ ಶ್ರೀಮಂತಿಕೆಯ ವೈಭವವನ್ನು ಸೂಚಿಸುತ್ತವೆ. ಅರಮನೆಯ ಅಡಿಪಾಯದಿಂದ ಮುಖ್ಯ ಗೋಪುರದ ತುದಿಯವರೆಗೂ ಉತ್ತಮ ಮಟ್ಟದ ಹಿಂದೂ ಶಿಲ್ಪ ವಿದ್ಯೆಯ ನುರಿತ ಕೆಲಸಗಾರರಿಂದ ಶಿಲ್ಪಕಲೆ ರಚಿಸಲ್ಪಟ್ಟಿದೆ. ಅಲ್ಲದೆ ಉಚ್ಛ ರೀತಿಯ ಹಿಂದೂ ಶಿಲ್ಪ ಕಲೆ ಮತ್ತು ಗ್ರೀಕ್ ಕಲೆಯು ಮಿಳಿತಗೊಂಡು ಶೋಭಾಯಮಾನವಾಗಿ ಕಂಗೊಳಿಸುತ್ತದೆ.

ಅರಮನೆ ಅದ್ಭುತ ಸಂಗ್ರಹಾಲಯ

ಅರಮನೆ ಅದ್ಭುತ ಸಂಗ್ರಹಾಲಯ

ಅರಮನೆಯಲ್ಲಿ ಮಾಡಿದ ಕಲ್ಲಿನ, ದಂತ ಮತ್ತು ಮರದ ಕೆತ್ತನೆ ಕೆಲಸ ಅಲ್ಲದೆ ಕಲ್ಲಿನ ಕುಂದಣ ಕೆಲಸ, ಲೇಪದ ಕೆಲಸಗಳು ಕಲೆಗಾರನ ಕೈಚಳಕನ್ನು ಪ್ರದರ್ಶಿಸಿದೆ. ಕಟ್ಟಡದ ವಿವಿಧೆಡೆ ಸ್ಪಟಿಕದ ಕಲ್ಲು, ಕಂದುಬಣ್ಣದ ಶಿಲೆ, ಕಾಗೆ ಬಂಗಾರದಂತೆ ಮಿನುಗುವ ಬೆಣಚು ಶಿಲೆಗಳನ್ನು ಬಳಸಲಾಗಿದೆ. ಚಿತ್ರ ವಿಚಿತ್ರವಾದ ಬಣ್ಣದ ನಯಮಾಡಿದ ಕಲ್ಲಿನ ಕಂಬಗಳು ಯೋಗ್ಯ ಸ್ಥಳಗಳಲ್ಲಿ ನಿರ್ಮಿಸಲ್ಪಟ್ಟಿದೆ. ಅರಮನೆಯಲ್ಲಿರುವ ಅಂಬಾವಿಲಾಸ ದರ್ಬಾರ್ ಹಾಲ್ ರಾಜವೈಭವವನ್ನು ಸಾರುತ್ತದೆ. ಇಲ್ಲಿ 750 ಕೆ.ಜಿ. ತೂಕದ ಭವ್ಯ ಚಿತ್ತಾರದ ಚಿನ್ನದ ಅಂಬಾರಿ ಇದೆ. ಅಲ್ಲದೆ 135 ಕೆ.ಜಿ. ಬಂಗಾರವುಳ್ಳ ರತ್ನಖಚಿತ ಸಿಂಹಾಸನವೂ ಇದೆ. ಇನ್ನು ಅರಮನೆಯಲ್ಲಿನ ಆಯುಧ ಶಾಲೆ, ಸಂಗೀತ ಕೊಠಡಿ ಸೇರಿದಂತೆ ಹತ್ತು ಹಲವು ನೋಡತಕ್ಕ ಅತ್ಯಪೂರ್ವ ವಸ್ತುಗಳಿದ್ದು, ಇದೊಂದು ಅದ್ಭುತ ಸಂಗ್ರಹಾಲಯವಾಗಿದೆ.

ಹೆಚ್ಚು ಪ್ರವಾಸಿಗರ ಸೆಳೆಯುವ ತಾಣ

ಹೆಚ್ಚು ಪ್ರವಾಸಿಗರ ಸೆಳೆಯುವ ತಾಣ

ಅರಮನೆಯ ಸುತ್ತಲೂ ಇರುವ ಕೋಟೆಯ ಉತ್ತರ, ದಕ್ಷಿಣ ಮತ್ತು ಪೂರ್ವ ಭಾಗದಲ್ಲಿರುವ ದಿಡ್ಡಿ ಬಾಗಿಲುಗಳು ಗೋಪುರ ಶಿಖರಗಳಿಂದ ಕೆತ್ತನೆಯ ಕಮಾನು ರಚನೆಗಳಿಂದ ಶೋಭಿಸುತ್ತಿದ್ದು, ಅರಮನೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಈಗ ಕಾಣುತ್ತಿರುವ ಅರಮನೆಯಂತೆ ಆಗಿನ ಅರಮನೆ ಇರಲಿಲ್ಲವಂತೆ. ಈ ಅರಮನೆಯನ್ನು ಎರಡು ಬಾರಿ ನಿರ್ಮಿಸಲಾಗಿದೆಯಂತೆ. 1939ರಲ್ಲಿ ಅರಮನೆಯ ಮುಂದೆ ಇದ್ದಂತಹ ಫೋರ್ಟಿಕೋವನ್ನು ತೆರವುಗೊಳಿಸಿ ಅಲ್ಲಿಂದ ನೇರವಾಗಿ ದರ್ಬಾರ್ ಹಾಲ್ ಕಾಣುವಂತೆ ಮಾಡಲಾಯಿತು ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಜಗತ್ತಿನಲ್ಲಿಯೇ ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣಗಳಲ್ಲಿ ಅರಮನೆಯೂ ಒಂದಾಗಿದ್ದು ಇದೊಂದು ಐತಿಹಾಸಿಕ ಸಂಗ್ರಹಾಲಯವಾಗಿ ಗಮನಸೆಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+