ನಾಗರಹೊಳೆ ಕಾಡಂಚಿನ ಜನರ ನಿದ್ದೆಗೆಡಿಸಿದ ಹುಲಿ: ಸಾಲು ಸಾಲು ಜಾನುವಾರು ಬಲಿ
ಮೈಸೂರು, ಫೆಬ್ರವರಿ 11: ನಾಗರಹೊಳೆ ಅರಣ್ಯಕ್ಕೆ ಹೊಂದಿಕೊಂಡಂತಿರುವ ಕಾಡಂಚಿನ ಗ್ರಾಮಗಳಲ್ಲಿ ಬದುಕು ಕಟ್ಟಿಕೊಂಡಿರುವ ಜನರು ಒಂದಲ್ಲ ಒಂದು ರೀತಿಯಲ್ಲಿ ವನ್ಯ ಪ್ರಾಣಿಗಳೊಂದಿಗೆ ಹೋರಾಡುತ್ತಲೇ ಬದುಕ ಬೇಕಾದ ಅನಿವಾರ್ಯತೆ ಬಂದೊದಗಿದೆ. ಅದರಲ್ಲೂ ಆಗಾಗ್ಗೆ ಕಾಣಿಸಿಕೊಳ್ಳುವ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಾ ಜನರಲ್ಲಿ ಭಯಭೀತಿಯನ್ನು ಹುಟ್ಟಿಸುವುದು ಮಾಮೂಲಿಯಾಗಿದೆ. ಹುಲಿಗೆ ಹೆದರುವ ಜನ ಮನೆಯಿಂದ ಹೊರಗೆ ಹೋಗಲು ಭಯಪಡುವಂತಾಗಿದೆ. ಇದರಿಂದ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದ್ದು, ಕೃಷಿಯನ್ನೇ ನಂಬಿ ಬದುಕುವ ರೈತರ ಗೋಳು ಹೇಳತೀರದಂತಾಗಿದೆ.
ಹುಣಸೂರು ತಾಲೂಕಿಗೆ ಸೇರಿದ ಹನಗೋಡು ವ್ಯಾಪ್ತಿಯ ಹಲವು ಹಳ್ಳಿಗಳ ಜನರು ವನ್ಯಪ್ರಾಣಿಗಳ ಭಯದಲ್ಲಿಯೇ ಬದುಕುತ್ತಿದ್ದಾರೆ. ಈ ವ್ಯಾಪ್ತಿಯ ಜನರಿಗೆ ಕೃಷಿಯೇ ಜೀವಾಳವಾಗಿದೆ. ಕೃಷಿ ಮಾಡದಿದ್ದರೆ ಬದುಕು ಸಾಗುವುದಿಲ್ಲ. ಆದರೆ ಆಗಾಗ್ಗೆ ಕಾಣಿಸಿಕೊಳ್ಳುವ ಹುಲಿ ರೈತರಲ್ಲಿ ಭಯ ಹುಟ್ಟಿಸಿದೆ. ಯಾವಾಗ ಜನಜಾನುವಾರುಗಳ ಮೇಲೆ ದಾಳಿ ಮಾಡಿ ಬಿಡುತ್ತದೆಯೋ ಎಂಬ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿರುವ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮಾಡಿದ ಪ್ರಯತ್ನಗಳು ವಿಫಲವಾಗಿವೆ.

ನಾಗರಹೊಳೆ ಅರಣ್ಯದಿಂದ ಬಂದು ಗ್ರಾಮಗಳ ಪೊದೆಯಲ್ಲಿ ಅಡಗಿ ಕುಳಿತುಕೊಳ್ಳುವ ಹುಲಿ ಅಲ್ಲಿಂದಲೇ ಗ್ರಾಮದೊಳಗೆ ನುಗ್ಗಿ ಆಗಾಗ್ಗೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಈ ನಡುವೆ ಮುದಗನೂರು ಗ್ರಾಮದಲ್ಲಿ ಪಟ್ಲದಮ್ಮ ದೇವಾಲಯಕ್ಕೆ ಸೇರಿದ ಬಸವನ ಮೇಲೆ ದಾಳಿ ಮಾಡಿದ ಕೊಂದು ಹಾಕಿತ್ತು. ಈ ಬಸವ ಗ್ರಾಮದಲ್ಲಿ ಮೇಯುತ್ತಾ ತನ್ನ ಪಾಡಿಗೆ ಇತ್ತು. ಇದರ ಮೇಲೆ ಹುಲಿ ದಾಳಿ ಮಾಡಿ ಸಾಯಿಸಿದ ವಿಚಾರ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ.
