ಮೈಸೂರು ದಸರಾ ಸ್ತಬ್ಧಚಿತ್ರ ಆಯ್ಕೆಗೆ ಸ್ಪರ್ಧೆಯಲ್ಲಿ ನೀವು ಪಾಲ್ಗೊಳ್ಳಿ: ಇಲ್ಲಿದೆ ಸಂಪೂರ್ಣ ವಿವರ
ಮೈಸೂರು, ಸೆಪ್ಟೆಂಬರ್ 06: ಐತಿಹಾಸಿಕ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆಯ ಜಂಬೂಸವಾರಿ ಪ್ರಮುಖ ಆಕರ್ಷಣೆಯಾಗಿದ್ದು, ಇದಕ್ಕೆ ಸ್ತಬ್ದ ಚಿತ್ರಗಳು ಮೆರಗು ನೀಡುತ್ತವೆ. ರಾಜ್ಯದ ಎಲ್ಲ ಜಿಲ್ಲೆಗಳು ತಮ್ಮ ಕಲೆ ಸಂಸ್ಕೃತಿಯನ್ನು ಬಿಂಬಿಸುವ ವಿಶೇಷತೆಯನ್ನು ಸ್ತಬ್ದ ಚಿತ್ರಗಳ ಮೂಲಕ ನೋಡುಗರ ಮುಂದೆ ತೆರೆದಿಡುತ್ತದೆ. ಸ್ತಬ್ದ ಚಿತ್ರಗಳನ್ನು ತಯಾರಿಯಲ್ಲಿ ಪರಿಣಿತರಾಗಿರುವವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಈ ಬಾರಿ ಸ್ತಬ್ದ ಚಿತ್ರವನ್ನು ಸುಂದರವಾಗಿ, ಕಲಾತ್ಮಕವಾಗಿ ರೂಪಿಸಲು ಸ್ತಬ್ಧಚಿತ್ರ ಉಪಸಮಿತಿ ಚಿಂತನೆ ಮಾಡಿದ್ದು ಅದರಂತೆ ಮೈಸೂರು ದಸರಾದಲ್ಲಿ ಭಾರತದ ಸೃಜನಾತ್ಮಕ ನಾಗರೀಕರನ್ನು ನಾವೀನ್ಯತೆ ಮತ್ತು ಭವಿಷ್ಯಾತ್ಮಕ ಕಲ್ಪನೆಯುಳ್ಳ ಕಿರು ಸ್ತಬ್ಧಚಿತ್ರ ತಯಾರಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಹೀಗಾಗಿ ಆಸಕ್ತಿಯುಳ್ಳವರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.

ಸ್ತಬ್ದ ಚಿತ್ರ ತಯಾರಿಯು ಸಾಂಸ್ಕೃತಿಕವಾಗಿ ಶ್ರೀಮಂತವಾದ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುವಂತಿರಬೇಕು. ಈ ಸ್ತಬ್ಧಚಿತ್ರಗಳ ವಿನ್ಯಾಸಗಳು ಸಾರ್ವಜನಿಕ ಭಾಗೀದಾರಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿರಬೇಕು. ಸ್ತಬ್ದ ಚಿತ್ರದ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗುವ ಸ್ತಬ್ದ ಚಿತ್ರವನ್ನು ಅತ್ಯುತ್ತಮ ವಿನ್ಯಾಸವನ್ನು ಪೂರ್ಣಪ್ರಮಾಣದ ಸ್ತಬ್ಧಚಿತ್ರ ಆಗಿ ಪರಿವರ್ತಿಸಲಾಗುವುದು ಅಷ್ಟೇ ಅಲ್ಲದೆ ಅವುಗಳನ್ನು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತದೆ.
ಸ್ಪರ್ಧೆಯಲ್ಲಿ ಹೇಗೆ ಭಾಗವಹಿಸಬಹುದು?
ಇನ್ನು ಸ್ಪರ್ಧೆಯಲ್ಲಿ ಭಾಗವಹಿಸುವವರು ಭಾರತೀಯ ನಾಗರಿಕರಾಗಿದ್ದು, ಸ್ಪರ್ಧೆಗೆ ವೈಯಕ್ತಿಕವಾಗಿ ಅಥವಾ ತಂಡವಾಗಿ (ತಂಡದಲ್ಲಿ ಗರಿಷ್ಟ 4 ಸದಸ್ಯರು) ಪಾಲ್ಗೊಳ್ಳಬಹುದು. ಪ್ರತಿ ಸ್ಪರ್ಧಿ ಅಥವಾ ತಂಡವು ಒಂದು ಪ್ರವೇಶವನ್ನು ಮಾತ್ರ ಸಲ್ಲಿಸಬಹುದಾಗಿದ್ದು, ಸ್ಪರ್ಧಿಗಳು ಸೆಪ್ಟೆಂಬರ್ 13 ರೊಳಗೆ https://forms.gle/Ep9Ab2Ghi2dx8NiKA ನೊಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು.

ಇನ್ನು ಕಿರು ಸ್ತಬ್ದ ಚಿತ್ರಗಳು ಹೇಗಿರಬೇಕೆಂದರೆ, ಕಿರು ಸ್ತಬ್ಧಚಿತ್ರವು ಕರ್ನಾಟಕ ಅಥವಾ ಭಾರತದ ಸಾಂಸ್ಕೃತಿಕ, ಐತಿಹಾಸಿಕ ಅಥವಾ ಸಾಮಾಜಿಕ ಅಂಶಗಳನ್ನು, ಭವಿಷ್ಯಾತ್ಮಕ ಅಂಶಗಳನ್ನು ಒಳಗೊಂಡoತೆ ಪ್ರತಿಬಿಂಬಿಸಬೇಕು. ಸ್ಪರ್ಧೆಗೆ ಸಲ್ಲಿಸುವ ವಿನ್ಯಾಸವು ಮೂಲತಃ ಹೊಸದು ಆಗಿರಬೇಕು ಮತ್ತು ಹಿಂದಿನ ಯಾವುದೇ ಸ್ಪರ್ಧೆಗೆ ಸಲ್ಲಿಸಬಾರದು. ಗರಿಷ್ಟ 60 ಸೆಂಮೀx 60 ಸೆಂಮೀ x 60 ಸೆಂಮೀ. ಆಯಾಮಗಳನ್ನು ಹೊಂದಿರಬೇಕು.
ವಿಜೇತರಿಗೆ, ತಂಡಕ್ಕೆ ಬಹುಮಾನ ಏನಿದೆ?
ಪರಿಸರ ಸ್ನೇಹಿ ಮತ್ತು ನಾವೀನ್ಯ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಕಿರು ಸ್ತಬ್ಧಚಿತ್ರ ಸದೃಢವಾಗಿ ಸ್ವಯಂ ಬೆಂಬಲಿತವಾಗಿಯೂ ಇರಬೇಕು. ಸ್ಪರ್ಧಾ ಕಿರು ಸ್ತಬ್ಧಚಿತ್ರವನ್ನು ಸೆಪ್ಟೆಂಬರ್ 17 ರಂದು ಸಂಜೆ 5 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿಗೆ ಕಡ್ಡಾಯವಾಗಿ ಸ್ವತಃ ಸಲ್ಲಿಸುವುದು. ಸ್ಪರ್ಧಾ ಕಿರು ಸ್ತಬ್ಧಚಿತ್ರದ ಜೊತೆ 300 ಪದಗಳ ಒಳಗಿನ ವಿವರಣೆ (ವಿನ್ಯಾಸದ ಪರಿಕಲ್ಪನೆ, ಭವಿಷ್ಯಾತ್ಮಕ ಅಂಶಗಳು, ಮತ್ತು ಪ್ರೇರಣೆ) ಸಲ್ಲಿಸಬೇಕು.
ವಿಜೇತ ವ್ಯಕ್ತಿ ಅಥವಾ ತಂಡಕ್ಕೆ ಪ್ರಥಮ ಬಹುಮಾನವಾಗಿ 25,000 ಮತ್ತು ವಿಜೇತ ವಿನ್ಯಾಸವು ಮೈಸೂರು ದಸರಾದ ಸಂಪೂರ್ಣ ಪ್ರಮಾಣದ ಸ್ತಬ್ಧಚಿತ್ರ ಆಗಿ ಪರಿವರ್ತಿಸಲ್ಪಡುತ್ತದೆ. ದ್ವಿತೀಯ ಬಹುಮಾನ ರೂ. 15,000, ತೃತೀಯ ಬಹುಮಾನ ರೂ.10,000 ಹಾಗೂ ಆಯ್ಕೆಯಾದ ಎಲ್ಲ ಸ್ಪರ್ಧಿಗಳಿಗೆ ಪಾಲ್ಗೊಳ್ಳುವ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಅತ್ಯುತ್ತಮ 10 ಕಿರು ಸ್ತಬ್ಧಚಿತ್ರಗಳನ್ನು ದಸರಾ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.
ಈ ಸಂಬಂಧ ಹೆಚ್ಚಿನ ಮಾಹಿತಿ ಬೇಕಾದರೆ ಚೇತನ್ ಕುಮಾರ್.ಎಂ ಅವರ ದೂ.ಸಂ: 8296536692 ಅಥವಾ ಯಶವಂತ್.ಎo ಅವರ ದೂ.ಸಂ: 9738405358 ಅನ್ನು ಸಂಪರ್ಕಿಸಬಹುದು ಎಂದು ದಸರಾ ಸ್ತಬ್ಧಚಿತ್ರ ಉಪಸಮಿತಿಯ ಉಪ ವಿಶೇಷಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications