25ಕ್ಕೂ ಹೆಚ್ಚು ದೇಶಗಳ ಚುನಾವಣೆಯಲ್ಲಿ ಮೈಸೂರಿನ ಶಾಯಿ! ಇಲ್ಲಿದೆ ಮೈಲ್ಯಾಕ್ ಸಂಸ್ಥೆಯ ಸಂಪೂರ್ಣ ವಿವರ
ಮೈಸೂರು, ಏಪ್ರಿಲ್ 28:ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಕೂಡ ಚುನಾವಣೆಗಳು ನಡೆದಾಗಲೆಲ್ಲಾ ಮೈಸೂರಿನಲ್ಲಿರುವ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್)ಯಲ್ಲಿ ಬಿಡುವಿಲ್ಲದ ಕೆಲಸ ಶುರುವಾಗುತ್ತದೆ ಇದಕ್ಕೆ ಕಾರಣವೂ ಇದೆ.
1962ರ ನಂತರ ಭಾರತದಲ್ಲಿ ಚುನಾವಣೆಯಲ್ಲಿ ಅಕ್ರಮ ತಡೆಯುವ ಸಲುವಾಗಿ ಕೈ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚುವುದನ್ನು ಜಾರಿಗೆ ತರಲಾಯಿತಲ್ಲದೆ, ಶಾಯಿಯನ್ನು ತಯಾರಿಸಿ ಪೂರೈಸುವ ಜವಬ್ದಾರಿಯನ್ನು ಮೈಸೂರಿನ ಮೈಲ್ಯಾಕ್‌ಗೆ ವಹಿಸಲಾಯಿತು. ಅಲ್ಲಿಂದ ಇಲ್ಲಿವರೆಗೆ ಎಲ್ಲಿಯೇ ಚುನಾವಣೆಗಳು ನಡೆಯಲಿ ಮೈಲ್ಯಾಕ್ ನಿಂದಲೇ ಶಾಯಿ ಪೂರೈಕೆಯಾಗುತ್ತದೆ.

ಸ್ವಾತಂತ್ರ್ಯ ನಂತರ 1951ರಲ್ಲಿ ಚುನಾವಣೆ ಆರಂಭವಾಗಿದ್ದು, ಅಲ್ಲಿಂದ ಇಲ್ಲಿವರೆಗೆ ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ರೀತಿಯ ಸುಧಾರಣೆಗಳನ್ನು ಮಾಡಲಾಗಿದೆ. ಬ್ಯಾಲೆಟ್ ಪೇಪರ್ ಹೋಗಿ ಇವಿಎಂ ಬಂದಿದೆ. ಆದರೆ ಅವತ್ತಿನಿಂದ ಶಾಯಿ ಮಾತ್ರ ಮೈಲಾಕ್ ನಿಂದಲೇ ಸರಬರಾಜಾಗುತ್ತಿದೆ. ಇದಕ್ಕೆ ಕಾರಣ ಶಾಯಿಯ ಗುಣಮಟ್ಟ ಉಳಿಸಿ ಕಾಪಾಡಿಕೊಂಡಿರುವುದೇ ಆಗಿದೆ.
ಬೇರೆಡೆಗಳಲ್ಲಿ ಚುನಾವಣೆ ನಡೆದಾಗಲೇ ಮೈಲಾಕ್ ಬಿಡುವಿಲ್ಲದ ಕೆಲಸ ಮಾಡುತ್ತದೆ. ಇನ್ನು ರಾಜ್ಯದಲ್ಲಿಯೇ ಚುನಾವಣೆ ನಡೆಯುತ್ತದೆ ಎಂದರೆ ಹೇಗಿರಬೇಡ? ಅತ್ತ ರಾಜ್ಯದಲ್ಲಿ ಚುನಾವಣೆಯ ಭರಾಟೆ ಶುರುವಾಗಿದೆ. ರಾಜಕೀಯ ಪಕ್ಷಗಳು ಸೋಲುಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಚುನಾವಣಾ ಆಯೋಗ ಚುನಾವಣೆ ಶಾಂತಿಯುತವಾಗಿ, ಯಶಸ್ವಿಯಾಗಿ ನಡೆಸಲು ಬೇಕಾದ ಸಿದ್ಧತೆಯತ್ತ ಗಮನಹರಿಸಿದ್ದು, ಚುನಾವಣೆಯಲ್ಲಿ ಮತದಾರರ ಬೆರಳುಗಳಿಗೆ ಹಚ್ಚಲು ಬೇಕಾಗುವ ಶಾಯಿಯನ್ನು ತಯಾರಿಸಿಕೊಡುವಂತೆ ಮೈಲಾಕ್ ಗೆ ಸೂಚಿಸಲಾಗಿದ್ದು, ಅದರಂತೆ ಶಾಯಿಯ ತಯಾರಿ ಭರದಿಂದ ಸಾಗುತ್ತಿದೆ.