ಗ್ರಾಮದ ಜನರು ಹೇಳುವ ಪ್ರಕಾರ ಈ ಭಾಗದ ಅರಣ್ಯ ಪ್ರದೇಶದಲ್ಲಿ ಹುಲಿ ಬಹಳ ಸಮಯದಿಂದಲೇ ಬೀಡು ಬಿಟ್ಟಿದೆ. ಕೆಲವೊಮ್ಮೆ ಕಾಡಂಚಿನ ಗ್ರಾಮಗಳಲ್ಲಿ ಹಾಡುಹಗಲೇ ಕಾಣಿಸಿಕೊಳ್ಳತ್ತಿದೆ. ಇದಲ್ಲದೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ಆಗಿಂದಾಗ್ಗೆ ದಾಳಿ ಮಾಡುತ್ತಲೇ ಬರುತ್ತಿದೆ. ಈ ಹುಲಿಯಿಂದಾಗಿ ಸುತ್ತಮುತ್ತಲ ಗ್ರಾಮಸ್ಥರು ಭಯ ಭೀತರಾಗಿದ್ದು, ಜಮೀನಿಗೆ ತೆರಳಲು, ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುವಂತಾಗಿದೆ ಎಂದು ದೂರುತ್ತಿದ್ದಾರೆ.

ದೊಡ್ಡಹೆಜ್ಜೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಮುದಗನೂರು ಸುಭಾಷ್ ಸೇರಿದಂತೆ ವಾರಂಚಿ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಯವರು ಬೋನಿಟ್ಟು ಹುಲಿಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲದೆ ನಾಗರಹೊಳೆ ಅರಣ್ಯ ವ್ಯಾಪ್ತಿಯ ವೀರನಹೊಸಹಳ್ಳಿ ವಲಯದ ಕಾಡಂಚಿಗೆ ಹೊಂದಿಕೊಂಡಿರುವ ಗುರುಪುರ, ವಾರಂಚಿ ಹೊಸೂರು, ಹೊಸೂರು ಕೊಡಗು ಗೇಟ್ ಭಾಗದಲ್ಲಿಯೂ ಹುಲಿ ಹಾವಳಿ ಕಾಣಿಸಿಕೊಂಡಿದೆ. ಕಳೆದ 15ದಿನದ ಅಂತರದಲ್ಲಿ ಎರಡು ಜಾನುವಾರುಗಳನ್ನು ಹುಲಿ ಬೇಟೆಯಾಡಿದೆ ಎಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಹುಲಿ ಹಾವಳಿಗೆ ಸಂಬಂಧಿಸಿದಂತೆ ಆರ್.ಎಫ್.ಒ ನಂದಕುಮಾರ್ ಮಾತನಾಡಿ, ಅರಣ್ಯದಂಚಿಗೆ ಹೊಂದಿಕೊಂಡಂತೆ ಸಾವಿರಾರು ಎಕರೆ ಪ್ರದೇಶವನ್ನು ರೈತರು ಪಾಳು ಬಿಟ್ಟಿದ್ದು, ಈ ಭಾಗದಲ್ಲಿ ಗಿಡಗಂಟಿ ಬೆಳೆದಿರುವುದರಿಂದ ಹುಲಿ ಬಂದು ಹೋಗಲು ಸಹಾಯವಾಗಿದೆ. ರೈತರು ತಮ್ಮ ಹೊಲ ಗದ್ದೆ ಪ್ರದೇಶದಲ್ಲಿ ಬೆಳೆದಿರುವ ಗಿಡಗಂಟಿ ತೆರವುಗೊಳಿಸಿ ಇಲಾಖೆಯೊಂದಿಗೆ ಸಹಕರಿಸಿದಲ್ಲಿ ಕಾರ್ಯಾಚರಣೆಗೆ ಸಹಕಾರಿ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications