ದಸರಾ ಆನೆಗಳಿಗೆ ಬರೋಬ್ಬರಿ 98 ಲಕ್ಷದ ವಿಮೆ !
ಮೈಸೂರು, ಆಗಸ್ಟ್ 27 : ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲಾ 14 ಆನೆಗಳಿಗೂ ಜಿಲ್ಲಾಡಳಿತದಿಂದ 98 ಲಕ್ಷ ಮೊತ್ತದ ವಿಮೆ ಮಾಡಿಸಲಾಗಿದ್ದು, ಇದೇ ಅಕ್ಟೋಬರ್ 15ರ ವರೆಗೆ ವಿಮಾ ಅವಧಿ ಇರಲಿದೆ.
ಕಳೆದ ಕೆಲವು ವರ್ಷಗಳಿಂದ ದಸರಾ ಆನೆಗಳಿಗೆ ವಿಮೆ ಮಾಡಿಸುತ್ತಿದ್ದು, ಯಾವುದಾದರೂ ಅನಾಹುತ ಸಂಭವಿಸಿದಲ್ಲಿ ಪರಿಹಾರಕ್ಕೆ ವಿಮೆಯನ್ನು ಅವಲಂಬಿಸಲಾಗಿದೆ. ನ್ಯೂ ಇಂಡಿಯಾ ಕಂಪೆನಿ ದಸರೆಯ 14 ಆನೆಗಳಿಗೆ ನೀಡಿದ ಕೊಟೇಷನ್ ಗೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, ವಿಮೆ ಜಾರಿಯಾಗಿದೆ.

ಗಜಪಡೆಯ 14 ಆನೆಗಳ ಹೆಸರಿನಲ್ಲಿ 40 ಲಕ್ಷ ವಿಮೆ ಮಾಡಲಾಗಿದ್ದು, 44, 840 ರೂ. ಪ್ರೀಮಿಯಂ ಕಟ್ಟಲಾಗಿದೆ. ಈ ಆನೆಗಳು, ಹಾಗೆಯೇ 14 ಮಾವುತರು, 14 ಕಾವಾಡಿಗಳು ಒಳಗೊಂಡಂತೆ 28 ಜನರ ಹೆಸರಿನಲ್ಲಿ ತಲಾ 1 ಲಕ್ಷ ರೂ. ನಂತೆ 28 ಲಕ್ಷ ಆರೋಗ್ಯ ವಿಮೆ ಮಾಡಿಸಿದ್ದು, 720 ರೂ. ಪ್ರೀಮಿಯಂ ಮೊತ್ತ ಪಾವತಿಸಲಾಗಿದೆ.
ಆನೆಯಿಂದ ಸಾರ್ವಜನಿಕರಿಗೆ ಹಾಗೂ ಆಸ್ತಿಪಾಸ್ತಿಗೆ ತೊಂದರೆಯಾದರೆ ಪರಿಹಾರ ನೀಡುವ 3,540 ರೂ. ಪ್ರೀಮಿಯಂ ಮೊತ್ತ ಪಾವತಿಸಿ, 30 ಲಕ್ಷ ವಿಮೆ ಮಾಡಲಾಗಿದೆ. ಒಟ್ಟು 4,910 ಪ್ರೀಮಿಯಂ ಮೊತ್ತ ಪಾವತಿಸಿ, 98 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಅಲ್ಲದೆ ಆಕಸ್ಮಿಕ ಘಟನೆ ನಡೆದರೆ ಮೂರು ದಿನದೊಳಗೆ ಕ್ಲೇಮ್ ಸೆಟಲ್ ಮಾಡುವಂತೆ ಷರತ್ತು ವಿಧಿಸಿದೆ. ಇದಕ್ಕೆ ವಿಮೆ ಮಾಡಿರುವ ಕಂಪನಿ ಸಹ ಒಪ್ಪಿಗೆ ಸೂಚಿಸಿದೆ.












Click it and Unblock the Notifications