1937ರಲ್ಲಿ ಸ್ಥಾಪನೆಯಾದ ಮೈಲಾಕ್
ಹಿಂದಿನ ಕಾಲದಲ್ಲಿ ಚುನಾವಣೆ ವಿಚಾರದಲ್ಲಿ ಈಗಿನಷ್ಟು ತಾಂತ್ರಿಕತೆ ಇರಲಿಲ್ಲ. ಮತದಾನಕ್ಕೆ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಗುತ್ತಿತ್ತು. ಈ ವೇಳೆ ಒಬ್ಬ ಮತದಾರ ಬೇರೆಯವರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಮತಹಾಕುವ ಮೂಲಕ ಅಕ್ರಮ ಎಸಗುವ ಸಾಧ್ಯತೆಯಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿ 1962ರಲ್ಲಿ ಬೆರಳಿಗೆ ಮತಹಾಕಿದ ಗುರುತಿಗಾಗಿ ಶಾಯಿನ್ನು ಹಚ್ಚುವುದು ಆರಂಭವಾಯಿತು. ಅವತ್ತು ಶಾಯಿ ತಯಾರಿಕೆಯ ಜವಬ್ದಾರಿಯನ್ನು ಮೈಸೂರಿನಲ್ಲಿ ಸ್ಥಾಪನೆಯಾಗಿದ್ದ ಮೈಲ್ಯಾಕ್ ಗೆ ವಹಿಸಲಾಯಿತು.
ಆದಾಗಲೇ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್) ದೇಶದಲ್ಲಿ ಒಳ್ಳೆಯ ಹೆಸರನ್ನು ಮಾಡಿತ್ತು. ಕಾರ್ಖಾನೆಯನ್ನು ಮೈಸೂರಿನ ಮಹರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ 1937ರಲ್ಲಿ ಸ್ಥಾಪಿಸಿದ್ದರು. ಆಗ ಕಾರ್ಖಾನೆಯಲ್ಲಿ ಬಣ್ಣಗಳನ್ನು ತಯಾರಾಗುತ್ತಿತ್ತು. ಸ್ವಾತಂತ್ರ್ಯ ನಂತರ ಈ ಕಾರ್ಖಾನೆ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡಿಸಲಾಗಿತ್ತು. ಹೀಗಾಗಿ ಚುನಾವಣಾ ಆಯೋಗ ಅಳಿಸಲಾಗದ ಶಾಯಿ ತಯಾರಿಸಲು ಮೈಲಾಕ್ ಗೆ ಆದೇಶಿಸಿತ್ತು. ಅದರಂತೆ ಅಳಿಸಲಾಗದ ಶಾಯಿ ತಯಾರಿಸುವ ಕೆಲಸ ಶುರು ಮಾಡಿದ್ದು ಅಲ್ಲಿಂದ ಇಲ್ಲಿವರೆಗೆ ಅದು ನಡೆಯುತ್ತಾ ಬಂದಿದೆ.

ದೀರ್ಘಕಾಲ ಉಳಿಯುವ ಶಾಯಿ
ಇನ್ನು 1951, 57ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ ಇದರಲ್ಲಿ ಒಬ್ಬರೆ ಹಲವು ಬಾರಿ ಮತ ಚಲಾಯಿಸಿದ ಆರೋಪ ಕೇಳಿ ಬಂದಿತ್ತು. ಆದರೆ 1962ರ ಹೊತ್ತಿಗೆ ಅಳಿಸಲಾಗದ ಶಾಯಿಯನ್ನು ಮತದಾನ ಮಾಡಿದ ಮತದಾರನ ಬೆರಳಿಗೆ ಬಳಿಯುವ ಮೂಲಕ ಚುನಾವಣೆಯಲ್ಲಿನ ಅಕ್ರಮ ತಡೆಗೆ ಮುಂದಾಯಿತು. ಅಲ್ಲಿಂದ ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯ ಅದೃಷ್ಟದ ಬಾಗಿಲು ತಟ್ಟಿತು.
