ನೀರಿಗಾಗಿ ಪರಿತಪಿಸುತ್ತಿದ್ದಾರೆ ಮೈಸೂರು ವಿವಿ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೈಸೂರು, ಏಪ್ರಿಲ್ 04: ಈ ಬಾರಿ ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನದಿಗಳೆಲ್ಲಾ ಬರಿದಾಗಿವೆ. ಎಲ್ಲೆಡೆ ನೀರಿನ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ಮೈಸೂರು ವಿವಿಯು ಹೊರತಾಗಿಲ್ಲ. ಹೌದು, ಮೈಸೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯರು ಬಟ್ಟೆ ತೊಳೆಯುವುದಿರಲಿ, ಸ್ನಾನಕ್ಕೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಸಮಸ್ಯೆ ಆರಂಭವಾಗಿ ಹೆಚ್ಚು ಕಡಿಮೆ ಮೂರು ತಿಂಗಳು ಕಳೆದಿವೆ. ಆದರೂ ನೀರಿಗೆ ಪರದಾಡುವುದು ತಪ್ಪಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಸೋಮವಾರ ರಾತ್ರೋರಾತ್ರಿ ಹಾಸ್ಟೆಲ್ ಆವರಣದಲ್ಲಿ ಪ್ರತಿಭಟನೆ ನಡೆಸಿ, ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.
ವಿದ್ಯಾರ್ಥಿನಿಯರು ಹೇಳುವ ಪ್ರಕಾರ ಹಾಸ್ಟೆಲ್ ಆವರಣದಲ್ಲಿರುವ ಬೋರ್ ವೆಲ್ ಗಳಲ್ಲಿ ನೀರಿಲ್ಲ. ಬತ್ತಿ ಹೋಗಿದೆ. ಇದರಿಂದ ನೀರು ಟ್ಯಾಂಕರ್ ಗಳಲ್ಲಿ ಪೂರೈಕೆಯಾಗುತ್ತಿದೆ. ಅದು ವಾರಕ್ಕೆ ಒಂದು ಬಾರಿ ಮಾತ್ರ. ಈ ನೀರಿಗಾಗಿ ವಿದ್ಯಾರ್ಥಿನಿಯರು ಕ್ಯೂ ಹಚ್ಚಿ ನಿಲ್ಲಬೇಕಿದೆ. ಆದರೆ ಈ ನೀರು ಯಾವುದಕ್ಕೂ ಸಾಲುತ್ತಿಲ್ಲ. ಇದರಿಂದ ರೋಸತ್ತಿ ಹೋದ ವಿದ್ಯಾರ್ಥಿನಿಯರು ತಡರಾತ್ರಿ ಪ್ರತಿಭಟನೆ ನಡೆಸಿರುವುದು ತಿಳಿದು ಬಂದಿದೆ.

ಹಾಸ್ಟೆಲ್ ನಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಬಗ್ಗೆ ಮಾತನಾಡಿರುವ ಉಪಕುಲಪತಿ ಜಿ.ಹೇಮಂತ ಕುಮಾರ್, ನಗರದಲ್ಲಿ ನೀರಿನ ಕೊರತೆಯಿದೆ. ಜೊತೆಗೆ ಕ್ಯಾಂಪಸ್ ನಲ್ಲಿರುವ ಕೆಲವು ಬೋರ್ ವೆಲ್ ಗಳು ಬತ್ತಿ ಹೋಗಿವೆ. ಈ ಸಮಸ್ಯೆಯ ಕುರಿತು ನಾವು ಮೈಸೂರು ನಗರ ಪಾಲಿಕೆಯವರೊಂದಿಗೆ ಮಾತನಾಡಿದ್ದೇವೆ. ಆದರೆ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ನಮ್ಮ ಬೇಡಿಕೆ ಈಡೇರುವುದು ಸ್ವಲ್ಪ ತಡವಾಗಬಹುದು. ಆದ್ದರಿಂದ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರ ಬಳಿ ತೆರಳಿ ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ವಾರ್ಡನ್ ವಸಂತಿ, ಪವರ್ ಕಟ್ ನಂತಹ ಸಮಸ್ಯೆಯಿಂದಾಗಿ ನೀರಿನ ಸಮಸ್ಯೆ ಮತ್ತಷ್ಟು ತಲೆದೋರಿದೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸುತ್ತೇವೆ. ಅದು ಬಿಟ್ಟರೆ ಹಾಸ್ಟೆಲ್ ನಲ್ಲಿ ಮತ್ಯಾವ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕ್ಯಾಂಪಸ್ ಆವರಣದಲ್ಲಿ 40 ಬೋರ್ ವೆಲ್ ಗಳಿದ್ದು, ಅದರಲ್ಲಿ 10 ಬತ್ತಿಹೋಗಿವೆ. ಇಲ್ಲಿರುವ 65 ವಿಭಾಗಗಳ ಮೂರು ಸಾವಿರ ವಿದ್ಯಾರ್ಥಿನಿಯರಿಗೆ ಈ ಬೋರ್ ವೆಲ್ ಗಳೇ ಆಧಾರಸ್ತಂಭ. ಹೀಗೆ ನೀರಿನ ಸಮಸ್ಯೆ ಉಂಟಾಗುವುದರಿಂದ ಬಟ್ಟೆ, ಸ್ನಾನದ ಜೊತೆಗೆ ಶುಚಿತ್ವ ಕಾಪಾಡಲು ಸಾಧ್ಯವಾಗುವುದಿಲ್ಲ ಎಂಬುದು ವಿದ್ಯಾರ್ಥಿನಿಯರ ಅಳಲು.












Click it and Unblock the Notifications