ಶಾಯಿ ಉತ್ಪಾದನೆ ಆರಂಭಿಸಿದಂದಿನಿಂದ ಇಂದಿನವರೆಗೂ ಕಾರ್ಖಾನೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.
ಈಗಲೂ ಈ ಕಪ್ಪು ಶಾಯಿ ಉತ್ಕೃಷ್ಟ ಗುಣಮಟ್ಟದಲ್ಲಿ ತಯಾರಾಗುತ್ತಿದ್ದು, ಈ ಶಾಯಿ ಕನಿಷ್ಠ 48 ಗಂಟೆಗಳಿಂದ 30 ದಿನಗಳವರೆಗೆ ಅಚ್ಚಳಿಯದೇ ಉಳಿಯುತ್ತದೆ. ಇದು ವ್ಯಕ್ತಿಯ ಆರೋಗ್ಯಕ್ಕೆ ಹಾನಿಕರವಲ್ಲ ಎಂದು ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ದೃಢಪಡಿಸಿದೆ. ಜೊತೆಗೆ ದಕ್ಷಿಣ ಆಫ್ರಿಕಾ, ನೇಪಾಳ, ಟರ್ಕಿ, ಭೂತಾನ್ ಸೇರಿದಂತೆ 25ಕ್ಕೂ ಹೆಚ್ಚು ದೇಶಗಳ ಚುನಾವಣೆಯಲ್ಲಿಯೂ ಮೈಲಾಕ್ ಶಾಯಿ ಬಳಕೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ.
ಬಾಟಲಿ ಬದಲಿಗೆ ಮಾರ್ಕರ್ ಪೆನ್ನು
ಈ ಬಾರಿ ಚುನಾವಣಾ ಆಯೋಗದ ಆದೇಶದಂತೆ ಸುಮಾರು 1.30 ಲಕ್ಷ ಬಾಟಲ್ ಅಳಿಸಲಾಗದ ಶಾಯಿ ತಯಾರಿಸಲಾಗಿದೆ ಎನ್ನಲಾಗಿದ್ದು, ಈ ಶಾಯಿಯನ್ನು ಪಾರದರ್ಶಕ ಮತದಾನಕ್ಕಾಗಿ ಕೈ ಬೆರಳಿಗೆ ಹಾಕಲಾಗುತ್ತದೆ. ಇದರ ಜೊತೆಗೆ 3,90,000 ಅರಗು ಸ್ಟಿಕ್ ಮತ್ತು, 10 ಮಿ.ಲೀ ಹಾಗೂ 5 ಮಿ.ಲೀ ಅಳಿಸಲಾಗದ ಶಾಯಿ ಬಾಟಲ್ ತಯಾರಿಕೆಗೆ ಸೂಚಿಸಲಾಗಿದೆ.
ಈ 10 ಮಿ.ಲೀ ಬಾಟಲಿನ ಶಾಯಿಯನ್ನು 600 ಜನಕ್ಕೆ ಹಾಕಬಹುದಾಗಿದೆ. ಮೊದಲೆಲ್ಲ ಮತದಾರರ ಬೆರಳುಗಳಿಗೆ ಹಚ್ಚಲು ಶಾಯಿಯನ್ನು ತಯಾರಿಸಿ ಡಬ್ಬದಲ್ಲಿ ಶೇಖರಿಸಿಡಲಾಗುತ್ತಿತ್ತು. ಈಗ ಇನ್ನಷ್ಟು ಅಭಿವೃದ್ಧಿಯಾಗಿದ್ದು, ಶಾಯಿ ಬಾಟಲಿ ಮಾತ್ರವಲ್ಲದೆ ಶಾಯಿ ತುಂಬಿದ ಮಾರ್ಕರ್ ಪೆನ್ನುಗಳನ್ನು ತಯಾರಿಸಲಾಗುತ್ತಿರುವುದು ವಿಶೇಷವಾಗಿದೆ.












Click it and Unblock the Notifications